Advertisement
ತಾಲೂಕಿನ ಶಿರಗುಪ್ಪಿಯ ಸಮುದಾಯ ಭವನದಲ್ಲಿರುವ ಮೇವು ಬ್ಯಾಂಕ್ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 9 ಮೇವು ಬ್ಯಾಂಕ್ ಆರಂಭಿಸಲಾಗಿದ್ದು, ಅಗತ್ಯವೆನಿಸಿದರೆ ಇನ್ನಷ್ಟು ಮೇವು ಬ್ಯಾಂಕ್ ಆರಂಭಿಸಲಾಗುವುದು. ಜಿಲ್ಲೆಯಲ್ಲಿ ಇನ್ನೂ 7 ವಾರಕ್ಕಾಗುವಷ್ಟು ಮೇವಿನ ದಾಸ್ತಾನಿದೆ. ಪ್ರತಿ ಕೆಜಿ ಮೇವಿಗೆ 2 ರೂ.ಗಳಂತೆ ಮೇವು ನೀಡಲಾಗುವುದು. ಶಿರಗುಪ್ಪಿಯಲ್ಲಿ 27 ಟನ್ ಮಾರಾಟವಾಗಿದ್ದು, ಇನ್ನು 7 ಟನ್ ಉಳಿದಿದೆ. ಮೇವು ಬೆಳೆಯಲು ಈಗಾಗಲೇ ಜಿಲ್ಲೆಯಲ್ಲಿ 18,000 ಮಿನಿ ಕಿಟ್ ನೀಡಲಾಗಿದೆ. ಆದರೆ ಮಳೆಯಾಗದಿದ್ದರಿಂದ ಇನ್ನಷ್ಟು ಮಿನಿ ಕಿಟ್ ನೀಡಿದರೆ ಯಾವುದೇ ಪ್ರಯೋಜನವಾಗಲ್ಲ. ಬರಗಾಲ ನಿರ್ವಹಣೆ ದಿಸೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ಅನುದಾನ ನೀಡಲಾಗಿದೆ. ಚುನಾವಣಾ ನೀತಿ ಸಂಹಿತೆ ಮುನ್ನವೇ ಎಲ್ಲ ಜಿಲ್ಲೆಗಳಿಗೆ ಒಟ್ಟು 780 ಕೋಟಿ ರೂ. ಅನುದಾನ ನೀಡಲಾಗಿತ್ತು ಎಂದರು.
Related Articles
Advertisement
ಕೃಷಿ ಇಲಾಖೆ ಉಪನಿರ್ದೇಶಕ ಡಾ| ವಿಶಾಲ್ ಮಾತನಾಡಿ, ಬಳ್ಳಾರಿಯ ಕಂಪ್ಲಿಯಿಂದ ಕತ್ತರಿಸಿದ ಮೇವು ತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 9 ಮೇವು ಬ್ಯಾಂಕ್‌ಗಳಿದ್ದು, ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಗುಡಗೇರಿಯಲ್ಲಿ ಮೇವು ಬ್ಯಾಂಕ್ ಆರಂಭಿಸಬೇಕೆಂದು ಅಲ್ಲಿನ ಜನರು ಮನವಿ ಮಾಡಿದ್ದಾರೆ ಎಂದರು.
ಜಿಲ್ಲೆಗೆ ಈವರೆಗೆ 431 ಟನ್ ಮೇವು ಬಂದಿದ್ದು, ಅದರಲ್ಲಿ 347 ಟನ್ ಮೇವು ಮಾರಾಟ ಮಾಡಲಾಗಿದೆ. ಮೇವಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ವಿವರಿಸಿದರು.
ಹೊರ ರಾಜ್ಯಗಳಿಗೆ ಮೇವು ಸಾಗಣೆ ನಿಷೇಧ ಜುಲೈವರೆಗೂ ವಿಸ್ತರಣೆ:
•ಧಾರವಾಡ ಜಿಲ್ಲೆಯಲ್ಲಿ 9 ಮೇವು ಬ್ಯಾಂಕ್ ಆರಂಭ
•ಅಗತ್ಯ ಬಿದ್ದರೆ ಇನ್ನಷ್ಟು ಮೇವು ಬ್ಯಾಂಕ್‌ಗೆ ಚಿಂತನೆ
•ಜಿಲ್ಲೆಯಲ್ಲಿ 7 ವಾರಕ್ಕಾಗುವಷ್ಟು ಮೇವಿನ ದಾಸ್ತಾನಿದೆ
•ಬರ ನಿರ್ವಹಣೆ ದಿಸೆಯಲ್ಲಿ ಡಿಸಿಗೆ ಅಗತ್ಯ ಅನುದಾನ
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತಾ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕೆಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಬರ ಅಧ್ಯಯನ ಹಾಗೂ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅನುದಾನ ಕೊರತೆಯಿಲ್ಲ. ಸಮರ್ಪಕ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು. ನಾಲಾಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಮಳೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಅನುಮತಿ ಪಡೆದು ಸಂಚಾರಕ್ಕೆ ತೊಂದರೆಯಾಗುವ ಗಿಡಗಳ ಟೊಂಗೆಗಳನ್ನು ಕತ್ತರಿಸಬೇಕೆಂದು ಹೇಳಿದರು.
ಅವಶ್ಯಕತೆಯಿದ್ದಲ್ಲಿ ಕೊಳವೆ ಬಾವಿ ಕೊರೆಯಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೇವಲ ಕೊಳವೆ ಬಾವಿ ಕೊರೆಸಿದರೆ ಸಾಲದು, ಅದಕ್ಕೆ ಪಂಪ್ ಜೋಡಿಸಿ ನೀರು ಬಳಸಲು ಅನುಕೂಲ ಕಲ್ಪಿಸಬೇಕು. ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಬೇಕೆಂದು ಸೂಚಿಸಿದ ಅವರು, ಶೀಘ್ರದಲ್ಲೇ ಭೇಟಿ ನೀಡಿ ಪ್ರಗತಿ ಪರಿಶೀಲಿಸುವುದಾಗಿ ತಿಳಿಸಿದರು.
ನೀರಸಾಗರದಿಂದ ನಗರಕ್ಕೆ 40 ಎಂಎಲ್ಡಿ ಪ್ರತಿದಿನ ನೀರು ಪಡೆಯಲಾಗುತ್ತಿತ್ತು. ಆದರೆ 2016ರಿಂದ ಕೆರೆ ಬತ್ತಿ ಹೋಗಿದೆ. ರೈತರು ಜಲಾನಯನ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದರಿಂದ ನೀರು ಸಂಗ್ರಹವಾಗಲು ತೊಂದರೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನೀರಸಾಗರ ಪುನರುಜ್ಜೀವನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಲಾನಯನ ಪ್ರದೇಶ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ತಜ್ಞರನ್ನು ಕರೆದುಕೊಂಡು ಹೋಗಿ ಸಮೀಕ್ಷೆ ಮಾಡಿ ಇನ್ನೆರಡು ವಾರಗಳಲ್ಲಿ ವರದಿ ನೀಡಬೇಕು ಎಂದರು.
ಕಾಳಿ ನದಿಯಿಂದ ಕುಂದಗೋಳ-ಕಲಘಟಗಿ ತಾಲೂಕಿನ ಕೆಲ ಭಾಗಕ್ಕೆ ಕುಡಿಯುವ ನೀರು ಪೂರೈಸುವ ಕುರಿತು ಚಿಂತನೆ ನಡೆಸಲಾಗುವುದು. ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಪ್ರತಿ ಗ್ರಾಮ ಪಂಚಾಯತಿಯಲ್ಲೂ ನರೇಗಾ ಯೋಜನೆಯಡಿ 3 ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಹದಗೆಟ್ಟು ಹೋಗಿದೆ. ಅಧಿಕಾರಿಗಳು ಬೇಜವಾಬ್ದಾರರಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ಕೊಳವೆ ಬಾವಿಗಳನ್ನು ಕೊರೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು 4 ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡುತ್ತಿಲ್ಲ. ಚುನಾವಣಾ ನೀತಿ ಸಂಹಿತೆ ಕಾರಣ ನೀಡಿ ಕಾಲ ಹರಣ ಮಾಡಿದರು. ಮುಂದಾಲೋಚನೆ ಇಲ್ಲದಿದ್ದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ನೀರ ಸಾಗರ ಜಲಾನಯನ ಪ್ರದೇಶ ಒತ್ತುವರಿಯಾಗಿದ್ದು, ಗಡಿ ನಿಗದಿಪಡಿಸಿ ಒತ್ತುವರಿಯಾದ ಜಾಗ ಮರಳಿ ಪಡೆದು ಕೆರೆಗೆ ಸರಾಗವಾಗಿ ನೀರು ಹರಿದು ಬರುವ ದಿಸೆಯಲ್ಲಿ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಚೆಕ್ ಡ್ಯಾಮ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಶುದ್ಧೀಕರಿಸಿದ ಕುಡಿಯುವ ನೀರಿನ ಹೆಚ್ಚಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಶುದ್ಧೀಕರಿಸಿದ ಘಟಕಗಳ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಕುಂದಗೋಳ-ನವಲಗುಂದ ತಾಲೂಕಿನ ಕೆಲ ಗ್ರಾಮಗಳಲ್ಲಿ 1 ಕೊಡ ನೀರು ಸಿಕ್ಕರೆ ಬಂಗಾರ ಸಿಕ್ಕಂತೆ ಮಾಡುತ್ತಾರೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬಿಆರ್‌ಟಿಎಸ್ ಕಾಮಗಾರಿ ಅಪೂರ್ಣವಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಆದ್ದರಿಂದ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಶಾಸಕ ಆಮೃತ ದೇಸಾಯಿ ಮಾತನಾಡಿ, ಧಾರವಾಡ ತಾಲೂಕಿನ 14 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಮಲಪ್ರಭಾದಿಂದ ಕೆಐಎಡಿಬಿ ಮೂಲಕ ಕೈಗಾರಿಕಾ ವಸಾಹತುಗಳಿಗೆ ಪೂರೈಕೆಯಾಗುವ ನೀರನ್ನು ಗ್ರಾಮಗಳಿಗೆ ಪೂರೈಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಸತೀಶ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಹು-ಧಾ ಪೊಲೀಸ್ ಆಯುಕ್ತ ನಾಗರಾಜ ಸಭೆಯಲ್ಲಿದ್ದರು.