Advertisement

ಏನದು ಮೋದಿ ಹೇಳಿದ ‘ಸಾಥ್ ಬಾತೋಂ ಮೇ ಆಪ್ ಕಾ ಸಾಥ್’?- ಇಲ್ಲಿದೆ ವಿವರ

09:08 AM Apr 15, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ವಿರುದ್ಧದ ಹೋರಾಟಕ್ಕಾಗಿ ದೇಶಾದ್ಯಂತ ಮಾರ್ಚ್ 25ರಂದು ಜಾರಿಗೊಳಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 3ರವರೆಗೆ ಮುಂದುವರಿಸಲಾಗಿದೆ. ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಾಡಿದ ಭಾಷಣದಲ್ಲಿ ಲಾಕ್ ಡೌನ್ ಮುಂದುವರಿಸುವ ವಿಚಾರದ ಕುರಿತಾದ ಮಾಹಿತಿಯನ್ನು ದೇಶವಾಸಿಗಳಿಗೆ ನೀಡಿದರು.

Advertisement

ತಮ್ಮ ಭಾಷಣದಲ್ಲಿ ಕೋವಿಡ್ ವಿರುದ್ಧ ಭಾರತ ಕೈಗೊಂಡಿರುವ ಕ್ರಮಗಳನ್ನು, ಜನರ ಪರಿಣಾಮಕಾರಿ ಭಾಗೀದಾರಿಯನ್ನು, ರಾಜ್ಯಗಳ ಸಹಕಾರವನ್ನು, ಆರೋಗ್ಯ ಯೋಧರ ಸೇವೆಗಳನ್ನು ಎಲ್ಲಾ ಸ್ಮರಿಸಿಕೊಂಡ ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಕೊನೆಯಲ್ಲಿ ದೇಶವಾಸಿಗಳಲ್ಲಿ ಏಳು ಅಂಶಗಳ ಸಹಭಾಗಿತ್ವವನ್ನು ಕೇಳಿಕೊಂಡಿದ್ದಾರೆ.

‘ಸಾಥ್ ಬಾತೋಂ ಮೇ ಆಪ್ ಕಾ ಸಾಥ್’ – ಏಳು ವಿಷಯಗಳ ಕುರಿತಾಗಿ ನಿಮ್ಮ ಸಹಕಾರ ಎಂಬ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ದೇಶವಾಸಿಗಳಿಂದ ಬಯಸುತ್ತಿರುವ ಆ ಏಳು ವಿಚಾರಗಳು ಯಾವುದೆಲ್ಲಾ ಅಂದರೆ…

1. ನಿಮ್ಮ ಮನೆಗಳಲ್ಲಿ ಇರುವ ವಯಸ್ಸಾದವರ ಬಗ್ಗೆ ಸರಿಯಾದ ಕಾಳಜಿ ವಹಿಸಿ. ಅದರಲ್ಲೂ ಯಾರಾದರೂ ಈ ಹಿಂದೆಯೇ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಅವರ ಕುರಿತಾಗಿ ಇನ್ನೂ ಹೆಚ್ಚಿನ ಕಾಳಜಿ ಇರಲಿ. ಇವರನ್ನು ಈ ಕೋವಿಡ್ 19 ವೈರಾಣುವಿನಿಂದ ರಕ್ಷಿಸುವುದು ಅತ್ಯಗತ್ಯವಾಗಿದೆ.

2. ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರದ ‘ಲಕ್ಷ್ಮಣ ರೇಖೆ’ಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆಯಲ್ಲೇ ತಯಾರಿಸಿದ ಫೇಸ್ ಕವರ್ ಅಥವಾ ಮಾಸ್ಕ್ ಗಳನ್ನು ಕಡ್ಡಾಯವಾಗಿ ಬಳಸಲೇಬೇಕು. ನಿಮಗೆ ಬೇಕಾದ ಮಾಸ್ಕ್ ಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಿ.

Advertisement

3. ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು (ಇಮ್ಯುನಿಟಿ) ಹೆಚ್ಚಿಸಿಕೊಳ್ಳಲು ‘ಆಯುಷ್’ ಸಚಿವಾಲಯದ ಮೂಲಕ ನೀಡಲಾಗಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ. ಬಿಸಿ ನೀರು ಕುಡಿಯುವುದು, ಬಿಸಿ ಆಹಾರಗಳನ್ನು ಸೇವಿಸುವುದು ಇತ್ಯಾದಿ.

4. ಕೋವಿಡ್ ವೈರಾಣು ಎಲ್ಲೆಡೆ ಹಬ್ಬುವುದನ್ನು ತಡೆಗಟ್ಟಲು ‘ಆರೋಗ್ಯ ಸೇತು’ ಮೊಬೈಲ್ ಆ್ಯಪ್ ಅನ್ನು ಅಗತ್ಯವಾಗಿ ಡೌನ್ಲೋಡ್ ಮಾಡಿಕೊಳ್ಳಿ. ಇತರರಿಗೂ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಪ್ರೇರೇಪಿಸಿ.

5. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಡ ಕುಟುಂಬಗಳಿಗೆ ಸಹಾಯ ಮಾಡಿ. ಆ ಕುಟುಂಬಗಳ ಆಹಾರದ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಶ್ರಮವಹಿಸಿ.

6. ನಿಮ್ಮ ಉದ್ಯೋಗ, ವ್ಯವಹಾರಗಳಲ್ಲಿ ನಿಮ್ಮ ಜೊತೆ ಕೆಲಸ ಮಾಡುವವರ ಕುರಿತಾಗಿ ಸಂವೇದನೆಯನ್ನು ಇರಿಸಿಕೊಳ್ಳಿ. ಯಾರನ್ನೂ ಕೆಲಸದಿಂದ ತೆಗೆದು ಹಾಕಬೇಡಿ.

7. ಈ ಮಾರಕ ವೈರಸ್ ವಿರುದ್ಧ ಹಗಲಿರುಳೂ ಹೋರಾಡುತ್ತಿರುವ ನಮ್ಮ ‘ಕೋವಿಡ್ ಯೋಧರ’ ಕುರಿತಾಗಿ, ನಮ್ಮ ವೈದ್ಯರು, ನರ್ಸ್ ಗಳು, ಪೌರ ಕಾರ್ಮಿಕರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು.. ಇವರೆಲ್ಲರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಮತ್ತು ಇವರ ಕಾರ್ಯವನ್ನು ನಾವು ಆದರಪೂರ್ವಕವಾಗಿ ಗೌರವಿಸಬೇಕು.

ಹಾಗಾಗಿ ನಾವೆಲ್ಲರೂ ಸಂಪೂರ್ಣ ನಿಷ್ಠಯಿಂದ ಮೇ 3ರವರೆಗೆ ಲಾಕ್ ಡೌನ್ ನಿಯಮಗಳನ್ನು ಪಾಲನೆ ಮಾಡೋಣ. ಎಲ್ಲಿದ್ದೀರೋ ಅಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿರಿ. ಈ ಮೂಲಕ ನಾವೆಲ್ಲರೂ ರಾಷ್ಟ್ರವನ್ನು ಜೀವಂತ ಹಾಗೂ ಜಾಗೃತವಾಗಿರಿಸೋಣ. ಈ ಸಂದರ್ಭದಲ್ಲಿ ಇದೇ ನನ್ನ ಆಶಯವಾಗಿದೆ ಎಂದು ಹೇಳಿ ಪ್ರಧಾನಿಯವರು ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next