ತಿರುವನಂತಪುರಂ: ಶಬರಿಮಲೆಗೆ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ಕುರಿತಂತೆ ತಮ್ಮ ಫೇಸ್ ಬುಕ್ ನಲ್ಲಿ ವಿವಾದಿತ ಪೋಸ್ಟ್ ಅನ್ನು ಹಾಕಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕ ಪ್ರಿಯನಂದನ್ ಅವರ ಮೇಲೆ ಸೆಗಣಿ ನೀರು ಚೆಲ್ಲಿ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಿಯನಂದನ್ ಅವರು ಇತ್ತೀಚೆಗೆ ಪ್ರಿಯನಂದನ್ ಅವರು ಅಯ್ಯಪ್ಪ ಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದರು. ಬಳಿಕ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ತಮ್ಮ ಪೋಸ್ಟ್ ಅನ್ನು ತೆಗೆದು ಹಾಕಿದ್ದರು ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.
ಇಂದು ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ, ಸೆಗಣಿ ನೀರನ್ನು ಎರಚಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಪ್ರಿಯನಂದನ್ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ನಾನು ಮನೆಯತ್ತ ಬರುತ್ತಿದ್ದಾಗ ಆ ವ್ಯಕ್ತಿ ನನಗಾಗಿಯೇ ಕಾದು ನಿಂತಿದ್ದ, ನನ್ನ ಬಳಿ ಬಂದ ಕೂಡಲೇ ಹೊಡೆದು, ಸೆಗಣಿ ನೀರನ್ನು ಮೈಮೇಲೆ ಎರಚಿ ಬಿಟ್ಟಿದ್ದ. ಇದು ಬೆಳಗ್ಗೆ 9ಗಂಟೆ ಹೊತ್ತಿಗೆ ಸಂಭವಿಸಿದೆ. ಪ್ರತಿದಿನ ನಾನು ಈ ದಾರಿಯಲ್ಲಿ ಬೆಳಗ್ಗೆ 7ಗಂಟೆಗೆ ವಾಕಿಂಗ್ ಗೆ ಹೋಗುತ್ತೇನೆ. ಆದರೆ ಇವತ್ತು ತಡವಾಗಿತ್ತು. ಇದು ಕೇವಲ ಒಬ್ಬ ವ್ಯಕ್ತಿಯ ದಾಳಿ ಅಲ್ಲ, ಇದರ ಹಿಂದೆ ಬೇರೆಯವರೂ ಇದ್ದಾರೆ ಎಂದು ಪ್ರಿಯನಂದನ್ ದೂರಿದ್ದಾರೆ. 2006ರಲ್ಲಿ ಪ್ರಿಯನಂದನ್ ನಿರ್ದೇಶನದ ಪುಲಿಜನ್ಮ ಸಿನಿಮಾಕ್ಕಾಗಿ ಬೆಸ್ಟ್ ಫೀಚರ್ ಸಿನಿಮಾಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿತ್ತು.