ಶಬರಿಮಲೆ: ಮಕರ ಜ್ಯೋತಿ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ ನಡೆಯಲಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹದಿನೆಂಟು ಮೆಟ್ಟಿಲು ಹಾಗೂ ದೇವಸ್ಥಾನವನ್ನು ಶುಧ್ದೀಕರಣ ಕಾರ್ಯ ಆರಂಭಗೊಂಡಿದೆ.
ತಿರುವಾಭರಣ ಅಲಂಕೃತ ಅಯ್ಯಪ್ಪ ಸ್ವಾಮಿಯ ದೀಪಾರಾಧನೆಗಾಗಿ ಕ್ಷಣಗಣನೆ ಆರಂಭವಾಗಿದ್ದು, ಕ್ಷೇತ್ರಕ್ಕೆ ಬರುವ ಭಕ್ತರನ್ನು ಪಂಪಾದಲ್ಲಿಯೇ ತಡೆಯಲಾಗಿದೆ. ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಸನ್ನಿಧಾನದಲ್ಲಿರುವ ಭಕ್ತರು ವಾಪಾಸಾಗದೇ ಇರುವುದರಿಂದ ಜನದಟ್ಟಣೆಯು ಹೆಚ್ಚಿದೆ.
ಅಲ್ಲದೆ ತಿರುವಾಭರಣಂ ಹೊತ್ತ ಪೆಟ್ಟಿಗೆ ಕ್ಷೇತ್ರಕ್ಕೆ ಆಗಮಿಸಿರುವುದರಿಂದ ಭಕ್ತರಿಗೆ ಅವಕಾಶ ನಿರಾಕರಿಸಲಾಗಿದೆ. ಪವಿತ್ರ ಹದಿನೆಂಟು ಮೆಟ್ಟಿಲುಗಳನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕಲಿಯುಗ ದೇವ ಭಕ್ತರ ಇಷ್ಟಾರ್ಥ ಈಡೇರಿಸುವ ಅಯ್ಯಪ್ಪನ ಸನ್ನಿಧಾನದಲ್ಲಿ ದೀಪಾರಾಧನೆ, ಮಕರಜ್ಯೋತಿ ದರ್ಶನವನ್ನು ಕಣ್ತುಂಬಲು ಭಕ್ತ ಸಾಗರ ಕಾತರವಾಗಿದೆ.
ಶಬರಿಮಲೆ ದೇವಸ್ಥಾನದಲ್ಲಿರುವ ಅಯ್ಯಪ್ಪ ಗುಡಿ,ಕನ್ನಿಮೂಲ ಗಣಪತಿ ಗುಡಿ,ನಾಗರಾಜ ಸನ್ನಿಧಿಯನ್ನೂ ಅಲಂಕರಿಸಲಾಗಿದೆ.
-ಪ್ರವೀಣ್ ಚೆನ್ನಾವರ