Advertisement

ಗಾಯಕಾಡ್‌, ಬ್ರಾವೋ ಆಟಕ್ಕೆ ಮಣಿದ ಮುಂಬೈ

08:05 AM Sep 20, 2021 | Team Udayavani |

ದುಬೈ: ಮುಂಬೈ ವಿರುದ್ಧದ ಗೆಲುವಿನ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ನಲ್ಲಿ ಭರ್ಜರಿ ಮರು ಆರಂಭ ಮಾಡಿದೆ. ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಐಪಿಎಲ್‌, ದುಬೈ ಮತ್ತು ಅಬುಧಾಬಿಯಲ್ಲಿ ಪುನಾರಂಭಗೊಂಡಿದೆ.

Advertisement

ಈ 30ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ಗಾಯಕ್ವಾಡ್‌ ಅವರ ಅಮೋಘ 88 ರನ್‌ಗಳ ನೆರವಿನಿಂದ 6 ವಿಕೆಟ್‌ಗೆ 156 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡ 20 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 136 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 20 ರನ್‌ಗಳ ಸೋಲು ಅನುಭವಿಸಿತು.

ಮುಂಬೈ ಪರ ಸೌರಭ್‌ ತಿವಾರಿ ಅವರು ಅರ್ಧ ಶತಕ ಬಾರಿಸಿದರು. ಉಳಿದವರ ಕಡೆಯಿಂದ ಅಂಥ ಬೆಂಬಲ ಸಿಗಲಿಲ್ಲ. ಅಂದ ಹಾಗೆ, ಈ ಪಂದ್ಯ ರೋಹಿತ್‌ ಅವರ ಅನುಪಸ್ಥಿತಿಯಲ್ಲಿ, ಪೊಲಾರ್ಡ್‌ ಅವರ ನಾಯಕತ್ವದಲ್ಲಿ ನಡೆಯಿತು.

ಗಾಯಕ್ವಾಡ್‌ ಉತ್ತಮ ಆಟ: ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಚೆನ್ನೈಗೆ ಅಂಥ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಡು ಪ್ಲೆಸಿಕ್ಸ್‌ ಶೂನ್ಯಕ್ಕೆ ಔಟಾದರು. ನಂತರ ಬಂದ ಮೊಯಿನ್‌ ಅಲಿ ಮತ್ತು ಅಂಬಾಟಿ ರಾಯುಡು ಕೂಡ ಶೂನ್ಯ ಗಳಿಸಿದರು. ಆದರೆ, ಮತ್ತೂಂದು ಕಡೆಯಲ್ಲಿದ್ದ ಗಾಯಕ್ವಾಡ್‌ ಅಜೇಯ 88 ರನ್‌ ಗಳಿಸಿ ಸಾಧಾರಣ ಮೊತ್ತ ಪೇರಿಸುವಲ್ಲಿ ಸಫ‌ಲರಾದರು. ಗಾಯಕ್ವಾಡ್‌ ಅವರಿಗೆ ಜಡೇಜ ಮತ್ತು ಬ್ರಾವೋ ಕೆಲ ಕಾಲ ಬೆಂಬಲ ನೀಡಿದರು. ಟ್ರೆಂಟ್‌ ಬೌಲ್ಟ್ ಮತ್ತು ಆ್ಯಡಂ ಮಿಲ್ನೆ, ಬೂಮ್ರಾ ಕಾಡಿದರು.

ಇದರಲ್ಲಿ ಗಾಯಕ್ವಾಡ್‌ ಕೊಡುಗೆ ಅಜೇಯ 88 ರನ್‌ (58 ಎಸೆತ, 9 ಬೌಂಡರಿ, 4 ಸಿಕ್ಸರ್‌). ಇದು ಮುಂಬೈ ವಿರುದ್ಧ ಚೆನ್ನೈ ಕ್ರಿಕೆಟಿಗನ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 2013ರಲ್ಲಿ ಮೈಕಲ್‌ ಹಸ್ಸಿ ಅಜೇಯ 86, 2010ರಲ್ಲಿ ಸುರೇಶ್‌ ರೈನಾ ಅಜೇಯ 83 ರನ್‌ ಬಾರಿಸಿದ್ದರು. ಒಂದೆಡೆ ವಿಕೆಟ್‌ ಉರುಳುತ್ತ ಹೋದರೂ ವಿಚಲಿತರಾಗದ ಗಾಯಕ್ವಾಡ್‌ ಮುಂಬೈ ಬೌಲರ್ ಮೇಲೆರಗಿ ಹೋಗಿ ತಂಡದ ಪಾಲಿಗೆ ಆಪತ್ಬಾಂಧವನೆನಿಸಿದರು. ಇವರಿಗೆ ರವೀಂದ್ರ ಜಡೇಜ, ಡ್ವೇನ್‌ ಬ್ರಾವೊ ಉತ್ತಮ ಬೆಂಬಲ ನೀಡಿದರು.

Advertisement

24 ರನ್ನಿಗೆ ಬಿತ್ತು 4 ವಿಕೆಟ್‌: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೈಗೆ ಇದರ ಪ್ರಯೋಜನವೆತ್ತಲು ಸಾಧ್ಯವಾಗಲೇ ಇಲ್ಲ. ಪವರ್‌ ಪ್ಲೇ ಮುಗಿಯುವುದರೊಳಗಾಗಿ ಅದು 24 ರನ್ನಿಗೆ 4 ವಿಕೆಟ್‌ ಉರುಳಿಸಿಕೊಂಡಿತು. ಈ 4 ವಿಕೆಟ್‌ಗಳನ್ನು ಬೌಲ್ಟ್ ಮತ್ತು ಮಿಲ್ನೆ ಹಂಚಿಕೊಂಡರು. ಗಾಯದ ಮೇಲೆ ಬರೆ ಎಂಬಂತೆ ಪ್ರಧಾನ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಗಾಯಾಳಾಗಿ ಅಂಗಳ ತೊರೆದರು. ಬೌಲ್ಟ್ ಪಂದ್ಯದ ದ್ವಿತೀಯ ಎಸೆತದಲ್ಲೇ ಡು ಪ್ಲೆಸಿಸ್‌ ಅವರನ್ನು ವಾಪಸ್‌ ಕಳುಹಿಸಿದರು. ಮಿಲ್ನೆಯ ಮೊದಲ ಓವರಿನಲ್ಲಿ ಮೊಯಿನ್‌ ಅಲಿ ವಿಕೆಟ್‌ ಬಿತ್ತು. ಬೌಲ್ಟ್ ದ್ವಿತೀಯ ಓವರ್‌ನಲ್ಲಿ ರೈನಾಗೆ (4) ಪೆವಿಲಿಯನ್‌ ಹಾದಿ ತೋರಿಸಿದರು. ಇನ್ನೇನು ಪವರ್‌ ಪ್ಲೇ ಅವಧಿ ಮುಗಿಯಿತು ಎನ್ನುವಷ್ಟರಲ್ಲಿ ಕಪ್ತಾನ ಧೋನಿ (3) ಆಟವೂ ಮುಗಿಯಿತು. ಈ ವಿಕೆಟ್‌ ಮಿಲ್ನೆ ಬುಟ್ಟಿಗೆ ಬಿತ್ತು. ಇವರಿಬ್ಬರ ಯಶಸ್ಸಿನಿಂದಾಗಿ ಬುಮ್ರಾ 3ನೇ ಕ್ರಮಾಂಕದಲ್ಲಿ ಬೌಲಿಂಗ್‌ ದಾಳಿಗೆ ಇಳಿಯಬೇಕಾಯಿತು.

ಡೆತ್‌ ಓವರ್‌ಗಳಲ್ಲಿ ರನ್‌ ಪ್ರವಾಹ: ಅರ್ಧ ಹಾದಿ ಕ್ರಮಿಸುವಾಗ ಚೆನ್ನೈ 44ಕ್ಕೆ 4 ವಿಕೆಟ್‌ ಉರುಳಿಸಿಕೊಂಡು ಪರದಾಡುತ್ತಿತ್ತು. ಗಾಯಕ್ವಾಡ್‌-ಜಡೇಜ ಕುಸಿತಕ್ಕೆ ತಡೆಯಾಗಿ ನಿಂತ ಪರಿಣಾಮ 15 ಓವರ್‌ ಮುಕ್ತಾಯಕ್ಕೆ ತಂಡದ ಮೊತ್ತ 87ಕ್ಕೆ ಏರಿತು.

Advertisement

Udayavani is now on Telegram. Click here to join our channel and stay updated with the latest news.

Next