ಪಟ್ಟಣಂತಿಟ್ಟಾ(ಕೇರಳ): ಭಾನುವಾರ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆದಿದ್ದು, ಸೋಮವಾರ (ಆಗಸ್ಟ್ 17, 2020) ಬೆಳಗ್ಗೆಯಿಂದ ಪೂಜೆ ಆರಂಭಗೊಂಡಿದೆ. ತಿಂಗಳ ಐದು ದಿನಗಳ ಪೂಜೆ ನೆರವೇರಿಸಲು ದೇವಾಲಯದ ಬಾಗಿಲು ತೆರೆಯಲಾಗಿದೆ ಎಂದು ವರದಿ ತಿಳಿಸಿದೆ.
ಮಲಯಾಳಂ ಪಂಚಾಗದ ಮೊದಲ ತಿಂಗಳು (ಆಗಸ್ಟ್) ಚಿಂಗಾಮ್ ನಲ್ಲಿ ಅಯ್ಯಪ್ಪ ಸ್ವಾಮಿಗೆ ಐದು ದಿನಗಳ ಪೂಜೆ ನಡೆಯಲಿದೆ. ಏತನ್ಮಧ್ಯೆ ಕೋವಿಡ್ 19 ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ದೇವಸ್ವಂ ಮಂಡಳಿಗೆ ತಿಳಿಸಿದ್ದಾರೆ.
ಯಾರು ದೇವಾಲಯಕ್ಕೆ ಭೇಟಿ ನೀಡುತ್ತಾರೋ ಅವರ ಬಳಿ ಕೋವಿಡ್ 19 ನೆಗೆಟಿವ್ ಸರ್ಟಿಪಿಕೆಟ್ ಅಗತ್ಯವಾಗಿ ಇರಬೇಕು. ತಿಂಗಳ ಪೂಜೆ ಆಗಸ್ಟ್ 21ರ ಸಂಜೆ ಮುಗಿದ ನಂತರ ದೇವಾಲಯದ ಬಾಗಿಲು ಮುಚ್ಚಲಾಗುವುದು ಎಂದು ದೇವಸ್ವಂ ಮಂಡಳಿ ಹೇಳಿದೆ.
ಅಯ್ಯಪ್ಪ ದೇವಾಲಯ ಮತ್ತೆ ಓಣಂ ಪೂಜೆಗಾಗಿ ಆಗಸ್ಟ್ 29ರಿಂದ ಸೆಪ್ಟೆಂಬರ್ 2ರವರೆಗೆ ಬಾಗಿಲು ತೆರೆಯಲಿದೆ. ನವೆಂಬರ್ 16ರಿಂದ ಭಕ್ತಾದಿಗಳಿಗೆ ಎರಡು ತಿಂಗಳ ಕಾಲ ದೇಗುಲ ತೆರೆಯಲಿದೆ. ಈ ಸಂದರ್ಭದಲ್ಲಿ ಕೋವಿಡ್ 19 ಪರೀಕ್ಷೆಯ ನೆಗೆಟಿವ್ ಸರ್ಟಿಫಿಕೆಟ್ ತರುವುದು ಕಡ್ಡಾಯ ಎಂದು ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಎನ್ ವಾಸು ತಿಳಿಸಿದ್ದಾರೆ.