Advertisement

ಎಸ್‌-ಟಿ ಸಂಶೋಧನೆ: ರಾಜ್ಯಕ್ಕೆ ಸುಸ್ಥಿರ ಅಗ್ರಸ್ಥಾನ

01:22 AM Oct 26, 2019 | Team Udayavani |

ಉಡುಪಿ: ವಿಜ್ಞಾನ ಮತ್ತು ತಂತ್ರ ಜ್ಞಾನದ ಸಂಶೋಧನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದು ಇದನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಉಪಮುಖ್ಯಮಂತ್ರಿ, ಉನ್ನತ, ವೈದ್ಯಕೀಯ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್‌-ಟಿ) ಇಲಾಖೆ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

Advertisement

ಅವರು ಶುಕ್ರವಾರ ಮಣಿಪಾಲದಲ್ಲಿ ಮಣಿಪಾಲ- ರಾಜ್ಯ ಸರಕಾರದ ಬಯೋ ಇನ್‌ಕ್ಯುಬೇಟರ್‌ ಸೆಂಟರ್‌ ಉದ್ಘಾಟಿಸಿ ಮಾತನಾಡಿದರು. ಐಟಿ, ಬಿಟಿ, ಎಸ್‌-ಎಸ್‌ಟಿ ಸಂಶೋಧನೆಯಿಂದ ಸ್ಟಾರ್ಟ್‌ಅಪ್‌, ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ವ್ಯೋಮ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಇದಕ್ಕೆ ಇಲ್ಲಿರುವ ಸಂಶೋಧನೆ ಆಧಾರಿತ ಸಂಸ್ಥೆಗಳು ಕಾರಣ. ಅಗ್ರಸ್ಥಾನದಲ್ಲಿರುವ ರಾಜ್ಯದ ಸಾಧನೆಯನ್ನು ವಿಶೇಷ ಪರಿಶ್ರಮ ಪಟ್ಟು ಉಳಿಸಿಕೊಂಡು ಹೋಗಬೇಕಾಗಿದೆ. ಈ ಕಾರಣಕ್ಕಾಗಿ ಸರಕಾರ ಇನ್‌ಕ್ಯುಬೇಟರ್‌ ಕೇಂದ್ರಗಳಿಗೆ ನೆರವು ನೀಡುತ್ತಿದೆ. ಬಯೋ ಟೆಕ್ನಾಲಜಿ ಇನ್‌ಕ್ಯುಬೇಟರ್‌ ಕೇಂದ್ರದಿಂದಾಗಿ ವ್ಯಾಕ್ಸಿನ್‌, ಚಿಕಿತ್ಸಾ ವಿಧಾನದಲ್ಲಿ ಹೊಸ ಸಂಶೋಧನೆ ಮಾಡಬಹುದು ಎಂದರು.

ಡಿಸಿಎಂ ಕೆಎಂಸಿ ಹಳೆ ವಿದ್ಯಾರ್ಥಿ
ಮಣಿಪಾಲಕ್ಕೆ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆ ಇದೆ. ಅತ್ಯುತ್ತಮ ಮೂಲಸೌಕರ್ಯಗಳು ಇಲ್ಲಿವೆ. ಮಂಗಳೂರು ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ನನಗೆ ಈಗ ಅದೇ ಸಂಸ್ಥೆಯ ಕೇಂದ್ರವೊಂದನ್ನು ಉದ್ಘಾಟಿಸುವ ಅಪೂರ್ವ ಭಾಗ್ಯ ಸಿಕ್ಕಿದೆ ಎಂದು
ಡಾ|ಅಶ್ವತ್ಥನಾರಾಯಣ ಹೇಳಿದರು.

ಆರೋಗ್ಯ ಕ್ಷೇತ್ರದ ಸಂಶೋಧನೆ
ಜೈವಿಕ ಇನ್‌ಕ್ಯುಬೇಟರ್‌ ಆಗಿರುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮಾಡಲು ಅವಕಾಶವಿದೆ. ಈ ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರದ ಬಯೋಫಾರ್ಮ, ಬಯೋಮೆಡಿಕಲ್‌ ಉಪಕರಣಗಳು, ದಂತ ವೈದ್ಯಕೀಯ ಆವಿಷ್ಕಾರ, ಆರೋಗ್ಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಅದಕ್ಕೆ ಬೇಕಾದ ಪ್ರಯೋಗಾಲಯ, ಕಟ್ಟಡ-ಕಚೇರಿ ಇತ್ಯಾದಿ ಮೂಲಸೌಲಭ್ಯಗಳು ಲಭ್ಯವಿವೆ. ಮಣಿಪಾಲದ ಈ ಕೇಂದ್ರ ಜಾಗತಿಕ ವೇದಿಕೆಯಾಗಿ ರೂಪು ಗೊಳ್ಳಲಿದೆ ಎಂದು ಮಣಿಪಾಲ ಬಯೋ ಇನ್‌ಕ್ಯುಬೇಟರ್‌ ಸಿಇಒ ಮನೀಶ್‌ ಥಾಮಸ್‌ ಹೇಳಿದರು.

ಸದ್ಯವೇ ಮಣಿಪಾಲವು ಬಯೋ ಹಬ್‌, ಫಾರ್ಮ ಹಬ್‌ ಆಗಲಿದೆ ಎಂದು ಮಣಿಪಾಲ ಮಾಹೆ ವಿ.ವಿ. ಕುಲಪತಿ ಡಾ| ಎಚ್‌.ವಿನೋದ್‌ ಭಟ್‌ ವಿಶ್ವಾಸ ವ್ಯಕ್ತಪಡಿಸಿದರು. ಮಾಹೆ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಸಚಿವರಿಗೆ ಎಂಇಎಂಜಿ ಅಧ್ಯಕ್ಷ ಡಾ|ರಂಜನ್‌ ಪೈ ಸ್ಮರಣಿಕೆ ನೀಡಿ ಗೌರವಿಸಿದರು. ಶಾಸಕ ಕೆ.ರಘುಪತಿ ಭಟ್‌, ಐಜಿಪಿ ಅರುಣ್‌ ಚಕ್ರವರ್ತಿ, ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿ.ಪಂ. ಸಿಇಒ ಪ್ರೀತಿ ಗೆಹೋಲೊಟ್, ಎಸ್‌ಪಿ ನಿಶಾ ಜೇಮ್ಸ್‌ ಉಪಸ್ಥಿತರಿದ್ದರು. ಮಣಿಪಾಲ ಲೈಫ್ ಸೈನ್ಸಸ್‌ ಸೆಂಟರ್‌ ನಿರ್ದೇಶಕ ಡಾ|ಕೆ. ಸತ್ಯಮೂರ್ತಿ ಸ್ವಾಗತಿಸಿ ಕೆಎಂಸಿ ಡೀನ್‌ ಡಾ| ಶರತ್‌ ರಾವ್‌ ಅತಿಥಿಗಳನ್ನು ಪರಿಚಯಿಸಿದರು. ಡಾ| ಅನಿಲ್‌ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಕರಾವಳಿ ಭಾಗಕ್ಕೆ ಪ್ರಯೋಜನ
ಪ್ರಸ್ತಾವನೆಗೈದ ಐಟಿ, ಬಿಟಿ ಇಲಾಖೆ ಆಡಳಿತ ನಿರ್ದೇಶಕ ಪ್ರಶಾಂತಕುಮಾರ್‌ ಮಿಶ್ರಾ ಅವರು, 2001ರಲ್ಲಿ ಜೈವಿಕ ತಂತ್ರಜ್ಞಾನ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ರಾಜ್ಯದಲ್ಲಿ ಈಗಾಗಲೇ ನಾಲ್ಕು ತಂತ್ರಜ್ಞಾನ ಆಧಾರಿತ ಇನ್‌ಕ್ಯುಬೇಟರ್‌ಗಳನ್ನು ಆರಂಭಿಸಲಾಗಿದ್ದು ಈಗ ಮಣಿಪಾಲದಲ್ಲಿ ಉದ್ಘಾಟನೆಯಾಗಿರುವುದು ಐದನೆಯದು. ಈ ಕೇಂದ್ರಕ್ಕೆ ಒಟ್ಟು 5.5 ಕೋ.ರೂ. ನೆರವು ಕೊಡಲಾಗುತ್ತಿದೆ. ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಬೆಂಗಳೂರು ಬಿಟ್ಟು ಮಣಿಪಾಲದಲ್ಲಿ ಇಂತಹ ಕೇಂದ್ರವನ್ನು ಆರಂಭಿಸಲಾಗಿದೆ. ಕರಾವಳಿ ಭಾಗದ ಹೊಸ ಹೊಸ ಸಂಸ್ಥೆಗಳು ಇದರ ಪ್ರಯೋಜನ ಪಡೆದು ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next