Advertisement

ಸಬಳೂರು ಶಾಲೆ: ಗಮನ ಸೆಳೆದ ಮೆಟ್ರಿಕ್‌ ಮೇಳ

10:57 PM Oct 26, 2019 | mahesh |

ಆಲಂಕಾರು: ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಸ. ಉನ್ನತಿಕರಿಸಿದ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮೆಟ್ರಿಕ್‌ ಮೇಳದಲ್ಲಿ ಭರ್ಜರಿವ್ಯಾಪಾರ ನಡೆಯಿತು.

Advertisement

ಶಿಕ್ಷಣದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸರಕಾರದ ಸುತ್ತೋಲೆಯಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳಲ್ಲಿ ವ್ಯಾಪಾರ ಮನೋಭಾವನೆ, ವ್ಯಾವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಸುವ ಉದ್ದೇಶದಿಂದ ಐದು ವರ್ಷಗಳಿಂದ ಮೆಟ್ರಿಕ್‌ ಮೇಳ ಆಯೋಜಿಸುತ್ತಿದ್ದು, ಈ ವರ್ಷವೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ತರಕಾರಿ ಮಾರಾಟ
ಐದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೇಳದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ತಾವು ಮನೆಯಿಂದ ತಂದಿರುವ ಚೀನಿ ಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕುಂಬಳ ಕಾಯಿ, ಪಡುವಲಕಾಯಿ, ಬಾಳೆಹಣ್ಣು , ಹರಿವೆ ಸೊಪ್ಪು, ಹಸಿಮೆಣಸು, ಟೊಮೇಟೊ, ಸಿಹಿಗೆಣಸು, ಬಸಳೆ, ಎಳೆನೀರು, ಕೊಕ್ಕೊ, ವೀಳ್ಯದೆಲೆ, ತೆಂಗಿನಕಾಯಿ, ಕಬ್ಬು, ಸೀಬೆಕಾಯಿ, ಪರಂಗಿಹಣ್ಣು, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ, ಔಷಧ ಸಸ್ಯ, ಹೂವಿನ ಗಿಡ, ಮಲ್ಲಿಗೆ, ಅರಿಶಿನ, ಲಿಂಬೆ, ತಾಜಾ ಹಣ್ಣಿನ ರಸಗಳು, ತರಕಾರಿಗಳು, ಹಣ್ಣಿನ ಗಿಡಗಳು, ಚರುಂಬುರಿ, ಮಜ್ಜಿಗೆ, ಮನೆಯಲ್ಲಿ ತಯಾರಿಸಿದ ತಿಂಡಿ, ಉಪ್ಪಿನಕಾಯಿ ಇತ್ಯಾದಿಗಳನ್ನು ಸಂತೆಯಲ್ಲಿ ಮಾರಿ ಹಣ ಜೇಬಿಗಿಳಿಸಿಕೊಂಡರು.

ಟೆಂಟ್‌ ಹಾಕಿ ವ್ಯಾಪಾರ
ಶಾಲಾ ಜಗುಲಿ, ಮೈದಾನದಲ್ಲಿ ಟೆಂಟ್‌ ಹಾಕಿ ವಿದ್ಯಾರ್ಥಿಗಳು ವ್ಯಾಪಾರ ನಡೆಸಿದರು. ಶಿಕ್ಷಕರು, ಹೆತ್ತವರು, ಸಾರ್ವಜನಿಕರು ವಿದ್ಯಾರ್ಥಿಗಳೊಂದಿಗೆ ಚೌಕಾಸಿ ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ಕೆಲವೊಂದು ಗ್ರಾಹಕರು ವಿದ್ಯಾರ್ಥಿಗಳು ನಿಗದಿಪಡಿಸಿದ ದರಕ್ಕೆ ವಸ್ತುಗಳನ್ನು ಖರೀದಿಸಿದರು.

ಮೇಳಕ್ಕೆ ಚಾಲನೆ
ತಾಲೂಕು ಪಂಚಾಯತ್‌ ಸದಸ್ಯೆ ಜಯಂತಿ ಆರ್‌. ಗೌಡ, ಕೊಯಿಲ ಗ್ರಾ.ಪಂ. ಅಧ್ಯಕ್ಷೆ ಹೇಮಾ ಎಂ. ಶೆಟ್ಟಿ ವಿದ್ಯಾರ್ಥಿಗಳಿಂದ ತರಕಾರಿ ಖರೀದಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಗೌಡ ಕೊಲ್ಯ, ಉಪಾಧ್ಯಕ್ಷೆ ದೀಪಾ, ಶಿಕ್ಷಕಿಯರಾದ ಯಶೋದಾ, ತಾರಾದೇವಿ, ಪದ್ಮಯ್ಯ, ಗೌರವ ಶಿಕ್ಷÒಯರಾದ ರಮ್ಯಾ, ವಾರಿಜಾ ಏಣಿತಡ್ಕ, ವಿಜ್ಞಾನ ಸಂಘದ ಅಧ್ಯಕ್ಷೆ, ವಿದ್ಯಾರ್ಥಿನಿ ಸಮೀದಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್‌ ಎರ್ಮಡ್ಕ, ಕೋಶಾಧಿಕಾರಿ ನಾಗೇಶ್‌ ಕಡೆಂಬ್ಯಾಲು, ಶ್ರೀರಾಮ ಗೆಳೆಯರ ಬಳಗ ಅಧ್ಯಕ್ಷ ಗುರುಪ್ರಸಾದ್‌ ಪಟ್ಟೆದಮೂಲೆ, ಅಂಗನವಾಡಿ ಶಿಕ್ಷಕಿ ವೇದಾವತಿ ಇದ್ದರು. ಮುಖ್ಯ ಶಿಕ್ಷಕಿ ವಾರಿಜಾ ಸ್ವಾಗತಿಸಿದರು. ಮೆಟ್ರಿಕ್‌ ಮೇಳ ಮಾರ್ಗದರ್ಶಿ ಶಿಕ್ಷಕಿ ಮಮತಾ ವಂದಿಸಿದರು.

Advertisement

 ಗಣಿತದ ಪರಿಚಯ
ವ್ಯಾವಹಾರಿಕ ಗಣಿತ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ವ್ಯವಹಾರ ಗಣಿತವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಮೆಟ್ರಿಕ್‌ ಮೇಳದ ಮುಖ್ಯ ಉದ್ದೇಶ. ಮೆಟ್ರಿಕ್‌ ಮೇಳದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಹೆತ್ತವರು ಗ್ರಾಹಕರಾಗಿ ಉತ್ಸಾಹದಿಂದಲೇ ಪಾಲ್ಗೊಂಡರು.
– ಮಮತಾ ಪಿ.ಶಿಕ್ಷಕಿ, ಮೆಟ್ರಿಕ್‌ ಮೇಳ ಮಾರ್ಗದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next