ಮೈಸೂರು: “ಹಾವಿನ ಬುಟ್ಟಿ ಇಟ್ಕೊಂಡು ಹಾವು ಬಿಡ್ತೀನಿ ಬಿಡ್ತೀನಿ ಅಂತಾ ದಿನ ಹೇಳುತ್ತಾರೆ. ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಅದು ಬುಸ್ ಅನ್ನುತ್ತಾ ಅಥವಾ ಟುಸ್ ಅನ್ನುತ್ತಾ’ ಎಂದು ಹೇಳುವ ಮೂಲಕ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೋಳಿ ಕೂಡ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುತ್ತಿದ್ದು, ಇದೊಂದು ಚಟವಾಗಿದೆ. ಇದಕ್ಕೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಯಾರು ಅವರ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಹೇಳಲಿ ಎಂದರು.
ಕಾಂಗ್ರೆಸ್‌ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ನಮಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮ ಆಡಳಿತ ನಡೆಸುತ್ತಿದ್ದಾರೆ. ಆದರೆ ಕೆಲಸವಿಲ್ಲದ ಕಾಂಗ್ರೆಸ್‌ನವರು ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಹೊಸ ಪ್ರಯೋಗ : ಮಂತ್ರಿಗಳಿಗೆ ಅವರ ಜಿಲ್ಲೆಯ ಉಸ್ತುವಾರಿ ನೀಡದೆ ಪಕ್ಕದ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ. ಇದು ಮುಖ್ಯಮಂತ್ರಿಗಳ ಹೊಸ ಪ್ರಯೋಗ. ಕೇಂದ್ರದ ಆದೇಶದಂತೆ ಮಾಡಿರುವುದರಿಂದ ಯಾರಿಗೂ ಅಸಮಾಧಾನವಿಲ್ಲ. ಮಾಧುಸ್ವಾಮಿ ಮತ್ತು ಅಶೋಕ್ ಅವರು ಯಾವ ಜಿಲ್ಲೆಯ ಉಸ್ತುವಾರಿಯನ್ನೂ ಪಡೆದಿಲ್ಲ. ಮಾಧುಸ್ವಾಮಿ ತುಮಕೂರು ಬಿಟ್ಟು ಬೇರೆ ಯಾವ ಜಿಲ್ಲೆಯೂ ಬೇಡ ಎಂದಿದ್ದರು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ : ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು