Advertisement

ಶಬರಿಮಲೆ: ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಉಪಕಚೇರಿ

05:25 PM Jul 29, 2017 | Karthik A |

ಮಂಗಳೂರು: ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಪವಿತ್ರ ಕ್ಷೇತ್ರ ಶಬರಿಮಲೆಗೆ ಕರ್ನಾಟಕದಿಂದ ತೆರಳುವ ಲಕ್ಷಗಟ್ಟಲೆ ಭಕ್ತಾದಿಗಳ ಅನುಕೂಲಕ್ಕಾಗಿ ವೈದ್ಯಕೀಯ ಸೌಲಭ್ಯ, ಸಹಾಯವಾಣಿ, ರಕ್ಷಣೆ ಹಾಗೂ ನೆರವು ನೀಡಲು ಸುಸಜ್ಜಿತ ಉಪ ಕಚೇರಿಯನ್ನು ತೆರೆಯಲು ರಾಜ್ಯ ಸರಕಾರ ಮುಂದಾಗಿದೆ. ಕೇರಳದಲ್ಲಿರುವ ಶ್ರೀ ಶಬರಿಮಲೆ ಕ್ಷೇತ್ರವು ರಾಷ್ಟ್ರದ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಈ ಕ್ಷೇತ್ರಕ್ಕೆ ಕರ್ನಾಟಕದಿಂದ ಪ್ರತೀ ವರ್ಷ ಸುಮಾರು 50ರಿಂದ 60 ಲಕ್ಷ ಜನರು ಭೇಟಿ ನೀಡುತ್ತಾರೆ. ಬಹುತೇಕರು ಪ್ರತೀ ವರ್ಷ ಡಿಸೆಂಬರ್‌ ಮತ್ತು ಜನವರಿಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಪ್ರತೀ ವರ್ಷದಿಂದ ವರ್ಷಕ್ಕೆ ಅಧಿಕವಾಗಿರುತ್ತದೆ. ಜತೆಗೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಲಕ್ಷಗಟ್ಟಲೆ ಭಕ್ತರು ಆಗಮಿಸುತ್ತಾರೆ.

Advertisement

ಕರ್ನಾಟಕದಿಂದ ತೆರಳುವ ಭಕ್ತರಿಗೆ ಮಾಹಿತಿ ನೀಡುವ ಕೇಂದ್ರಗಳು, ತುರ್ತು ವೈದ್ಯಕೀಯ ಚಿಕಿತ್ಸೆ, ರಕ್ಷಣೆಗೆ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳ ಅನಿವಾರ್ಯತೆ ಇತ್ತು. ಈ ಸಂಬಂಧ ಅಯ್ಯಪ್ಪ ಮಾಲಾಧಾರಿಗಳು ಸರಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದರು. ಕಳೆದ ಬಾರಿಯ ಬಜೆಟ್‌ನಲ್ಲಿ ಇದನ್ನು ಪರಿಗಣಿಸಿ ಭಕ್ತಾದಿಗಳ ಅನುಕೂಲಕ್ಕಾಗಿ ವೈದ್ಯಕೀಯ ಸೌಲಭ್ಯಗಳು, ಸಹಾಯವಾಣಿ, ರಕ್ಷಣೆ ಹಾಗೂ ನೆರವು ನೀಡಲು ಒಂದು ಉಪ ಕಚೇರಿ ತೆರೆಯಲಾಗುವುದು ಎಂದು ಪ್ರಕಟಿಸಲಾಗಿತ್ತು. ಈ ಕುರಿತಾದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಿದ ಸರಕಾರ ಉಪ ಕಚೇರಿ ತೆರೆಯಲು ತುರ್ತಾಗಿ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಶೀಘ್ರವೇ ಈ ಕಾರ್ಯವನ್ನು ನಡೆಸಲು ಧಾರ್ಮಿಕ ದತ್ತಿ ಇಲಾಖೆ ನಿರ್ಧರಿಸಿದ್ದು, ಯೋಜನೆ ಸಿದ್ಧಪಡಿಸಿದೆ. 

ಪ್ರಸ್ತುತ ಶಬರಿಮಲೆ ಕ್ಷೇತ್ರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸಂಯೋಜನಾ ಕಾರ್ಯವನ್ನು ಕಂದಾಯ ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಪತ್ತು ನಿರ್ವಹಣೆ ನಿರ್ವಹಿಸುತ್ತಿದೆ. ಇದರ ಜತೆಯಲ್ಲಿ ಭಕ್ತಾದಿಗಳ ಮಾಹಿತಿ, ರಕ್ಷಣೆಗಾಗಿ ವಿಶೇಷ ಕಚೇರಿ ಆರಂಭವಾಗಲಿದೆ.

4 ಗಡಿಗಳಲ್ಲಿ ಮಾಹಿತಿ ಕೇಂದ್ರ
ಕರ್ನಾಟಕ ರಾಜ್ಯದಿಂದ ಕೇರಳ ರಾಜ್ಯ ಪ್ರವೇಶಿಸುವ ನಾಲ್ಕು ಮುಖ್ಯ ಸ್ಥಳಗಳಲ್ಲಿ ತಾತ್ಕಾಲಿಕ ಮಾಹಿತಿ ಕೇಂದ್ರವನ್ನು ತೆರೆದು ಶ್ರೀ ಕ್ಷೇತ್ರ ಶಬರಿಮಲೆಗೆ ತೆರಳುವ ಭಕ್ತಾದಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಲು ನಿರ್ಧರಿಸಲಾಗಿದೆ. ಜತೆಗೆ ಕರ್ನಾಟಕ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರ್‌ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಮತ್ತು ಈ ಎಲ್ಲಾ ಕಾರ್ಯಗಳ ನಿರ್ವಹಣೆಗಾಗಿ ರಾಜ್ಯಮಟ್ಟದಲ್ಲಿ ಒಬ್ಬರು ಸಂಯೋಜಕರನ್ನು ನೇಮಿಸಲಾಗುತ್ತದೆ. ಇವರ ಮೂಲಕವಾಗಿ ಸಂವಹನ ಕಾಯ್ದುಕೊಳ್ಳಲಾಗುತ್ತದೆ.

ಶಬರಿಮಲೆ ಸುತ್ತಮುತ್ತ ಮಾಹಿತಿ ಕೇಂದ್ರ
ಶ್ರೀ ಶಬರಿಮಲೆಯಲ್ಲಿ ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಪಂಪಾ, ನೀಲಕಲ್‌, ಕೊಟ್ಟಾಯಂ ಹಾಗೂ ಇತರ ಆವಶ್ಯಕ ಸ್ಥಳಗಳಲ್ಲಿ ತಾತ್ಕಾಲಿಕ ಸೇವಾ ಹಾಗೂ ಮಾಹಿತಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಈ ಕೇಂದ್ರಗಳಲ್ಲಿ ಕನಿಷ್ಠ ವೈದ್ಯಕೀಯ ಸೇವೆಯನ್ನು ಏರ್ಪಾಡು ಮಾಡುವುದು ಹಾಗೂ ಅಗತ್ಯ ಮಾಹಿತಿಗಳನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೀಗೆ ತೆರೆದ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಸಿಬಂದಿ ನೇಮಿಸುವುದು ಹಾಗೂ ಈ ಸಿಬಂದಿಗೆ ಸಹಾಯಕವಾಗುವಂತೆ ತಾತ್ಕಾಲಿಕವಾಗಿ ದ್ವಿಭಾಷಿಗಳನ್ನು 45 ದಿನಗಳ ಕಾಲಕ್ಕೆ ನೇಮಿಸಲಾಗುತ್ತದೆ. ಈ ಕೇಂದ್ರಗಳಿಗೆ ಹಾಗೂ ನಿಯೋಜಿಸಲಾಗುವ ಸಿಬಂದಿಗೆ ತಾತ್ಕಾಲಿಕವಾಗಿ ದೂರವಾಣಿ ಸೌಲಭ್ಯ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಸಿಬಂದಿ ಕಾರ್ಯನಿರ್ವಹಣೆಗೆ ವಾಹನ ಸೌಕರ್ಯ ಹಾಗೂ ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಪ್ರಸ್ತಾವನೆಯಲ್ಲಿ ಉಲ್ಲೇಖ ಮಾಡಲಾಗಿದೆ.

Advertisement

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next