Advertisement

ಅರಸ್‌ ಡಬ್ಬಲ್‌ ಸೆಂಚುರಿಗೆ ಒಂದೇ ಚಿತ್ರ ಬಾಕಿ!

11:46 AM May 01, 2017 | Sharanya Alva |

ಒಂದು ಸಿನಿಮಾಗೆ ಸಂಕಲನ ಕೆಲಸ ಮಾಡೊದು ಸುಲಭದ ಕೆಲಸವಲ್ಲ. ತಾಳ್ಮೆ, ಚಾಕಚಕ್ಯತೆ ಜೊತೆಗೆ ವೇಗವೂ
ಜೋರಾಗಿರಬೇಕು. ಇವೆಲ್ಲವನ್ನು ನಿರ್ವಹಿಸುತ್ತಲೇ ಬರೋಬ್ಬರಿ 200 ಚಿತ್ರಗಳ ಗಡಿ ತಲುಪುವುದು ಇನ್ನೂ ಕಷ್ಟದ
ಕೆಲಸವೇ ಸರಿ. ಅಂಥದ್ದೊಂದು ಗುರಿ ತಲುಪಿದ್ದಾರೆ ನಾಗೇಂದ್ರ ಅರಸ್‌. ಹೌದು, ನಾಗೇಂದ್ರ ಅರಸ್‌ ಈಗಾಗಲೇ
199 ಸಿನಿಮಾಗಳಿಗೆ ಕತ್ತರಿ ಹಿಡಿದಿದ್ದಾರೆ. ಇನ್ನೊಂದು ಸಿನಿಮಾಗೆ ಕತ್ತರಿ ಪ್ರಯೋಗಿಸಿದರೆ, 200 ಚಿತ್ರಗಳಿಗೆ ಕತ್ತರಿ
ಹಿಡಿದ ಖ್ಯಾತಿ ಅವರದಾಗುತ್ತೆ.

Advertisement

ನಾಗೇಂದ್ರ ಅರಸ್‌ ಚಿತ್ರರಂಗಕ್ಕೆ ಬಂದು ಎರಡು ದಶಕಗಳೇ ಕಳೆದಿವೆ. 1995 ರಲ್ಲಿ ಗಾಂಧಿನಗರಕ್ಕೆ ಕಾಲಿಟ್ಟ ಜನಪ್ರಿಯ ನಟ ಸುಂದರಕೃಷ್ಣ ಅರಸ್‌ ಅವರ ಮಗ ನಾಗೇಂದ್ರ ಅರಸ್‌, ಚಿಕ್ಕಪ್ಪ ಸುರೇಶ್‌ ಅರಸ್‌ ಅವರ ಬಳಿ ಐದು ವರ್ಷ ಕೆಲಸ ಮಾಡಿದ್ದಾರೆ. ಆ ಬಳಿಕ ಅವರು ಸ್ವತಂತ್ರವಾಗಿ ಮೊದಲು ಕತ್ತರಿ ಪ್ರಯೋಗಿಸಿದ್ದು, ದರ್ಶನ್‌ ಅಭಿನಯದ “ಮೆಜಸ್ಟಿಕ್‌’ ಚಿತ್ರಕ್ಕೆ. ಆ ಸಿನಿಮಾ ಸೂಪರ್‌ ಹಿಟ್‌ ಆಗುತ್ತಿದ್ದಂತೆಯೇ ನಾಗೇಂದ್ರ ಅರಸ್‌, ಬಿಜಿಯಾದರು. ಸುದೀಪ್‌, ದರ್ಶನ್‌, ಶಿವರಾಜ್‌ಕುಮಾರ್‌, ರಮೇಶ್‌ ಅರವಿಂದ್‌ ಮತ್ತು ಕಮಲ್‌ ಹಾಸನ್‌ ಹೀಗೆ ಹಲವು ನಟರ ಚಿತ್ರಗಳಿಗೆ ಕತ್ತರಿ ಹಾಕುತ್ತಲೇ ಹೊಸಬರ, ಹಳಬರ ಚಿತ್ರಗಳಲ್ಲೂ ಕೆಲಸ ಮಾಡುತ್ತ ಬಂದರು. ಈಗ ಅವರಿಗೇ ಗೊತ್ತಿಲ್ಲದಂತೆ 200 ಚಿತ್ರಗಳ ಗಡಿ ತಲುಪಿದ್ದಾರೆ. ನಾಗೇಂದ್ರ ಅರಸ್‌ ಕೇವಲ ಸಂಕಲನಕಾರರಷ್ಟೇ ಅಲ್ಲ, ಅವರೊಬ್ಬ ನಟರೂ ಹೌದು, ನಿರ್ದೇಶಕರೂ ಕೂಡ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ನಾಗೇಂದ್ರ ಅರಸ್‌, ಏಳು ಸಿನಿಮಾಗಳಿಗೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಸಂಕಲನ, ನಟನೆ, ನಿರ್ದೇಶನ ಈ ಮೂರನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತಿರುವ ನಾಗೇಂದ್ರ ಅರಸ್‌ಗೆ, ಸಂಕಲನ ಕೆಲಸವೇ ಇಷ್ಟವಂತೆ. “ಅದೇ ನನಗೆ ಬದುಕು ಕೊಟ್ಟಿದೆ. ಕೊನೆಯ ಉಸಿರು ಇರೋವರೆಗೂ ಸಂಕಲನ ಕೆಲಸವನ್ನೇ ಮಾಡಿಕೊಂಡಿರುತ್ತೇನೆ’ ಎಂದು ಹೇಳುತ್ತಾರೆ. ಆದರೆ, ಅವರಿಗೊಂದು ಬೇಸರವಿದೆ. ಬಹುತೇಕರಿಗೆ ನಾಗೇಂದ್ರ ಅರಸ್‌ಗೆ ಸಂಕಲನ ಮಾಡಲು ಸಮಯವಿಲ್ಲ, ಅವರು ತಮ್ಮ ಸಹಾಯಕರನ್ನು ಕೆಲಸಕ್ಕೆ ಕೂರಿಸುತ್ತಾರಂತೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರಂತೆ.
ಇದಕ್ಕೆ ಉತ್ತರ ಕೊಡುವ ಅವರು, “ನಾನು ವರ್ಷ ಪೂರ್ತಿ ನಟನೆ, ನಿರ್ದೇಶನ ಮಾಡುವುದಿಲ್ಲ. ನನಗೆ ಸಂಕಲನವೇ ಮುಖ್ಯ. ಇದುವರೆಗೆ ಸ್ಟಾರ್‌ ನಟರು ಸೇರಿದಂತೆ ಹೊಸಬರ ಜತೆಯಲ್ಲೂ ಕೆಲಸ ಮಾಡಿದ್ದೇನೆ. ಯಾವ ಸಿನಿಮಾ ಸಿಗುತ್ತೋ, ಅಪ್ಪಿಕೊಂಡು ಮಾಡುತ್ತಿದ್ದೇನೆ’ ಎನ್ನುತ್ತಾರೆ ಅರಸ್‌.

Advertisement

Udayavani is now on Telegram. Click here to join our channel and stay updated with the latest news.

Next