ಕೊಪ್ಪಳ: ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಪ್ರಾಮಾಣಿಕತೆ, ಬದ್ಧತೆ, ನಿಷ್ಠೆಯಿಂದ ಸಿಎಂ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡಬೇಕಾಗುತ್ತದೆ ಎನ್ನುವ ಮೂಲಕ ತಾವೂ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವ ಮಾತನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರು ಪರೋಕ್ಷವಾಗಿ ನುಡಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಎದ್ದಿರುವ ಸಿಎಂ ಸ್ಥಾನದ ಕೂಗಿನ ವಿಚಾರಕ್ಕೆ ನೀವು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಯಾರಾದರೂ ಸನ್ಯಾಸಿಗಳು ಇದ್ದಾರಾ? ಎಲ್ಲರಿಗೂ ಅಧಿಕಾರ ಬೇಕು ಎನ್ನುವ ಆಸೆ ಇರುತ್ತದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕನನ್ನು ಶಾಸಕಾಂಗದ ಸಭೆಯಲ್ಲಿ ಆಯ್ಕೆ ಮಾಡುತ್ತಾರೆ. ನಮ್ಮ ಪಕ್ಷ ಇನ್ನೂ ಅಧಿಕಾರಕ್ಕೇ ಬಂದಿಲ್ಲ. ಈಗ ಬಿಜೆಪಿ ಸರ್ಕಾರ ಕಿತ್ತೊಗೆಯುವ ಕೆಲಸ ನಾವು ಮಾಡಬೇಕಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದಾರೆ ಎಂದರಲ್ಲದೇ ನಮಲ್ಲಿ ಯಾವ ಗೊಂದಲವೂ ಇಲ್ಲ ಎಂದರು.
ಇದನ್ನೂ ಓದಿ:“ಮುಂದಿನ ಮುಖ್ಯಮಂತ್ರಿ” ಹೇಳಿಕೆ ಕೊಡಬೇಡಿ: ಶಾಸಕರಲ್ಲಿ ಸಿದ್ದರಾಮಯ್ಯ ಮನವಿ
ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎಂದು ಕೆಲವು ಶಾಸಕರು ಅಭಿಮಾನದಿಂದ ಹೇಳುತ್ತಿರಬಹುದು. ಅದು ಅವರ ವೈಯಕ್ತಿಕ ಹೇಳಿಕೆ. ಆದರೆ ಪಕ್ಷದ ಹೇಳಿಕೆಯಲ್ಲ. ವೈಯಕ್ತಿಕವಾಗಿ ಅಭಿಮಾನದಿಂದ ಆ ರೀತಿ ಹೇಳುತ್ತಿರಬಹುದು. ಈಗಾಗಲೆ ಪಕ್ಷದ ಹೈಕಮಾಂಡ್ ಅಂತವರಿಗೆ ಸೂಚನೆ ಕೊಟ್ಟಿದೆ. ಅಲ್ಲದೆ ಸಿಎಂ ಸ್ಥಾನದ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದು ತಪ್ಪು. ರಾಜ್ಯದಲ್ಲಿ ಹಲವು ಸಮುದಾಯಗಳಿವೆ. ನಮ್ಮವರು ಸಿಎಂ ಆಗಲಿ ಎಂದು ಹಲವು ಶಾಸಕರು ಹೇಳುತ್ತಿರಬಹುದು ಎಂದರು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆಯಲ್ಲಿ ಹಲವು ಸಾವು ನೋವು ಸಂಭವಿಸಿದವು. ಸರ್ಕಾರದ ವೈಫಲ್ಯವೇ ಇದೆಲ್ಲದಕ್ಕೂ ಕಾರಣ. ಈಗ ಮೂರನೇ ಅಲೆಯು ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸರ್ಕಾರ ಪೂರ್ವ ತಯಾರಿಯೇ ಇಲ್ಲ. ಡೆಲ್ಟಾ ಪ್ಲಸ್ ತುಂಬ ಅಪಾಯಕಾರಿಯಾಗಿದೆ. ಆದರೂ ಸರ್ಕಾರಕ್ಕೆ ಈ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ದಪ್ಪ ಚರ್ಮದ ಸರ್ಕಾರವಾಗಿದೆ. ಚರ್ಮಗೆಟ್ಟ ಸರ್ಕಾರ ಎಂದು ಸರ್ಕಾರದ ವಿರುದ್ದ ಕಟುವಾಗಿ ಟೀಕಿಸಿದರಲ್ಲದೇ, ಕೋವಿಡ್ ನಿರ್ವಹಣೆಯ ಕುರಿತು ಸಮಾಲೋಚನೆ ನಡೆಸಲು ಸರ್ಕಾರವು ಕೂಡಲೇ ವಿಶೇಷ ಅಧಿವೇಶನ ಕರೆಯಲಿ. ಸಾಮಾಜಿಕ ಅಂತರದಲ್ಲಿ ಕೋವಿಡ್ ನಿಯಮ ಪಾಲಿಸಲಿ, ನಮ್ಮ ಸಲಹೆಗಳನ್ನೂ ನಾವು ನೀಡಲಿದ್ದೇವೆ ಎಂದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಸೇರಿ ಇತರರು ಉಪಸ್ಥಿತರಿದ್ದರು.