Advertisement

ಸಾಹಿತಿ, ನಿವೃತ್ತ ಬ್ಯಾಂಕ್‌ ಅಧಿಕಾರಿ ಎಸ್‌. ಡಿ. ಪೆಜತ್ತಾಯ ನಿಧನ

11:37 AM Jul 29, 2019 | keerthan |

ಉಡುಪಿ: ಸಾಹಿತಿ, ಸಿಂಡಿಕೇಟ್‌ ಬ್ಯಾಂಕಿನ ನಿವೃತ್ತ ಪ್ರಬಂಧಕ ಶ್ರೀನಿವಾಸ ದೇವೇಂದ್ರ ಪೆಜತ್ತಾಯ (88) ಅವರು ಜು. 29ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Advertisement

21ರ ಹರೆಯದ ಪಲಿಮಾರು ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿದ್ದ ಅವರು 1960- 70ರ ದಶಕದಲ್ಲಿ ಪಲಿಮಾರು ಮಠದ ದಿವಾನರಾಗಿ ಸೇವೆಸಲ್ಲಿಸಿದ್ದರು. ಮಣಿಪಾಲದ ಡಾ| ಟಿ.ಎಂ.ಎ.ಪೈ ಹಾಗೂ ಟಿ.ಎ. ಪೈಯವರಿಗೆ ಆಪ್ತರೆನಿಸಿ ಅವರ ಜತೆ ಸಿಂಡಿಕೇಟ್‌ ಬ್ಯಾಂಕ್‌ ಸಹಿ ತ ವಿವಿಧ ರಂಗಗಳಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಸಿಂಡಿಕೇಟ್‌ ಬ್ಯಾಂಕಿನ ಮಂಗಳೂರು, ಕುಳಾಯಿ, ಉಡುಪಿ, ಮಣಿಪಾಲ ಶಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ವಾದಿರಾಜರು ರಚಿಸಿದ ಲಕ್ಷಿಶೋಭಾನೆ ಹಾಡನ್ನು ಮೊತ್ತ ಮೊದಲ ಬಾರಿಗೆ ತುಳುವಿಗೆ ಭಾಷಾಂತರಿಸುವ ಮೂಲಕ ಅನೇಕ ಸಾಹಿತಿಗಳು ಹಾಗೂ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದರು. ಭಕ್ತ ಕನಕದಾಸರ ಕನಕೋಪನಿಷತ್‌ ಭಾಷಾಂತರ ಅವರ ಇನ್ನೊಂದು ವಿಶೇಷ ಸಾಧನೆ. ಕನ್ನಡ ಸಾಹಿತ್ಯದಲ್ಲೂ ವೈವಿಧ್ಯಮಯವಾದ ಕಥೆ, ಕವನ, ಕೀರ್ತನೆಗಳನ್ನು ರಚಿಸಿದರು. “ಸಂಗ್ರಹ ರಾಮಾಯಣ’ ಮತ್ತು “ಮಹಾಭಾರತ’ವನ್ನು ತುಳುವಿಗೆ ಅನುವಾದ ಮಾಡಿದ್ದ ಪೆಜತ್ತಾಯರಿಗೆ ತುಳು ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

ಶ್ರೀಕೃಷ್ಣಮಠ, ಅಷ್ಟಮಠ ಸಹಿತ ಅನೇಕ ಧಾರ್ಮಿಕ, ಸಾಂಸ್ಕೃತಿಕ ಸಂಘ ಟನೆಗಳ ಅಭ್ಯುದಯಕ್ಕಾಗಿ ಶ್ರಮಿಸಿದ್ದರು. ಅವರನ್ನು ವಿವಿಧ ಸಂಘ ಸಂಸ್ಥೆ ಗಳು ಸಮ್ಮಾನಿಸಿದ್ದವು. ಪರ್ಯಾಯ ಪಲಿಮಾರು, ಪೇಜಾವರ, ಪುತ್ತಿಗೆ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

ಕೃತಿಗಳು
ನಿವೃತ್ತಿ ಬಳಿಕ ಕನ್ನಡ ಹಾಗೂ ತುಳು ಭಾಷೆಯಲ್ಲಿ ಸುಂದರ ಬಣ್ಣದ ಹಕ್ಕಿಗಳು, ತುಳು ಭಾಷೆಡ್‌ ಲಕ್ಷಿ ಶೋಭಾನೆ, ಮದಪೆರುಂಡೇ, ಶ್ರೀ ಗುರುವಾದಿರಾಜೆರೆ ತುಳುದೇಶೊ ಸಂಚಾರೋ, ಕೋಟಿ ಚೆನ್ನಯ ಸುಪ್ರಭಾತ ಸೀಡಿ, ಆಚಾರ್ಯ ಮಧೆರೆ ಮಾನಾದಿಗೆ, ತತ್ವ ಸಿದ್ಧಾಂತೊದ ಸಾನಾದಿಗೆ, ತುಳು ಭಾಷೆಡ್‌ ಕನಕೋ ಪನಿಷತ್‌, ತಾಯಿ ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದರು. ಅವರು ಬರೆದಿದ್ದ ಸುಮಾರು 500ಕ್ಕೂ ಮಿಕ್ಕಿದ ಪುಟಗಳಿರುವ ತುಳುಭಾಷೆಡ್‌ ಕುಮಾರವ್ಯಾಸ ಭಾರತೋ ಕೃತಿಯು ತುಳುವಿನ ಒಂದು ಮಹಾನ್‌ ಗ್ರಂಥ ಎಂದೆನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next