ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ನೆರವು ನೀಡುವ ಕುರಿತು ಮನವಿ ಸಲ್ಲಿಸಿದರು. ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಸಮುದಾಯಕ್ಕೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಈ ವೇಳೆ ತಿಳಿಸಿದರು.
ಈ ಸಮುದಾಯದ ಸ್ಥಿತಿ ಶೋಚನೀಯವಾಗಿದ್ದು, ದೈನಂದಿನ ಜೀವನ ನಿರ್ವಹಣೆಯೂ ದುಸ್ತರವಾಗಿದೆ. ಜೀವನ ನಡೆಸಲು ಈ ಸಮುದಾಯದ ಹಲವಾರು ಜನ ಹಣ್ಣು ತರಕಾರಿ ಮಾರುತ್ತಿದ್ದಾರೆ, ಕೂಲಿ ಕೆಲಸ ಮಾಡಿದ್ದಾರೆ. ನಮ್ಮ ಮಕ್ಕಳ ಹಿತ ಕಾಯುವ ಸಮುದಾಯವನ್ನು ನಾವು ಘನತೆಯಿಂದ ನಡೆಸಿಕೊಳ್ಳುವುದು ಕರ್ತವ್ಯವಾಗಿದ್ದು, ಸರ್ಕಾರದ ಆರ್ಥಿಕ ಪ್ಯಾಕೇಜ್ ಈ ಸಮುದಾಯಕ್ಕೆ ಆತ್ಮ ವಿಶ್ವಾಸ ತುಂಬಲು ಸಹಕಾರಿಯಾಗಲಿದೆ ಎಂದರು.
ಇದನ್ನೂ ಓದಿ: 10 ದಿನಗಳಲ್ಲಿ ಗೋಕಾಕ್ ತಾಲೂಕಿನಲ್ಲಿ ಕೋವಿಡ್ ಚೈನ್ ಬ್ಲಾಕ್: ಶಾಸಕ ರಮೇಶ್ ಜಾರಕಿಹೊಳಿ
ಸರ್ಕಾರಿ, ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ, ಮರಣ ಹೊಂದಿದ ಸಿಬ್ಬಂದಿಗಳಿಗೆ ಅವರ ಕುಟುಂಬಸ್ಥರಿಗೆ ಅನುಕಂಪದ ಹುದ್ದೆಯನ್ನು ತ್ವರಿತವಾಗಿ ನೀಡುವಂತೆ ಹಾಗೂ ಇನ್ನಿತರೆ ವಿಷಯಗಳ ಕುರಿತು ಈ ವೇಳೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ.
ಸಚಿವರೊಂದಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಡಾ.ವೈ.ಎ.ನಾರಾಯಣ ಸ್ವಾಮಿ, ಪುಟ್ಟಣ್ಣ, ಅರುಣ ಶಹಾಪುರ, ಶಶೀಲ್ ನಮೋಷಿ, ಸಂಕನೂರ, ಹಙಮಂತ ನಿರಾಣಿ, ಹಾಗೂ ಚಿದಾನಂದ ಗೌಡ ಉಪಸ್ಥಿತರಿದ್ದರು
ಇದನ್ನೂ ಓದಿ: ತೇಜ್ ಪಾಲ್ ಖುಲಾಸೆ; ಸೆಷನ್ಸ್ ಕೋರ್ಟ್ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗೋವಾ