Advertisement
ಸೊಲ್ಲಾಪುರ ಲೋಕಸಭೆ ಚುನಾವಣೆಯಲ್ಲಿ 1.50 ಲಕ್ಷ ಮತಗಳ ಅಂತರದಿಂದ ಹೀನಾಯವಾಗಿ ಸೋಲುಂಡ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಗೆಲುವಿಗಾಗಿ ಹರಸಾಹಸ ಪಟ್ಟಿದ್ದು ಸುಳ್ಳಲ್ಲ. ಸುಶೀಲಕುಮಾರ ಶಿಂಧೆ ಅವರು 3,54,994 ಮತಗಳನ್ನು ಪಡೆದರೆ, ಬಿಜೆಪಿಯ ಕನ್ನಡಿಗ ಡಾ| ಜಯಸಿದ್ಧೇಶ್ವರ ಸ್ವಾಮೀಜಿ 5,05,132 ಮತಗಳನ್ನು ಪಡೆಯುವ ಮೂಲಕ 1,50,138 ಮತಗಳ ಅಂತರದಿಂದ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.
Related Articles
Advertisement
ಲಿಂಗಾಯತ ಸಮುದಾಯದಿಂದ ಬಂದ ಡಾ| ಜಯಸಿದ್ಧೇಶ್ವರ ಸ್ವಾಮೀಜಿ ಅವರನ್ನು ಕಣಕ್ಕಿಳಿಸುವುದರ ಮೂಲಕ ಬಿಜೆಪಿ ಶಿಂಧೆ ವಿರುದ್ಧ ಪ್ರಬಲವಾದ ಸವಾಲನ್ನು ಹುಟ್ಟುಹಾಕಿತ್ತು. ಸುಮಾರು 63 ವಯಸ್ಸಿನ ಡಾ| ಜಯಸಿದ್ಧೇಶ್ವರ ಶಿವಾಚಾರ್ಯರು ಮಠಗಳನ್ನು ನಡೆಸುತ್ತಿದ್ದಾರೆ. ಈ ಮಠಗಳಿಗೆ ಲಿಂಗಾಯತರು ದೊಡ್ಡ ಆಸ್ತಿ ಇದ್ದಂತೆ. ಅಲ್ಲದೇ ಈ ಭಾಗದಲ್ಲಿ ಪ್ರವಚನಗಳ ಮೂಲಕ ಜನರ ಮನಸ್ಸು ಸೆಳೆದಿದ್ದಾರೆ. ಇದೀಗ ಅಧ್ಯಾತ್ಮಿಕದಿಂದ ರಾಜಕೀಯ ಕ್ಷೇತ್ರದ ಕಡೆಗೆ ಬಂದು ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲಿಂಗಾಯತ ಸಮುದಾಯದ ನಾಯಕ ವಿಜಯಕುಮಾರ ದೇಶಮುಖ ಮತ್ತು ಸಹಕಾರ ಸಚಿವ, ಮರಾಠಾ ಸಮುದಾಯದ ನಾಯಕ ಸುಭಾಷ್ ದೇಶಮುಖ ತಮ್ಮ ಆಂತರಿಕ ಮತ ಭೇದ ಮರೆತು ಸಕ್ರಿಯವಾಗಿ ಮತ ಬೇಟೆಯಲ್ಲಿ ತೊಡಗಿ ಲಿಂಗಾಯತ ಮತ್ತು ಮರಾಠಾ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಡಾ| ಶಿವಾಚಾರ್ಯರು ಮತ್ತು ಅಂಬೇಡ್ಕರ್ ಪ್ರವೇಶದೊಂದಿಗೆ ಹಿಂದುಳಿದ ಮತಗಳನ್ನು ಸೆಳೆಯುವ ಬೆಳವಣಿಗೆಯ ವಿಷಯಗಳ ನಡುವೆಯೂ ಸ್ಪರ್ಧೆ ಏರ್ಪಟ್ಟಿತ್ತು. ಇಡಿ ಚುನಾವಣೆಯು ನಿಜವಾದ ವಿಷಯಗಳಿಗಿಂತ ಜಾತಿ-ಧರ್ಮಗಳ ಮೇಲೆ ಹೋರಾಟ ನಡೆಸಿರುವುದು ಸುಳ್ಳಲ್ಲ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಇವೆಲ್ಲ ಬೆಳವಣಿಗೆಯು ಕಾಂಗ್ರೆಸ್ ಹಿರಿಯ ನಾಯಕ ಸುಶೀಲಕುಮಾರ ಶಿಂಧೆ ಅವರ ರಾಜಕೀಯ ಭವಿಷ್ಯಕ್ಕೆ ತಡೆಯೊಡ್ಡಿದಂತಾಗಿದೆ.