ಕ್ರಿಕೆಟ್ ಮೈದಾನದಲ್ಲಿದ್ದಾಗ ಉರಿಉರಿದು ಬೀಳುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್, ಈಗ ತಣ್ಣಗಾಗಿದ್ದಾರೆ. 2011ರ ನಂತರ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಒಂದು ಹಂತಕ್ಕೆ ತಣ್ಣಗಾಗಿತ್ತು. 2013ರ ನಂತರ ಅವರ ಒಟ್ಟಾರೆ ಕ್ರಿಕೆಟ್ ಬದುಕು ತಣ್ಣಗಾಗಿ ಹೋಯಿತು. ಇದೊಂದು ದುರಂತಕಥೆ, ಇದಿರಲಿ. ಅವರೀಗ ತಣ್ಣಗಾಗುವುದಕ್ಕೆ ಇನ್ನೊಂದು ಮಹತ್ವದ ಕಾರಣವೂ ಇದೆ. ಐಪಿಎಲ್ ಸ್ಪಾಟ್‌ಫಿಕ್ಸಿಂಗ್ ಕಾರಣಕ್ಕೆ ಆಜೀವನಿಷೇಧಕ್ಕೊಳಗಾಗಿದ್ದ ಕೇರಳ ವೇಗಿ ಎಸ್.ಶ್ರೀಶಾಂತ್, ಅದರಿಂದ ಬಿಡುಗಡೆಯಾಗುವುದಕ್ಕೆ 2013ರಿಂದಲೂ ನಿರಂತರವಾಗಿ ಹೋರಾಡುತ್ತಲೇ ಇದ್ದರು. ಕಡೆಗೂ ಅವರಿಗೆ ನೆಮ್ಮದಿ ನೀಡುವ ಸುದ್ದಿ 2019, ಆ.20ರಂದು ಸಿಕ್ಕಿತು. ಬಿಸಿಸಿಐ ವಿಚಾರಣಾಧಿಕಾರಿ ಡಿ.ಕೆ.ಜೈನ್, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅವರ ಶಿಕ್ಷೆಪ್ರಮಾಣವನ್ನು 7 ವರ್ಷಕ್ಕಿಳಿಸಿದ್ದಾರೆ. ಅಲ್ಲಿಗೆ 2020 ಆಗಸ್ಟ್‌ಗೆ ಶ್ರೀಶಾಂತ್ ಮೇಲಿನ ನಿಷೇಧ ತೆರವುಗೊಳ್ಳಲಿದೆ. ಇಲ್ಲಿಯವರೆಗೆ ಪ್ರತಿದಿನವೂ ನಿಷೇಧ ನೆನಪಿಸಿಕೊಂಡು ಕುದಿಯುತ್ತಿದ್ದ ಅವರು, ಈಗ ನಿಟ್ಟುಸಿರು ಬಿಟ್ಟಿರಬಹುದು. ಆದರೆ ನಿಷೇಧ ತೆರವುಗೊಳ್ಳುವಾಗ ಅವರ ವಯಸ್ಸು 37 ಆಗಿರುತ್ತದೆ. ಯಾವುದೇ ಕ್ರಿಕೆಟಿಗ ಈ ವಯಸ್ಸಿನಲ್ಲಿ ಬಹುತೇಕ ನಿವೃತ್ತಿಯಾಗಿರುತ್ತಾನೆ. ಈಗಿನ ತೀವ್ರ ಪೈಪೋಟಿಯ ಯುಗದಲ್ಲಂತೂ ಈ ನಿವೃತ್ತಿ ಇನ್ನೂ ಬೇಗ ಬರುತ್ತದೆ. ಅಂತಹದ್ದರಲ್ಲಿ ಅವರಿಗೆ ಸಿಕ್ಕಿರುವ ವಿನಾಯ್ತಿಯಿಂದ ಲಾಭವೇನು?
2005, ಅ.25ರಂದು ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಶ್ರೀಶಾಂತ್ ಶುರು ಮಾಡಿದರು. 2011ರ ಆ.18ರಿಂದ 22ರವರೆಗೆ ಇಂಗ್ಲೆಂಡ್‌ನ ಓವೆಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದರು. ಅಲ್ಲಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಯ್ಕೆಯಾಗಲಿಲ್ಲ. ಕ್ರಿಕೆಟ್ ಮೈದಾನದಲ್ಲಿನ ಅವರ ಆಕ್ರಮಣಕಾರಿ ವರ್ತನೆ, ಏನಾದರೊಂದು ಜಗಳ ಇವೆಲ್ಲವೂ ಶ್ರೀಶಾಂತ್‌ರನ್ನು ಕಿರಿಕ್ ಪಾರ್ಟಿ ಎಂದೇ ಕರೆಸಿಕೊಳ್ಳುವಂತೆ ಮಾಡಿದ್ದವು. ಅತ್ಯುತ್ತಮ ಬೌಲರ್ ಆಗಿದ್ದರೂ, ತಂಡದಿಂದ ಹೊರಹೋಗುವುದಕ್ಕೆ ಈ ಅಂಶವೂ ಪ್ರಬಲ ಕಾರಣವಾಗಿರಲೂ ಸಾಕು. ಆದರೂ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ, ಕನಿಷ್ಠ 2019ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿತ್ತು, ಸಾಮರ್ಥ್ಯವೂ ಇತ್ತು. ಅವೆಲ್ಲವೂ ನಿರ್ನಾಮವಾಗಿದ್ದು 2013ರ ಐಪಿಎಲ್ ಸ್ಪಾಟ್‌ಫಿಕ್ಸಿಂಗ್ ಘಟನೆಯ ನಂತರ.
ಆ ವೇಳೆ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದರು. ಬುಕಿಗಳಿಂದ ಹಣಪಡೆದು ನಿರ್ದಿಷ್ಟ ಓವರ್‌ನಲ್ಲಿ ಹೇಳಿದಷ್ಟು ರನ್ ನೀಡುವ ಒಪ್ಪಂದ ಮಾಡಿಕೊಂಡಿದ್ದರು ಎನ್ನುವುದು ಅವರ ಮೇಲಿನ ಆರೋಪವಾಗಿತ್ತು. ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಪಂಜಾಬ್ ನಡುವೆ ನಡೆದ ಪಂದ್ಯದಲ್ಲಿ, ಅವರು ಎಸೆದ 2ನೇ ಓವರ್‌ನಲ್ಲಿ 14 ನೀಡುವ ಒಪ್ಪಂದವಾಗಿತ್ತು ಎಂದು ದೂರವಾಣಿ ಸಂಭಾಷಣೆಯನ್ನು ಪೊಲೀಸರು ಸಾಕ್ಷ್ಯವಾಗಿ ನೀಡಿದ್ದರು. ಆದರೆ ಆ ಓವರ್‌ನಲ್ಲಿ ಶ್ರೀ 13 ರನ್ ನೀಡಿದ್ದರು. ಆದ್ದರಿಂದ ಶ್ರೀಶಾಂತ್ ಫಿಕ್ಸಿಂಗ್ ಮಾಡಿಲ್ಲ ಎನ್ನುವುದು ಅವರ ಪರ ವಕೀಲರ ವಾದವಾಗಿತ್ತು. ಈ ವಾದಗಳೇನೆ ಇರಲಿ, ಶ್ರೀಶಾಂತ್ ಹೇಳಿದ್ದಿಷ್ಟು: ಹಿಂದಿನ ಬಹುತೇಕ ಫಿಕ್ಸಿಂಗ್ ಪ್ರಕರಣಗಳಲ್ಲಿ ಗರಿಷ್ಠ ಐದು ವರ್ಷ ಶಿಕ್ಷೆ (ಅಜರುದ್ದೀನ್‌ಗೆ ಆಜೀವ ನಿಷೇಧ ಹೇರಲಾಗಿತ್ತು, ನಂತರ ಅದನ್ನು ತೆರವುಗೊಳಿಸಲಾಗಿತ್ತು) ನೀಡಲಾಗಿತ್ತು. ನನಗೆ ಮಾತ್ರ ಯಾಕೆ ಆಜೀವ ನಿಷೇಧ ಎಂದು ಪ್ರಶ್ನಿಸಿದರು. ಸರ್ವೋಚ್ಚ ನ್ಯಾಯಾಲಯ, ಈ ವಾದವನ್ನು ಪರಿಗಣಿಸಿ ಅವರ ಆಜೀವ ನಿಷೇಧವನ್ನು ರದ್ದುಮಾಡಿ, ಶಿಕ್ಷಾವಧಿಯನ್ನು ಮರುನಿಗದಿ ಮಾಡಿ ಎಂದು ಬಿಸಿಸಿಐಗೆ ಸೂಚಿಸಿತು. ಕಡೆಗೂ ಅವರ ನಿಷೇಧ 7 ವರ್ಷಕ್ಕಿಳಿಯಿತು.
ಶ್ರೀಶಾಂತ್‌ಗೆ ಆದ ಲಾಭವೇನು? ನಷ್ಟವೇನು?
ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆಯನ್ನು ಬಿಸಿಸಿಐ ಈಗ 7 ವರ್ಷಕ್ಕಿಳಿಸಿದೆ. ಅದರಿಂದ ಆದ ಲಾಭವೇನು? ವ್ಯಾವಹಾರಿಕ ದೃಷ್ಟಿಯಿಂದ ಅವರಿಗೆ ಹಲವಾರು ಲಾಭಗಳಿವೆ. ನಿಷೇಧ ಮುಗಿದ ಮೇಲೆ ಅವರು ಭಾರತೀಯ ಕ್ರಿಕೆಟ್ ವ್ಯವಸ್ಥೆಯಲ್ಲಿ ಮತ್ತೆ ಬೇರೆ ರೀತಿಯಲ್ಲಿ ಸ್ಥಾನ ಪಡೆಯಲು ಅವಕಾಶಗಳಿವೆ. ಬಿಸಿಸಿಐನ ಅಕಾಡೆಮಿಗಳನ್ನು ಬಳಸಬಹುದು, ಹುದ್ದೆಗಳಿಗೆ ಸ್ಪರ್ಧಿಸಬಹುದು. ಕೋಚ್ ಆಗಬಹುದು. ಮುಖ್ಯವಾಗಿ ಕೇರಳ ಕ್ರಿಕೆಟ್ ಸಂಸ್ಥೆಯ ಎಲ್ಲ ಸೌಲಭ್ಯಗಳು ಇನ್ನು ಅವರಿಗೆ ತೆರೆದುಕೊಳ್ಳುತ್ತವೆ. ಅವರು ಅಲ್ಲಿ ಅನುಮತಿಯ ಮೇರೆಗೆ ಅಥವಾ ಇನ್ನಾವುದೇ ರೂಪದಲ್ಲಿ ಅಭ್ಯಾಸ ನಡೆಸಬಹುದು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೀಕ್ಷಕ ವಿವರಣೆ ಮಾಡಬಹುದು.
ಆದರೆ…ಒಬ್ಬ ಕ್ರಿಕೆಟಿಗನಾಗಿ ಶ್ರೀಶಾಂತ್ ಬಾಗಿಲು ಮುಚ್ಚಿದೆ. ಇಲ್ಲಿಯವರೆಗೆ ಯಾವುದೇ ವೃತ್ತಿಪರ ಕ್ರಿಕೆಟ್ ಕೂಟಗಳಲ್ಲಿ ಶ್ರೀಶಾಂತ್‌ಗೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಅವರಿನ್ನು ಯಾವುದೇ ದೇಶೀಯ, ವಿದೇಶೀಯ ಲೀಗ್‌ಗಳಲ್ಲಿ ಆಡುವುದು ತೀರಾ ಕಷ್ಟ. ಆಡಿದರೂ ಹಿಂದಿನ ಗುಣಮಟ್ಟವಿರುವುದಿಲ್ಲ. ದೀರ್ಘಕಾಲ ಬೌಲಿಂಗ್ ಮಾಡದಿರುವುದರಿಂದ ಅವರ ಕೌಶಲ್ಯದ ಮಟ್ಟ ಕುಗ್ಗಿರುತ್ತದೆ. ಬಹಳ ಶ್ರಮವಹಿಸಿದರೆ, ಈಗಷ್ಟೇ ಕ್ರಿಕೆಟ್ ಕಣ್ಣುಬಿಡುತ್ತಿರುವ ದೇಶಗಳಲ್ಲಿ ಆಡಲು ಸಾಧ್ಯವಿದೆ. ಅಷ್ಟು ಮಾತ್ರ ಅವರಿಗಿರುವ ಅವಕಾಶ.