ಕೋಲಾರ: ಐಎನ್‌ಡಿಐಎ ಕೂಟ ಎಷ್ಟೇ ಕುತಂತ್ರ ಮಾಡಿ ರಾಮನ ಫ್ಲೆಕ್ಸ್,ಕಟೌಟ್ ಹಾಕಲು ಅಡ್ಡಿಪಡಿಸಿದರೂ, ಆ ಪಕ್ಷಗಳಲ್ಲಿನ ರಾಮಭಕ್ತರೇ ಹೊರ ಬಂದು ರಾಮನಿಗೆ ಜೈಕಾರ ಹಾಕಿದ್ದಾರೆ. ಅವರು ತಮ್ಮ ನೀತಿ ಬದಲಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಯಾವೊಬ್ಬ ಹಿಂದೂ ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವುದಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಕೋಲಾರದ ವಿವಿಧ ದೇವಾಲಯಗಳ ನಡೆದ ಸೀತಾರಾಮನ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಬೃಹತ್ ಎಲ್‌ಇಡಿ ಪರದೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀರಾಮ ಮಂದಿರದ ಉದ್ಘಾಟನೆಯ ಕ್ಷಣಕ್ಕಾಗಿ ಇಡೀ ಪ್ರಪಂಚದ ರಾಮಭಕ್ತರು 500 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದರು. ಈ ದಿನ ಸಂಪೂರ್ಣವಾಗಿ ರಾಮ ಭಕ್ತರಿಗೆ ಸಮಾಧಾನ ತಂದಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ಇದನ್ನು ನೋಡುತ್ತಿದ್ದರೆ ರಾಮನೇ ಪ್ರತ್ಯಕ್ಷನಾಗಿ ನಿಂತಿರುವಂತೆ ಕಾಣುತ್ತಿದೆ ತಿಳಿಸಿದರು.
ಒಳ್ಳೆಯ ಕೆಲಸ ಮಾಡಲಿ: ಕಾರ್ಯಕ್ರಮವನ್ನು ಹತ್ತಿಕ್ಕುವ ಸಲುವಾಗಿ ಡೀಸಿ, ಪೊಲೀಸರನ್ನು, ಅಧಿಕಾರಿ ಗಳನ್ನು ದುರುಪಯೋಗಪಡಿಸಿಕೊಂಡು ಎಲ್ಲಾ ಕಡೆ ಬ್ಯಾನರ್, ಫ್ಲೆಕ್ಸ್ ಹಾಕುವುದಕ್ಕೆ, ದೇವರನ್ನು ಮೆರವಣಿಗೆ ನಡೆಸಲು ಅನುಮತಿ ಪಡೆಯಬೇಕೆಂದು ಹೇಳಿ ತೊಂದರೆ ನೀಡಲು ಮುಂದಾದರು. ಆದರೆ ಅದ್ಯಾವುದೂ ನಡೆಯಲಿಲ್ಲ. ಅಂತಹ ಕೆಲಸಗಳಿಗೆ ಮುಂದಾಗಿರುವ ಆ ಪ್ರಜೆಗಳಿಗೆ ದೇವರು ಒಳ್ಳೆಯ ಬುದ್ಧಿಯನ್ನು ಕೊಡಲಿ. ಪಾಕಿಸ್ತಾನದ ಏಜೆಂಟರಂತೆ ವರ್ತಿಸದೆ ಇಲ್ಲಿಯೇ ಒಳ್ಳೆಯ ಕೆಲಸ ಮಾಡಲಿ ಎಂದರು.
ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರು: ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆಯಾಗಿದ್ದು, ಇಡೀ ದೇಶದಲ್ಲಿ ವಾಲ್ಮೀಕಿ ಆಶ್ರಮ ಇರುವುದು ನಮ್ಮ ಜಿಲ್ಲೆಯ ಆವಣಿಯಲ್ಲಿ. ಆ ಜಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರದೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಅನೇಕ ಕುರುಹುಗಳು ಕಂಡುಬಂದಿದ್ದು, ದೇವರುಗಳ ನೆಲೆಬೀಡು ಆಗಿದೆ. ಅಯೋಧ್ಯೆಯ ವಿಮಾನ ನಿಲ್ದಾಣಕ್ಕೂ ವಾಲ್ಮೀಕಿ ಹೆಸರಿಟ್ಟು ಗೌರವ ನೀಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಬಿಜೆಪಿ ಮುಖಂಡ ವಿಜಯಕುಮಾರ್, ಅಪ್ಪಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಚಲಪತಿ ಹಾಗೂ ಮತ್ತಿತರರಿದ್ದರು.