Advertisement

ಶಬರಿಮಲೆಯಲ್ಲಿ ಪ್ರವಾಸಿ ಮಂದಿರ: ಕರ್ನಾಟಕದ ಯೋಜನೆಗೆ ಕೇರಳದ ಅಡ್ಡಿ

03:14 AM Dec 25, 2021 | Team Udayavani |

ಉಡುಪಿ: ಕೇರಳ ಸರಕಾರದ ಷರತ್ತುಗಳ ಕಾರಣದಿಂದ ಶಬರಿಮಲೆಯಲ್ಲಿ ಪ್ರವಾಸಿ ಮಂದಿರ ನಿರ್ಮಿಸುವ ಕರ್ನಾಟಕ ಸರಕಾರದ ಯೋಜನೆ ವಿಳಂಬವಾಗುತ್ತಿದೆ. ಈ ನಡುವೆ ಅತೀ ಹೆಚ್ಚು ಭಕ್ತರು ಆಗಮಿಸುವ ರಾಜ್ಯದವರಿಗೆ ಪ್ರವಾಸಿ ಮಂದಿರ ನಿರ್ಮಿಸುವ ಅವಕಾಶ ನೀಡುವ ಆಲೋಚನೆಯನ್ನು ಕೇರಳ ಸರಕಾರ ಹೊಂದಿದೆ.

Advertisement

ಕರ್ನಾಟಕದಿಂದ ವರ್ಷಂಪ್ರತಿ ಲಕ್ಷಾಂತರ ಮಂದಿ ಅಯ್ಯಪ್ಪ ಭಕ್ತರು ಯಾತ್ರೆಗೆ ತೆರಳುತ್ತಾರೆ. ಆದರೆ ಉಳಿದು ಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ 5 ವರ್ಷಗಳಿಂದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ನಿರಂತರ ಹೋರಾಟ ಮಾಡುತ್ತಿದೆ. ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೂಲಕ ಕೇರಳ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ವಿಧಿಸಿರುವ ಷರತ್ತಿನಿಂದ ವಿಳಂಬವಾಗಿದೆ.

ಷರತ್ತು ಏನು ?
ಕರ್ನಾಟಕದವರಿಗೆ ಪ್ರವಾಸಿ ಮಂದಿರ ಕಲ್ಪಿಸಿದರೆ ಎಲ್ಲ ರಾಜ್ಯದವರೂ ಕೇಳಬಹುದು ಎಂಬುದು ಒಂದು ಕೇರಳದ ಆತಂಕ. ಅಂತೆಯೇ ಕೇರಳದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಪರಿಸರದಲ್ಲಿ ಪ್ರವಾಸಿ ಮಂದಿರ ತೆರೆಯಲು 5 ಎಕರೆ ಸ್ಥಳಾವಕಾಶ ನೀಡಬೇಕೆಂಬ ಬೇಡಿಕೆಯನ್ನೂ ಕೇರಳ ಇರಿಸಿದೆ. ಈಬಗ್ಗೆ ಸರಕಾರದ ಮಟ್ಟದಲ್ಲಿ ನಿರ್ಣಯ ಇನ್ನಷ್ಟೇ ಆಗಬೇಕಿದೆ.

ಕರ್ನಾಟಕದಿಂದ ಹೆಚ್ಚಿನ ಭಕ್ತರು
ಶಬರಿಮಲೆಗೆ ಹೋಗುವವರಲ್ಲಿ ಆಂಧ್ರಪ್ರದೇಶದ ಬಳಿಕ ಕರ್ನಾಟಕದಿಂದ ತೆರಳುವವರ ಸಂಖ್ಯೆಯೇ ಅಧಿಕ. ಇತ್ತೀಚಿನ ಅಂಕಿ-ಅಂಶದ ಪ್ರಕಾರ ವರ್ಷಕ್ಕೆ 60 ಲಕ್ಷ ಮಂದಿ ರಾಜ್ಯದಿಂದ ತೆರಳುತ್ತಿದ್ದಾರೆ.

ತಂಗಲು ದುಬಾರಿ ದರ
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮೂಲಕ ಸನ್ನಿಧಾನದಲ್ಲಿ ಶೆಡ್‌ ನಿರ್ಮಿಸಲಾಗಿದ್ದು, ಅನ್ನದಾನ, ಬಿಸಿನೀರು, ಅಸೌಖ್ಯ ಪೀಡಿತರ ಆರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಇದು 2008ರಿಂದ ಕಾರ್ಯಾಚರಿಸುತ್ತಿದೆ. ಪ್ರಸ್ತುತ ದಿನಕ್ಕೆ ಸುಮಾರು 60ರಿಂದ 70 ಸಾವಿರ ಮಂದಿ ಶಬರಿಮಲೆಗೆ ಆಗಮಿಸುತ್ತಿದ್ದಾರೆ. ರಾಜ್ಯದ ಭಕ್ತರಿಗೆ ಉಳಿದು ಕೊಳ್ಳಲು 6 ಗೆಸ್ಟ್‌ಹೌಸ್‌ ವ್ಯವಸ್ಥೆ ಮಾಡಲಾಗಿದೆ. 1 ಕೊಠಡಿಗೆ 300ರಿಂದ ಸಾವಿರ ರೂ. ಬಾಡಿಗೆ ಇದೆ. ಆದರೆ ಸೂಕ್ತ ಮೂಲಸೌಕರ್ಯಗಳು ಇಲ್ಲವಾಗಿವೆ.

Advertisement

ಪಡಿಪೂಜೆಗೆ ಅವಕಾಶ ಕಲ್ಪಿಸಲು ಮನವಿ
ಶಬರಿಮಲೆ ಅಯ್ಯಪ್ಪ ಸಮಾಜಂ ವತಿಯಿಂದ ಶಬರಿಮಲೆ ಕ್ರಿಯಾ ಸಮಿತಿ ಮೂಲಕ ಪಡಿಪೂಜೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಊಟೋಪಚಾರ ವ್ಯವಸ್ಥೆ ನಡೆಯುತ್ತಿದೆ. ರಾತ್ರಿ ಊಟ ನೀಡಲಾಗುತ್ತಿಲ್ಲ. ದಿನಕ್ಕೆ 3ರಿಂದ 4 ಲಕ್ಷ ಭಕ್ತರು ಬರುತ್ತಿದ್ದಾಗ 25 ಸಾವಿರ ಮಂದಿ ಮಾತ್ರ ಅನ್ನದಾನ ವ್ಯವಸ್ಥೆ ಇತ್ತು. ಇದರಿಂದ ಭಕ್ತರಿಗೆ ಊಟದ ಸಮಸ್ಯೆ ಎದುರಾಗುತ್ತಿತ್ತು. ಶಬರಿಮಲೆ ಅಯ್ಯಪ್ಪ ಸಮಾಜಂ 23 ರಾಜ್ಯಗಳಲ್ಲಿ ಕಾರ್ಯಾಚರಿ ಸುತ್ತಿದೆ. ಕರ್ನಾಟಕದ 25 ಜಿಲ್ಲೆಯಲ್ಲಿ ಈ ಸಮಾಜ ಸೇವೆ ನೀಡುತ್ತಿದೆ.

ನೀಲಕಲ್‌ನಲ್ಲಿದೆ ಸ್ಥಳಾವಕಾಶ
ಎಲ್ಲ ರಾಜ್ಯಗಳಿಗೂ ತಲಾ 5 ಎಕರೆಯಷ್ಟು ಸ್ಥಳಾವಕಾಶ ನೀಡುವ ಉದ್ದೇಶ ಇದೆ. ಈ ಬಗ್ಗೆ ಕೇರಳ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ. ನೀಲಕಲ್‌ನಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ. ನೀಲಕಲ್‌ನಲ್ಲಿಯೇ 5 ಎಕರೆ ಜಾಗ ನೀಡುವಂತೆ ಯಡಿಯೂರಪ್ಪ ನೇತೃತ್ವದಲ್ಲಿ ಕೇಳಲಾಗಿತ್ತು. ಅನಂತರ ಹಿಂದಿನ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿಯೂ ಕನಿಷ್ಠ 100×100 ಅಡಿ ಯಾತ್ರಿ ನಿವಾಸಕ್ಕೆ ಸ್ಥಳಾವಕಾಶ ಕೇಳಲಾಗಿತ್ತು. ಯಾತ್ರಿ ನಿವಾಸವನ್ನು ಕರ್ನಾಟಕ ಸರಕಾರದ ವತಿಯಿಂದಲೇ ನಿರ್ಮಿಸಲಾಗುವುದು ಎಂದೂ ತಿಳಿಸಲಾಗಿತ್ತು. ಈಗ ಮತ್ತೊಮ್ಮೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರೂ ಪೂರಕವಾಗಿ ಸ್ಪಂದಿಸಿದ್ದು, ಆಶ್ವಾಸನೆ ನೀಡಿದ್ದಾರೆ.

ಆಂಧ್ರಪ್ರದೇಶದ ಬಳಿಕ ಕರ್ನಾಟಕ ರಾಜ್ಯದಿಂದಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ತೆರಳುತ್ತಿದ್ದಾರೆ. ಇಲ್ಲಿ ಪ್ರವಾಸಿ ಮಂದಿರ ನಿರ್ಮಿಸಬೇಕು ಎಂಬ ಬಗ್ಗೆ 5 ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಎರಡೂ ಸರಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಅವರ ಬೇಡಿಕೆಗಳಿಗೆ ನಮ್ಮ ಸರಕಾರ ಒಪ್ಪಿಗೆ ಸೂಚಿಸಿದೆ. ಕೇರಳ ಸರಕಾರದಿಂದ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
-ಟಿ.ಬಿ. ಶೇಖರ್‌, ರಾಷ್ಟ್ರೀಯ ಅಧ್ಯಕ್ಷರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ

-ಪುನೀತ್‌ ಸಾಲ್ಯಾನ್‌

 

Advertisement

Udayavani is now on Telegram. Click here to join our channel and stay updated with the latest news.

Next