ವಿಜಯಪುರ: ಕ್ರೀಡೆಯಲ್ಲಿ ಗೆದ್ದ ಬಹುಮಾನ ಹಣದಲ್ಲಿ ಸಂತ್ರಸ್ತ ಮಗುವಿಗೆ ತೊಟ್ಟಿಲು ಕೊಡಿಸುವ ಮೂಲಕ ಶಾಲಾ ಬಾಲಕಿ ಮಾನವೀಯತೆ ಮೆರೆದಿದ್ದಾಳೆ.
ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಸಹೋದರಾದ ಎಂ.ಎಲ್.ಸಿ. ಸುನೀಲಗೌಡ ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ ಎಂಬ ವಿದ್ಯಾರ್ಥಿನಿಯೇ ತಾನುಗೆದ್ದ ಕ್ರೀಡಾ ಬಹುಮಾನದ ಹಣದಲ್ಲಿ ಸಂತ್ರಸ್ತರ ಪುನರ್ವಸತಿ ಕೇಂದ್ರ ಕಂದಮ್ಮಗಳಿಗೆ ತೊಟ್ಟಿಲು ಕೊಡಿಸಿದ್ದಾಳೆ.
ಸಾನ್ವಿ ಪಾಟೀಲ ಬಾಗಲಕೋಟೆಯಲ್ಲಿ ಜರುಗಿದ 19 ವರ್ಷದೊಳಗಿನ ಬ್ಯಾಡ್ಮಿಂಟನ್ ಬಾಲಕಿಯರ ವಿಭಾಗದ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಡಬಲ್ಸ್ ನಲ್ಲಿ ದ್ವಿತೀಯ ಸ್ಥಾನ ಪಡೆದು 5 ಸಾವಿರ ರೂ. ಬಹುಮಾನ ಗೆದ್ದಿದ್ದಳು.
ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದನ್ನು ಅರಿತಿದ್ದ ಸಾನ್ವಿ ತಾನು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಗೆದ್ದ ಬಹುಮಾನದ ಹಣದಲ್ಲಿ ಎರಡು ತೊಟ್ಟಿಲನ್ನು ಖರೀದಿಸಿದ್ದಳು.
ಈ ತೊಟ್ಟಿಲು ಗಳನ್ನು ತಮ್ಮ ತಂದೆ ಶಾಸಕ ಸುನೀಲಗೌಡ ಅವರ ಮೂಲಕ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಪುನರ್ವಸತಿ ಕೇಂದ್ರದಲ್ಲಿನ ಇಬ್ಬರು ಬಾಣಂತಿಯರಿಗೆ ಹಸ್ತಾಂತರಿಸುವ ಮೂಲಕ ಮುಗ್ಧ ಕಂದಮ್ಮಗಳ ನೆಮ್ಮದಿಯ ನಿದ್ದೆಗಾಗಿ ಜೋಗುಳ ಹಾಡಿ ಮಾನವೀಯತೆ ಮೆರೆದಿದ್ದಾಳೆ.