Advertisement

ಕೊಡಚಾದ್ರಿಯ ಮೂಕಾಂಬಿಕೆ ಸನ್ನಿಧಿಯಲ್ಲಿ ಶ್ರೀಶಾಂತ್‌ ವಿಶ್ವದರ್ಜೆಯ ಅಕಾಡೆಮಿ

10:58 AM Mar 08, 2020 | keerthan |

ಬೆಂಗಳೂರು: ವಿಶ್ವಕಪ್‌ ಟಿ20 ವಿಜೇತ ತಂಡದ ಸದಸ್ಯ, ಭಾರತ ತಂಡದ ಮಾಜಿ ವೇಗಿ, ಕೇರಳ ಎಕ್ಸ್‌ಪ್ರೆಸ್‌ ಎಸ್‌.ಶ್ರೀಶಾಂತ್‌ ಕೊಲ್ಲೂರಿನ ಕೊಡಚಾದ್ರಿ ತಪ್ಪಲಿನಲ್ಲಿ ವಿಶ್ವದರ್ಜೆಯ ಕ್ರೀಡಾ ಅಕಾಡೆಮಿ ತೆರೆಯಲು ಸಿದ್ಧತೆ ನಡೆಸಿದ್ದಾರೆ. ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಒಟ್ಟು 16 ಎಕರೆ ಜಾಗದಲ್ಲಿ ಸುಸಜ್ಜಿತ ಶ್ರೀಶಾಂತ್‌ ಅಕಾಡೆಮಿ ತಲೆ ಎತ್ತುತ್ತಿದ್ದು, ದೀಪಾವಳಿಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ. ಈ ವಿಷಯವನ್ನು ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶ್ರೀಶಾಂತ್‌ ತಿಳಿಸಿದ್ದಾರೆ.

Advertisement

ಅಕಾಡೆಮಿ ವಿಶೇಷತೆ ಏನು?: ಕ್ರಿಕೆಟ್‌, ಬ್ಯಾಡ್ಮಿಂಟನ್‌, ಟೆನಿಸ್‌, ವಾಲಿಬಾಲ್‌, ಬಾಸ್ಕೆಟ್‌ಬಾಲ್‌, ಅಥ್ಲೆಟಿಕ್ಸ್‌ ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ಕ್ರೀಡೆಗಳಲ್ಲಿನ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ಸೂಕ್ತ ತರಬೇತಿ ನೀಡಿ ಭವಿಷ್ಯದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಿಂಚುವಂತಹ ಪ್ರತಿಭಾವಂತರ ರೂಪಿಸುವ ಕೆಲಸ ಅಕಾಡೆಮಿ ವತಿಯಿಂದ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಿದ ಶ್ರೀಶಾಂತ್‌ ಹೇಳಿದ್ದು ಹೀಗೆ, “ಅಕಾಡೆಮಿ ಮುಂದಿನ ದೀಪಾವಳಿಗೆ ಲೋಕಾರ್ಪಣೆಗೊಳ್ಳಲಿದೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಉತ್ತಮ ತರಬೇತಿ ವ್ಯವಸ್ಥೆ ಇರುತ್ತದೆ. ಅತ್ಯುತ್ತಮ ಮೂಲ ಸೌಕರ್ಯದ ಜತೆಗೆ ಪ್ರತಿಯೊಬ್ಬರ ಬಗ್ಗೆ ಗಮನ ಕೊಟ್ಟು ವಿಶೇಷ ತರಬೇತಿ ನೀಡುವ ವ್ಯವಸ್ಥೆ ಇದೆ, ಕ್ರಿಕೆಟಿಗರಿಗೆ ಸ್ವತಃ ನಾನೇ ಮುಂದೆ ನಿಂತು ತರಬೇತಿ ನೀಡುತ್ತೇನೆ, ಉಳಿದ ಕ್ರೀಡೆಗಳಿಗೆ ಉತ್ತಮ ತರಬೇತುದಾರರು ಇರಲಿದ್ದಾರೆ’ ಎಂದರು.

ಯೋಗ, ಆಯುರ್ವೇದ ಆಕರ್ಷಣೆ: ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಯೋಗ, ಆಯುರ್ವೆದ ಚಿಕಿತ್ಸೆ, ಧ್ಯಾನ ಸೇರಿದಂತೆ ವಿವಿಧ ಆಯಾಮಗಳನ್ನು ಪರಿಚಯಿಸುತ್ತಿದ್ದೇವೆ. ಇದು ಮಕ್ಕಳ ಜತೆಗೂ ಪೋಷಕರಿಗೆ ಕೂಡ ವಿಶೇಷ ಅನುಭವ ನೀಡಲಿದೆ. ಜತೆಗೆ ಉಳಿದುಕೊಳ್ಳಲು ಉತ್ತಮ ವ್ಯವಸ್ಥೆ ಕೂಡ ಇರಲಿದೆ ಎಂದು ಶ್ರೀಶಾಂತ್‌ ತಿಳಿಸಿದರು

ಮೂಕಾಂಬಿಕೆಯ ಆಶೀರ್ವಾದ
ಮೂಕಾಂಬಿಕೆ ತಾಯಿಯ ಆಶೀರ್ವಾದದಿಂದ ಎಲ್ಲವು ಸುಸೂತ್ರವಾಗಿ ನಡೆಯುತ್ತಿದೆ ಎನ್ನುವುದು ಶ್ರೀಶಾಂತ್‌ ಮಾತು, ಈ ಬಗ್ಗೆ ವಿವರಿಸಿದ್ದು ಹೀಗೆ, “ಮುಂಜಾನೆಯಲ್ಲಿ ಮೂಕಾಂಬಿಕೆ ತಾಯಿ ಮಹಾಕಾಳಿ ರೂಪದಲ್ಲಿರುತ್ತಾಳೆ, ಸಂಜೆಯ ವೇಳೆ ಮಹಾ ಸರಸ್ವತಿಯಾಗಿ ಹರಸುತ್ತಾಳೆ, ಸಂಪತ್ತು, ಸಮೃದ್ಧಿ ನೀಡಿ ಕಾಪಾಡುತ್ತಾಳೆ, ಕೊಲ್ಲೂರಿನ ಅಂತಹ ಪವಿತ್ರ ಸನ್ನಿಧಿಯಲ್ಲಿ ಅಕಾಡೆಮಿ ತೆರೆಯುತ್ತಿದ್ದೇವೆ. ಹಸಿರ ತೋರಣ, ಶುದ್ಧ ಗಾಳಿಯ ನಡುವೆ ಕಲಿಕೆಯ ವಾತಾವರಣ ಭಿನ್ನವಾಗಿರುತ್ತದೆ’ ಎಂದು ತಿಳಿಸಿದರು.

ವಿದೇಶದಲ್ಲೂ ಅಕಾಡೆಮಿ
ಬಹ್ರೈನ್ , ಅಬುಧಾಬಿ, ದುಬೈ, ಕುವೈಟ್‌, ಕತಾರ್‌, ಸಿಂಗಾಪುರ, ಆಸ್ಟ್ರೇಲಿಯ, ಅಮೆರಿಕ, ದಕ್ಷಿಣ ಆಫ್ರಿಕಾದಲ್ಲೂ ಶಾಖೆ ತೆರೆಯಲಿದ್ದೇವೆ ಎಂದು ಶ್ರೀಶಾಂತ್‌ ಹೇಳಿದ್ದಾರೆ. “ವಿದೇಶದಲ್ಲೂ ಅಕಾಡೆಮಿ ನಿರ್ಮಾಣವಾಗು ತ್ತಿದೆ. ನನ್ನ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿಯೇ ಇದೆ. ಕ್ರಿಕೆಟ್‌ ಮೂಲಕ ವಿಶ್ವದ ವಿವಿಧ ಕಡೆ ಕ್ರೀಡೆಯ ಬೆಳವಣಿಗೆಗೆ ಶ್ರಮಿಸ ಲಿದ್ದೇವೆ. ಅಕಾಡೆಮಿ ಉಚಿತವಾಗಿ ನಡೆಸುತ್ತಿಲ್ಲ, ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತೇವೆ’ ಎಂದು ಶ್ರೀ ಹೇಳಿದ್ದಾರೆ.

Advertisement

ಕರ್ನಾಟಕ ಎಂದರೆ ನನಗೆ ತುಂಬಾ ಇಷ್ಟ. ಬೆಂಗಳೂರಿನಲ್ಲಿ ನನ್ನ ಶಿಕ್ಷಣ ಪೂರೈಸಿದ್ದೇನೆ. ಈಗ ಅಕಾಡೆಮಿ ಆರಂಭಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ರಾಜ್ಯ ಸರ್ಕಾರ ನನಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದೆ. ಎಲ್ಲರಿಗೂ ಆಭಾರಿಯಾಗಿದ್ದೇನೆ’
ಎಸ್‌.ಶ್ರೀಶಾಂತ್‌, ಮಾಜಿ ಕ್ರಿಕೆಟಿಗ

● ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next