Advertisement

ನೈಸರ್ಗಿಕ ವಿಕೋಪ : 3.22 ಕೋ.ರೂ. ಪರಿಹಾರ ವಿತರಣೆ

12:13 AM Mar 16, 2022 | Team Udayavani |

ಬೆಂಗಳೂರು: ನೈಸರ್ಗಿಕ ವಿಕೋಪದಿಂದ ಮೀನುಗಾರರ ಸಾವು, ದೋಣಿ/ಬಲೆ ಹಾನಿ ಹಾಗೂ ವೈದ್ಯಕೀಯ ವೆಚ್ಚ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಕಳೆದ ಸಾಲಿನಲ್ಲಿ ಸಂತ್ರಸ್ತರಿಗೆ 3.22 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಅವರು ತಿಳಿಸಿದ್ದಾರೆ.

Advertisement

ಶೂನ್ಯವೇಳೆಯಲ್ಲಿ ಬಿಜೆಪಿಯ ಗಣಪತಿ ದುಮ್ಮಾ ಉಳ್ವೇಕರ್‌ ಪ್ರಸ್ತಾವಿಸಿದ ವಿಷಯಕ್ಕೆ ಸಂಬಂಧಿಸಿಲಿಖಿತ ಉತ್ತರ ನೀಡಿದ ಸಚಿವರು, ಮೀನುಗಾರಿಕೆಯಲ್ಲಿ ತೊಡಗಿರುವಾಗ ನೀರಿನಲ್ಲಿ ಮುಳುಗಿ ಮರಣ ಹೊಂದಿದ ಪ್ರಕರಣಗಳಿಗೆ ಸರಕಾರ 6 ಲಕ್ಷ ರೂ. ಪರಿಹಾರ ನೀಡುತ್ತದೆ. ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾಗ ಹೊರತುಪಡಿಸಿ, ಉಳಿದ ಸಂದರ್ಭ ಅಂದರೆ ಧಕ್ಕೆಯಲ್ಲಿ/ಬಂದರಿನ ಒಳಗೆ/ಅಧಿಕೃತ ಇಳಿದಾಣ ಕೇಂದ್ರ/ನದಿ ದಡದಲ್ಲಿ ಮರಣ ಹೊಂದಿದ ಪ್ರಕರಣಗಳು ಹಾಗೂ ಮೀನುಗಾರಿಕೆಯಲ್ಲಿ ತೊಡಗಿದಾಗ ಅನಾರೋಗ್ಯದಿಂದ ಮೃತಪಟ್ಟ ಪ್ರಕರಣಗಳಿಗೆ ಆ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

83 ಪ್ರಕರಣಗಳು ವರದಿ
ಅದೇ ರೀತಿ, ಪ್ರಾಕೃತಿಕ ವಿಕೋಪದಿಂದ ನಾಡದೋಣಿ/ ಮೋಟರೀಕೃತ ದೋಣಿಗಳ ಹಾನಿ ಮತ್ತು ಬಲೆ ಮತ್ತಿತರ ಸೊತ್ತು ಹಾನಿಗೆ ಸವಕಳಿ ಕಳೆದು ಗರಿಷ್ಠ ಒಂದು ಲಕ್ಷ ರೂ. ಅಥವಾ ಖರೀದಿ/ದುರಸ್ತಿಯ ಶೇ. 50ರಷ್ಟು ಮೌಲ್ಯವನ್ನು ಪರಿಹಾರವಾಗಿ ನೀಡಲಾಗುವುದು. 2020-21ರಲ್ಲಿ ಮರಣ, ದೋಣಿ/ಬಲೆ ಹಾನಿ ಹಾಗೂ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದ 83 ಪ್ರಕರಣಗಳು ವರದಿಯಾಗಿದ್ದು, 3.22 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದರು.

ಇದನ್ನೂ ಓದಿ:ಸಬ್‌ ಕಾ ವಿಶ್ವಾಸ್‌ ಸೇ ಕಾಂಗ್ರೆಸ್‌ ಸರ್ವನಾಶ್‌: ಬೋಪಯ್ಯ

ಹೆಚ್ಚುವರಿ ಪರಿಹಾರ
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸé ಸಂಪದ ಯೋಜನೆಯ ಉಪ ಯೋಜನೆಯಾದ ಜನತಾ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿ ಮೃತ ಮೀನುಗಾರರ ಕುಟುಂಬಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರೂ. ಪರಿಹಾರ ಲಭ್ಯವಾಗುವುದು. ಹಾಗೂ ಶಾಶ್ವತ ಅಂಗವಿಕಲರಾದವರಿಗೆ 2.50 ಲಕ್ಷ ರೂ. ಪರಿಹಾರ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

Advertisement

49 ಕೋಟಿ ರೂ. ಮನ್ನಾ
2017-18 ಮತ್ತು 2018-19ರಲ್ಲಿ ಶೇ. 2ರ ಬಡ್ಡಿದರದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಸಾಲ ಪಡೆದ 20,066 ಮೀನುಗಾರರ ಹೊರಬಾಕಿ ಸಾಲ 49 ಕೋಟಿ ರೂ. ಮನ್ನಾ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next