ಭಾವನೆಗಳ ಅಲೆಗಳಲ್ಲಿ ತೇಲಿಸುವಂತಹ ಹಾಡು, ಚಿಂತನೆಗೆ ಹಚ್ಚುವ ಮಾತು, ಮೂಖವಿಸ್ಮಿತರನ್ನಾಗಿಸುವ ಕುಣಿತ ಮತ್ತು ಅಭಿನಯಗಳನ್ನ ಕಣ್ತುಂಬಿಕೊಂಡ ಸಂದರ್ಭ 30ನೇ ವರ್ಷದ ಗಣೇಶೊತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರು ನಿಡ್ಲೆಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸೆ. 14ರಂದು ಪ್ರಸ್ತುತಪಡಿಸಿದ ಶಬರಿಮಲೆ ಅಯ್ಯಪ್ಪ ಎಂಬ ಪ್ರಸಂಗದ ಪ್ರದರ್ಶನ.
ಕರುಣಾಕರ ಶೆಟ್ಟಿಗಾರ ಅವರ ಇಂಪಾದ ಭಾಗವತಿಕೆ, ಹಿಮ್ಮೇಳದ ವೈಭವವನ್ನು ಇಮ್ಮಡಿಗೊಳಿಸಿದ ಚೆಂಡ ವಾದಕರಾದ ಪಡ್ರೆ ಶ್ರೀಧರ, ಮದ್ದಳೆ ವಾದಕರಾದ ನೇರೋಳು ಗಣಪತಿ ನಾಯಕ್ ಮತ್ತು ಚಕ್ರತಾಳದ ಶಬ್ದವನ್ನು ಝೇಂಕರಿಸಿದ ಕೇಶವ ಇವರುಗಳ ಸಂಗಮ ಉತ್ಸಹದ ಚಿಲುಮೆಯನ್ನು ಚಿಮ್ಮಿಸಿತು.
ನಿಡ್ಲೆ ಗೋವಿಂದ ಭಟ್ಟರು ವಿನೋದಾತ್ಮಕವಾದ ರೀತಿಯಲ್ಲಿ ಹಾಸ್ಯದೊಂದಿಗೆ ವಾವರನ ಪಾತ್ರದಲ್ಲಿ ಮಿಂಚಿದರು. ಅಮ್ಮುಂಜೆ ಮೋಹನ ಮತ್ತು ನವೀನ ಶೆಟ್ಟಿ ಇವರುಗಳು ಅಯ್ಯಪ್ಪನ ಪಾತ್ರ ಪಾತ್ರಕ್ಕೆ ನ್ಯಾಯ ಒದಗಿಸಿದರು. ಕುಂಬ್ಳೆ ಶ್ರೀಧರ ರಾವ್ ಇವರ ಈಶ್ವರನ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ಉಬರಡ್ಕ ಉಮೇಶ್ ಶೆಟ್ಟಿ ಭಸ್ಮಾಸುರನ ಪಾತ್ರದಲ್ಲಿ ತಲ್ಲೀನವಾಗಿ ಅವರ ನಾಟ್ಯ, ಮಾತು, ಅಭಿನಯ ಪ್ರೇಕ್ಷಕರ ಚಪ್ಪಾಳೆಗೆ ಕಾರಣವಾಯಿತು.ಪದ್ಮನಾಭ ಶೆಟ್ಟಿ ಇವರು ವಿಷ್ಣು ಮತ್ತು ಕೇಳು ಪಂಡಿತನಾಗಿ ಮಿಂಚಿದರು. ಉಮಾಮಹೇಶ್ವರ ಭಟ್ಟರ ಕೇತಕಿವರ್ಮ ರಾಜನ ಗಾಂಭೀರ್ಯಕ್ಕೆ ಸಾಕ್ಷಿಯಾಯಿತು. ಪುತ್ತೂರು ಗಂಗಾಧರರ ಮಹಿಷಿ, ಶಿವ ಪ್ರಸಾದ್ ಭಟ್ಟರ ಶಭರಾಸುರ ರಂಜಿಸಿತು. ಕೆದಿಲ ಜಯರಾಮ ಭಟ್ಟರ ಸುಮುಖೀ, ಆನಂದ ಕೊಕ್ಕಡ ಇವರ ಪಾರ್ವತಿಯು ಸ್ತ್ರೀ ಪಾತ್ರದ ಮೆರುಗನ್ನು ಹೆಚ್ಚಿಸಿತು. ಗೌತಮ ಶೆಟ್ಟಿ ಇವರು ಕನಕವರ್ಮ ಪಾತ್ರಕ್ಕೆ ಜೀವ ತುಂಬಿಸಿದರು. ರಾಜೇಶ್ ನಿಟ್ಟೆ ಇವರ ಬಳುಕುವ ವಯ್ನಾರದೊಂದಿಗೆ ಮೋಹಿನಿಯಾಗಿ ಮನ ಸೆಳೆದರು. ಯುವ ಕಲಾವಿದರಾದ ಮುಖೇಶ್ ದೇವಧರ್ ಬೇತಾಳನ ಪಾತ್ರದಲ್ಲಿ ಕಾಣಿಸಿಕೊಂಡರು.
ಕಾವ್ಯಶ್ರೀ ಕೆ. ನಿಡ್ಲೆ