ಕಡಬ: ಪುತ್ತೂರು ಮಲಂಕರ ಸಿರಿಯನ್ ಕೆಥೋಲಿಕ್ ಧರ್ಮಪ್ರಾಂತದ ಪ್ರಥಮ ಧರ್ಮಾಧ್ಯಕ್ಷ (ಬಿಷಪ್), ಮಲಂಕರ ಸಿರಿಯನ್ ಕೆಥೋಲಿಕ್ ಧರ್ಮಸಭೆಯ ಹಿರಿಯ ಧರ್ಮಾಧ್ಯಕ್ಷರಲ್ಲಿ ಓರ್ವರಾದ ರೈ|ರೆ| ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ (67) ಅವರು ಕೇರಳದ ತಿರುವಲ್ಲಾದ ಪುಷ್ಪಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜ. 16ರಂದು ನಿಧನಹೊಂದಿದರು.
ಕೇರಳದ ತಿರುವಲ್ಲಾ ಮೂಲದ ಒಟ್ಟತೆಂಙಿಲ್ ವರ್ಗೀಸ್ ಹಾಗೂ ಮರಿಯಮ್ಮ ದಂಪತಿಯ ಪುತ್ರನಾಗಿ 1950 ನ. 1ರಂದು ಜನಿಸಿದ ಡಾ| ದಿವನ್ನಾಸಿಯೋಸ್ ಅವರ ಕುಟುಂಬವು ಕರ್ನಾಟಕಕ್ಕೆ ವಲಸೆ ಬಂದು ಆರಂಭದಲ್ಲಿ ಪುತ್ತೂರು ತಾಲೂಕಿನ ಎಂಜಿರ ಹಾಗೂ ಆ ಬಳಿಕ ಇಚ್ಲಂಪಾಡಿಯಲ್ಲಿ ನೆಲೆ ನಿಂತಿತು. 1978 ಎಪ್ರಿಲ್ 20ರಂದು ಬೆನಡಿಕ್ಟ್ ಮಾರ್ ಗ್ರಿಗೋರಿಯೋಸ್ ಮಹಾ ಧರ್ಮಾಧ್ಯಕ್ಷ
ರಿಂದ ಯಾಜಕಾಭಿಷೇಕ ಸ್ವೀಕರಿಸಿದ ಅವರು 1997ರಲ್ಲಿ ಬತ್ತೇರಿ ಧರ್ಮಪ್ರಾಂತದ ದ್ವಿತೀಯ ಧರ್ಮಾಧ್ಯಕ್ಷರಾಗಿ ಪೀಠಾರೋಹಣಗೈದಿದ್ದರು. ಅನಂತರ 2010ರಲ್ಲಿ ನೂತನವಾಗಿ ಸ್ಥಾಪಿತವಾದ ಪುತ್ತೂರು ಧರ್ಮಪ್ರಾಂತದ ಪ್ರಥಮ ಧರ್ಮಾಧ್ಯಕ್ಷರಾಗಿ ನಿಯುಕ್ತಿಗೊಂಡು ಭೌಗೋಳಿಕವಾಗಿ ವಿಶಾಲವಾದ ವ್ಯಾಪ್ತಿಯನ್ನು ಹೊಂದಿರುವ ಧರ್ಮಪ್ರಾಂತಕ್ಕೆ ಭದ್ರವಾದ ಬುನಾದಿ ಹಾಕಿಕೊಡಲು ಶ್ರಮಿಸಿದ್ದರು.
2017ರ ಜನವರಿಯಲ್ಲಿ ಅನಾರೋಗ್ಯ ಕಾರಣದಿಂದಾಗಿ ಧರ್ಮಾಧ್ಯಕ್ಷ ಹುದ್ದೆಯಿಂದ ನಿವೃತ್ತಿ ಹೊಂದಿ ತಿರುವಲ್ಲಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸಂಗೀತ ಪ್ರೇಮಿಯಾಗಿದ್ದ ಅವರು ರೋಮಿನ ಗ್ರಿಗೋರಿಯನ್ ವಿಶ್ವವಿದ್ಯಾನಿಲಯದಿಂದ ಶ್ರೀ ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕತೆ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದರು.
ಮೃತರ ಅಂತ್ಯವಿಧಿ ಜ. 18ರಂದು ಅಪರಾಹ್ನ 2 ಗಂಟೆಗೆ ತಿರುವಲ್ಲಾ ಸೈಂಟ್ ಜೋನ್ಸ್ ಕೆಥೆಡ್ರಲ್‌ನಲ್ಲಿ ನೆರವೇರಲಿದೆ ಎಂದು ಪುತ್ತೂರು ಧರ್ಮಪ್ರಾಂತದ ಪ್ರಕಟನೆ ತಿಳಿಸಿದೆ.