ಹೊಸದಿಲ್ಲಿ: ಕೇವಲ ಶಬರಿಮಲೆ ದೇಗುಲ ವಷ್ಟೇ ಅಲ್ಲ, ಮುಸಲ್ಮಾನರ ಮಸೀದಿ, ದರ್ಗಾಗಳಲ್ಲೂ ಮಹಿಳೆಯರಿಗೆ ಪ್ರವೇಶ ನೀಡುತ್ತಿಲ್ಲ.
ಇದು ಸುಪ್ರೀಂಕೋರ್ಟ್‌ನಲ್ಲಿ ಶಬರಿಮಲೆ ದೇಗುಲದ ತಿರುವಾಂಕೂರು ದೇವಸ್ವಂ ಮಂಡಳಿಯ ಪರ ವಕೀಲ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘವಿ ಅವರ ವಾದ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಡಾವಳಿಯಾಗಿದ್ದು ದೇಗುಲದ ನಂಬಿಕೆಗೆ ಸಂಬಂಧಿಸಿದ್ದಾಗಿದೆ ಎಂದು ಸಂವಿಧಾನ ಪೀಠದ ಮುಂದೆ ವಾದ ಮಂಡಿಸಿದ್ದಾರೆ.
ದೇಗುಲ ಪ್ರವೇಶ ಸಂಬಂಧ ನಾಲ್ಕು ದಿನಗಳಿಂದ ಸುಪ್ರೀಂನಲ್ಲಿ ಬಿರುಸಾದ ವಾದ -ಪ್ರತಿವಾದ ನಡೆಯು ತ್ತಲೇ ಇದೆ. ಮಂಗಳವಾರ ವಾದ ಮುಂದುವರಿಸಿದ ಸಿಂಘವಿ ಅವರು, ಹಿಂದೂ ದೇಗುಲಗಳಲ್ಲಷ್ಟೇ ಅಲ್ಲ, ಇತರೆ ಧರ್ಮಗಳಲ್ಲೂ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವುಂಟು ಎಂದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್, ನಮಗೆ ಆಧುನಿಕ ತತ್ವಗಳು ಬೇಕಾಗಿಲ್ಲ, ಸಾಂವಿಧಾನಿಕ ತತ್ವಗಳಷ್ಟೇ ನಮಗೆ ಮಾನ್ಯತೆ. ಶಬರಿಮಲೆ ದೇಗುಲವು ಈ ವಿಚಾರದಲ್ಲಿ ಅದು ಅಗತ್ಯ ಮತ್ತು ಅವಿಭಾಜ್ಯ ಆಚರಣೆಯಾಗಿದೆ ಎಂಬುದನ್ನು ಸಾಬೀತು ಮಾಡಲೇಬೇಕು ಎಂದು ಖಂಡತುಂಡವಾಗಿ ಹೇಳಿತು.
ಅಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಏನಾಯಿತು ಎಂಬುದು ನಮಗೆ ಬೇಕಾಗಿಲ್ಲ. ಆದರೆ, ಸ್ವಾತಂತ್ರ್ಯ ಬಂದ ಮೇಲೆ ದೇಶಕ್ಕೊಂದು ಸಂವಿಧಾನ ಬಂದಿದೆ. ಅದರ ಆಶಯ ಮತ್ತು ನಿಯಮಗಳಿಗೆ ಅನುಗುಣವಾಗಿ ನಡೆಯಬೇಕು ಅಷ್ಟೇ. ಹೀಗಾಗಿ ನೀವು ಮಹಿಳೆಯರಿಗೆ ಏಕೆ ನಿರ್ಬಂಧ ಹೇರುತ್ತಿದ್ದೀರಿ ಎಂಬುದನ್ನು ಕೋರ್ಟ್ ಮುಂದೆ ಸಾಬೀತು ಮಾಡಲೇಬೇಕು ಎಂದಿತು.
ಜತೆಗೆ, ದೇವಸ್ವಂ ಮಂಡಳಿಯೇ ಕೇರಳ ಹೈಕೋರ್ಟ್ ಮುಂದೆ ಪ್ರತಿ ವರ್ಷದ ವ್ರತದ ಆರಂಭದ 5 ದಿನಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಿತ್ತು. ಈಗ ಆಗದು ಎಂದು ಹೇಳುತ್ತಿದ್ದೀರಿ. ನೀವು ಹೇಳಿದ ಹಾಗೆಯೇ ದೇಗುಲಕ್ಕೆ ವ್ರತದ ಆರಂಭದ 5 ದಿನ ಮಹಿಳೆಯರಿಗೆ ಪ್ರವೇಶ ನೀಡಿದಾಗ ಮೂರ್ತಿ ಅದೃಶ್ಯವಾಗುತ್ತದೆಯೇ? ಅವರು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ ಮೇಲೆ ಮೂರ್ತಿ ವಾಪಸ್ ಬರುತ್ತದೆಯೇ ಎಂದೂ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ ತುಸು ಖಾರವಾಗಿಯೇ ಪ್ರಶ್ನಿಸಿತು.
ಇದಕ್ಕೆ ಸಿಂಘವಿ ಅವರು, ಮಹಿಳೆಯರ ದೈಹಿಕ ಸ್ಥಿತಿ ಬಗ್ಗೆ ಹೇಳಿದರು. ಆಗ, ನಮ್ಮದು ಪುರುಷ ಪ್ರಧಾನ ಸಮಾಜವಾಗಿರುವುದರಿಂದ ಇಂಥ ನಡವಳಿಕೆಗಳಿವೆ. ಇದರಲ್ಲಿ ಬೇರೆ ಯಾವ ಕಾರಣಗಳೂ ಇಲ್ಲ ಎಂದಿತು.