Advertisement

ಸಚಿನ್‌ ಗುರುತಿಸಿದ ಟಾಪ್‌-5 ಆಲ್‌ರೌಂಡರ್

08:10 PM Apr 26, 2020 | Sriram |

ಮುಂಬಯಿ: ಶುಕ್ರವಾರವಷ್ಟೇ ತಮ್ಮ 47ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡ ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌, ತಾನು ಕಂಡ ಜಾಗತಿಕ ಕ್ರಿಕೆಟಿನ ಅಗ್ರ ಐವರು ಶ್ರೇಷ್ಠ ಆಲ್‌ರೌಂಡರ್‌ಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇವರಲ್ಲಿ ಭಾರತಕ್ಕೆ ಮೊದಲ ಸಲ ವಿಶ್ವಕಪ್‌ ಕಿರೀಟ ತೊಡಿಸಿದ ಕಪಿಲ್‌ದೇವ್‌ ಕೂಡ ಸೇರಿದ್ದಾರೆ.

Advertisement

ಅದೇ ರೀತಿ ಪಾಕಿಸ್ಥಾನದ ವಿಶ್ವಕಪ್‌ ವಿಜೇತ ತಂಡದ ಕಪ್ತಾನ ಇಮ್ರಾನ್‌ ಖಾನ್‌ ಕೂಡ ಸಚಿನ್‌ ಯಾದಿಯನ್ನು ಅಲಂಕರಿಸಿದ್ದಾರೆ. ಅವರು ಗುರುತಿಸಿದ ಉಳಿದ ಮೂರು ಮಂದಿ ಶ್ರೇಷ್ಠ ಸವ್ಯಸಾಚಿಗಳೆಂದರೆ ನ್ಯೂಜಿಲ್ಯಾಂಡಿನ ರಿಚರ್ಡ್‌ ಹ್ಯಾಡ್ಲಿ, ವೆಸ್ಟ್‌ ಇಂಡೀಸಿನ ಮಾಲ್ಕಂ ಮಾರ್ಷಲ್‌ ಮತ್ತು ಇಂಗ್ಲೆಂಡಿನ ಇಯಾನ್‌ ಬೋಥಂ. ಈ ಐವರೂ ಸಮಕಾಲೀನ ಕ್ರಿಕೆಟಿಗರಾಗಿದ್ದರೆಂಬುದು ವಿಶೇಷ. ಇವರ ಆಟವನ್ನು ಕಾಣುತ್ತಲೇ ತಾನು ಕ್ರಿಕೆಟ್‌ನಲ್ಲಿ ಮೇಲೇರತೊಡಗಿದೆ ಎಂದು ತೆಂಡುಲ್ಕರ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಪೂರ್ವ ಅವಕಾಶ
“ಇವರಲ್ಲಿ ನಾನು ಕಪಿಲ್‌ದೇವ್‌ ಜತೆ ಆಡುವ ಅವಕಾಶ ಪಡೆದರೆ, 1989ರ ಮೊದಲ ಪಾಕಿಸ್ಥಾನ ಪ್ರವಾಸದ ವೇಳೆ ಇಮ್ರಾನ್‌ ಖಾನ್‌ ದಾಳಿಯನ್ನು ಎದುರಿಸಿದೆ. ಬಳಿಕ ನ್ಯೂಜಿಲ್ಯಾಂಡಿಗೆ ಎರಡನೇ ಸಲ ಪ್ರವಾಸಗೈದಾಗ ಹ್ಯಾಡ್ಲಿ ವಿರುದ್ಧ ಆಡಿದೆ. ಆಸ್ಟ್ರೇಲಿಯದಲ್ಲಿ ಮಾರ್ಷಲ್‌ ಮತ್ತು ಬೋಥಂ ಬೌಲಿಂಗ್‌ ಎದುರಿಸುವ ಅವಕಾಶ ಸಿಕ್ಕಿತು’ ಎಂಬುದಾಗಿ ತೆಂಡುಲ್ಕರ್‌ ಹೇಳಿದ್ದಾರೆ.

“ಈ ಐದು ಮಂದಿ ನನ್ನ ಪಾಲಿನ ಸರ್ವಶ್ರೇಷ್ಠ ಆಲ್‌ರೌಂಡರ್‌ಗಳು. ಇವರ ಆಟವನ್ನು ವೀಕ್ಷಿಸುತ್ತಲೇ ಇದ್ದ ನನಗೆ, ಬಳಿಕ ಇವರ ವಿರುದ್ಧವೇ ಆಡುವ ಅವಕಾಶ ಸಿಕ್ಕಿತು’ ಎಂದು ಸಚಿನ್‌ ಖುಷಿಯಿಂದ ಹೇಳಿಕೊಂಡಿದ್ದಾರೆ.

ಸಚಿನ್‌ ಶ್ರೇಷ್ಠ ಇನ್ನಿಂಗ್ಸ್‌
ಇದೇ ವೇಳೆ ಸಚಿನ್‌ ತೆಂಡುಲ್ಕರ್‌ ಜನ್ಮದಿನದ ಪ್ರಯುಕ್ತ, ಇವರ ಅತ್ಯುತ್ತಮ ಇನ್ನಿಂಗ್ಸ್‌ ಯಾವುದು ಎಂಬ ಕುರಿತು ಐಸಿಸಿ ಸಮೀಕ್ಷೆಯೊಂದನ್ನು ನಡೆಸಿತ್ತು. ಇದರ ಫಲಿತಾಂಶವೀಗ ಲಭ್ಯವಾಗಿದೆ. ಶಾರ್ಜಾದಲ್ಲಿ ನಡೆದ, ಆಸ್ಟ್ರೇಲಿಯ ವಿರುದ್ಧದ 1998ರ ಕೋಕಾಕೋಲ ಕಪ್‌ ಪಂದ್ಯದ ಶತಕಕ್ಕೆ ಈ ಗೌರವ ಲಭಿಸಿದೆ.

Advertisement

ಅಂದು ವಾರ್ನ್, ಫ್ಲೆಮಿಂಗ್‌, ಕ್ಯಾಸ್ಟ್ರೋವಿಚ್‌ ಅವರ ದಾಳಿಯನ್ನು ಧೂಳೀಪಟ ಮಾಡಿದ ಮಾಸ್ಟರ್‌ ಬ್ಲಾಸ್ಟರ್‌ 131 ಎಸೆತಗಳಿಂದ 143 ರನ್‌ ಸಿಡಿಸಿದ್ದರು (9 ಬೌಂಡರಿ, 5 ಸಿಕ್ಸರ್‌). ಆದರೆ ಮರುಳು ಗಾಳಿಯಿಂದಾಗಿ ಭಾರತ ಈ ಪಂದ್ಯದಲ್ಲಿ ಸೋಲು ಕಾಣಬೇಕಾಯಿತು.

2003ರ ವಿಶ್ವಕಪ್‌ ಕೂಟದಲ್ಲಿ ಪಾಕಿಸ್ಥಾನ ವಿರುದ್ಧ ಬಾರಿಸಿದ 98 ರನ್ನುಗಳ ಇನ್ನಿಂಗ್ಸ್‌ಗೆ ಈ ಸಮೀಕ್ಷೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next