Advertisement
ಭಾರತ, ನೇಪಾಳ, ಭೂತಾನ್ ದೇಶಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿಗಳ ಬಗ್ಗೆ ಅಧ್ಯಯನಕ್ಕಾಗಿ ಜು. 27ರಂದು ಕಾಪುವಿನಿಂದ ಹೊರಟ ಈ ಇಬ್ಬರು ಸ್ನೇಹಿತರು ಮಹಾರಾಷ್ಟ್ರದ ಸತಾರಾ ಮೂಲಕ ಮುಂಬಯಿ ತಲುಪಿದರು. ಆ ಬಳಿಕ ಮಧ್ಯಪ್ರದೇಶದ ಇಂದೋರ್, ಉತ್ತರ ಪ್ರದೇಶದ ಜಾನ್ಸಿ, ಲಕ್ನೌ , ನೇಪಾಳದ ಸನೌಲಿ, ಕಾಠ್ಮಂಡು, ಭೂತಾನ್‌ನ ತಿಂಪು, ಅಸ್ಸಾಂನ ಗುವಾಹಟಿ, ನಾಗಲ್ಯಾಂಡ್‌ನ ಕೊಹಿಮಾ, ಮಣಿಪುರದ ಇಂಫಾಲ್, ಮೇಘಾಲಯದ ಶಿಲ್ಲಾಂಗ್, ಪಶ್ಚಿಮ ಬಂಗಾಲದ ಸಿಲಿಗುರಿ, ಕೋಲ್ಕತ್ತಾ, ಒಡಿಶಾದ ಪುರಿ, ಆಂಧ್ರಪ್ರದೇಶದ ವಿಶಾಖ ಪಟ್ಟಣ, ವಿಜಯವಾಡ, ರಾಜ್ಯದ ಬೆಂಗಳೂರು ಮುಖಾಂತರ ರವಿವಾರ ಮಂಗಳೂರು ತಲುಪಿದ್ದಾರೆ.
ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ಅವರು ಪ್ರತೀ ದಿನ ಬೆಳಗ್ಗೆ 6 ಗಂಟೆಗೆ ತಮ್ಮ ರೈಡ್ ಪ್ರಾರಂಭಿಸಿ, ರಾತ್ರಿ 12 ಗಂಟೆವರೆಗೂ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಕೆಲವೊಂದು ಬಾರಿ ದಿನಕ್ಕೆ 500 ಕಿ.ಮೀ.ಗೂ ಹೆಚ್ಚು ರೈಡ್ ಮಾಡಿದ್ದಿದೆಯಂತೆ. ತಮ್ಮ ಮೊಬೈಲ್ ಚಾರ್ಜಿಂಗ್‌ಗೆ, ಬ್ಯಾಗ್ ಇಡಲು ವ್ಯವಸ್ಥೆ ಮುಂತಾದ ಎಲ್ಲ ಸೌಕರ್ಯಗಳನ್ನೂ ತಮ್ಮ ಬೈಕ್ ಗಳಲ್ಲಿಯೇ ಮಾಡಿಕೊಂಡಿದ್ದರು. ಸಚಿನ್ ಶೆಟ್ಟಿ ಅವರು ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಅಭಿಷೇಕ್ ಅವರು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಗಳಲ್ಲಿ ತಮ್ಮ ಪ್ರಯಾಣ ಪ್ರಾರಂಭಿಸಿ ಒಟ್ಟಾರೆ 13,560 ಕಿ.ಮೀ. ದೂರ ಕ್ರಮಿಸುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ. ಸಚಿನ್ ಶೆಟ್ಟಿ ಅವರು ಸಾಕ್ಷ್ಯಚಿತ್ರ ನಿರ್ಮಿಸಲು ಕಳೆದ ವರ್ಷ ಏಕಾಂಗಿಯಾಗಿ ವಿವಿಧ ರಾಜ್ಯಗಳ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿ ಬಗ್ಗೆ ಕುರಿತ ಅಧ್ಯಯನ ನಡೆಸಲು ‘ಲೈಟ್ಸ್ ಕೆಮರಾ ಲಡಾಕ್ ಟೂರ್’ ಎಂಬ ಹೆಸರಿನಲ್ಲಿ 11,000 ಕಿ.ಮೀ. ಲಡಾಕ್‌ವರೆಗೆ ಬೈಕ್ ಯಾತ್ರೆ ನಡೆಸಿ ಗಮನಸೆಳೆದಿದ್ದರು.
Related Articles
ಸಚಿನ್ ಶೆಟ್ಟಿ ಅವರು ಅತ್ಯತ್ತಮ ಛಾಯಾಚಿತ್ರಗ್ರಾಹಕರಾಗಿದ್ದು, ಸೌತ್‌ಕೆನರಾ ಫೋಟೊ ಗ್ರಾಫರ್ ಅಸೋಶಿಯೇಶನ್‌ನ ಕಾಪು ವಲಯದ ಸಕ್ರಿಯ ಸದಸ್ಯರಾಗಿದ್ದಾರೆ. ಕನ್ನಡ ಹಾಗೂ ತುಳು ಚಲನ ಚಿತ್ರಕ್ಕೂ ಛಾಯಾಚಿತ್ರಗ್ರಹಣ ಮಾಡಿದ್ದು, ಇತ್ತೀಚೆಗೆ ಬಿಡುಗಡೆ ಆದ ‘ಅಮ್ಮೆರ್ ಪೊಲೀಸ್’ ಚಲನಚಿತ್ರದಲ್ಲಿ ಕೆಮರಾಮನ್ ಆಗಿದ್ದರು.
Advertisement
ಮಂಗಳೂರಿನಲ್ಲಿ ಸ್ವಾಗತಸಚಿನ್ ಶೆಟ್ಟಿ ಹಾಗೂ ಅಭಿಷೇಕ್ ಶೆಟ್ಟಿ ಮರಳಿ ತಾಯ್ನಾಡು ಮಂಗಳೂರಿಗೆ ಆಗಮಿಸಿದ ವೇಳೆ ಯುನೈಟೆಡ್ ಬೈಕರ್ಸ್ ಮಂಗಳೂರು ಹಾಗೂ ಸ್ನೇಹಿತರು, ಕುಟುಂಬಸ್ಥರು ನಗರದ ಪಡೀಲ್‌ನ ಅಯ್ಯಪ್ಪ ಮಂದಿರದ ಮುಂಭಾಗದ ಮೋಟೋ ಗ್ಯಾರೇಜ್ ಬಳಿ ಸ್ವಾಗತಿಸಿದರು. ವಿದೇಶಿಗರಿಗೆ ಕರಾವಳಿ ಸಂಸ್ಕೃತಿ ಅರಿವು
ಬೈಕ್ ರೈಡರ್ ಸಚಿನ್ ಶೆಟ್ಟಿ ಅವರು ‘ಸುದಿನ’ ಜತೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ನಮ್ಮ ಜರ್ನಿಯಲ್ಲಿ ಪ್ರತಿಯೊಂದು ಪ್ರದೇಶದಲ್ಲಿಯೂ ಬೇರೆ ಬೇರೆ ಸಂಸ್ಕೃತಿ ಅನಾವರಣವಾಗಿತ್ತು. ಅಲ್ಲಿಯ ಆಹಾರ ಕ್ರಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ವಿಡಿಯೋವನ್ನು ಚಿತ್ರೀಕರಿಸಿ ನಮ್ಮ ಯೂಟ್ಯೂಬ್ ಚಾನೆಲ್‌ಗೆ ಹಾಕುತ್ತಿದ್ದೆವು. ಅಲ್ಲದೆ, ಕರಾವಳಿ ಪ್ರದೇಶದ ಆಹಾರ ಕ್ರಮಗಳು ವಿದೇಶಿಗರು ಸೇರಿದಂತೆ ಬೇರೆ ರಾಜ್ಯದ ಮಂದಿಗೆ ಹೊಸತು. ಅದಕ್ಕೆಂದು ಇಲ್ಲಿನ ಸಂಸ್ಕೃತಿಯನ್ನು ಅವರಿಗೆ ತಿಳಿಯಪಡಿಸುತ್ತಿದ್ದೆವು ಎಂದು ಹೇಳಿದ್ದಾರೆ. ಪ್ರಯಾಣ ವೇಳೆ ಅಪಘಾತವಾಗಿತ್ತು
ತಮ್ಮ ಪಯಣದಲ್ಲಿ ವಿಜಯವಾಡದಿಂದ ವಿಶಾಖಪಟ್ಟಣ ಮಾರ್ಗದ ಮಧ್ಯೆ ರಸ್ತೆ ಇಬ್ಬರಿಗೂ ಬೈಕ್ ಅಪಘಾತವಾಗಿ ಸಣ್ಣಪುಟ್ಟ ಗಾಯಗಳಾಗಿತ್ತು. ಆದರೆ ಕೂಡಲೇ ಹತ್ತಿರ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡ ಬಳಿಕ ಮರು ಪ್ರಯಾಣ ಆರಂಭಿಸಿದ್ದರು.