ಪಟ್ಟಣಂತಿಟ್ಟ: ಶಬರಿಮಲೆ ಯಾತ್ರಿಗಳಿದ್ದ ವ್ಯಾನ್ ಉರುಳಿಬಿದ್ದು ಕನಿಷ್ಠ ಎಂಟು ಭಕ್ತರು ಸಾವನ್ನಪ್ಪಿದ್ದ ದುರಂತ ಘಟನೆ ಕೇರಳ – ತಮಿಳುನಾಡು ಗಡಿ ಭಾಗದ ಕುಮಿಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಗು ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳೆಲ್ಲರೂ ತೇಣಿ-ಆಂಡಿಪಟ್ಟಿ ಮೂಲದವರಾಗಿದ್ದರು.
ಈ ಯಾತ್ರಾರ್ಥಿಗಳು ಶಬರಿಮಲೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹಿಂದೆ ಬರುತ್ತಿದ್ದರು. ಕುಮಿಲಿ- ಕುಂಬಮ್ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಸಾಗಿಸುವ ಮೊದಲ ಪೆನ್‌ಸ್ಟಾಕ್ ಪೈಪ್ ಬಳಿ ಈ ಘಟನೆ ನಡೆದಿದೆ.
ವ್ಯಾನ್ ಭಾರೀ ವೇಗದಲ್ಲಿ ಸಾಗುತ್ತಿತ್ತು. ವ್ಯಾನ್ ಸುಮಾರು 40 ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ.
ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ವಿ ಮುರಳೀಧರನ್ ಅವರು ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.