Advertisement

ಐಪಿಎಲ್‌: ಬ್ಯಾಟರ್‌ ಓರ್ವ 99 ರನ್ನಿಗೆ ಔಟಾದರೆ ಹೇಗಾಗಬೇಡ?!

02:53 AM May 03, 2022 | Team Udayavani |

ಟೆಸ್ಟ್‌ನಲ್ಲಿ ಶತಕ ಬಾರಿಸುವುದು ಬಹಳ ಸುಲಭ. ಸಾಕಷ್ಟು ಕಾಲಾವಕಾಶ ಇರುವುದು ಇದಕ್ಕೊಂಸು ಕಾರಣ. ಏಕದಿನದಲ್ಲೂ ಸರಾಗವಾಗಿ ಸೆಂಚುರಿ ಬಾರಿಸಬಹುದು. ಆದರೆ ಚುಟುಕು ಮಾದರಿಯ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಬಹಳ ಕಷ್ಟ. ನೂರರ ಮೊತ್ತ ಒಲಿಯುವುದಿದ್ದರೂ ಅದು ಓಪನರ್‌ಗಳಿಗೆ ಮಾತ್ರ ಎಂಬಂಥ ಸ್ಥಿತಿ ಇಲ್ಲಿನದು. ತಪ್ಪಿದರೆ ವನ್‌ಡೌನ್‌ ಅಥವಾ 4ನೇ ಕ್ರಮಾಂಕದ ಬ್ಯಾಟರ್‌ಗಳಿಗೂ ಮೂರಂಕೆಯ ಮೊತ್ತ ಅಪರೂಪಕ್ಕೆ ಒಲಿಯುವುದುಂಟು. ಇಂಥ ಸ್ಥಿತಿಯಲ್ಲಿ ಬ್ಯಾಟರ್‌ ಓರ್ವ 99 ರನ್ನಿಗೆ ಔಟಾದರೆ ಹೇಗಾಗಬೇಡ?!

Advertisement

ರವಿವಾರದ ಚೆನ್ನೈ-ಹೈದರಾಬಾದ್‌ ನಡುವಿನ ಪಂದ್ಯ ಇದಕ್ಕೆ ತಾಜಾ ನಿದರ್ಶನ ಒದಗಿಸಿತು. ಫಾರ್ಮ್ಗೆ ಮರಳಿದ ಚೆನ್ನೈ ಆರಂಭಕಾರ ಋತುರಾಜ್‌ ಗಾಯಕ್ವಾಡ್‌ ಸೆಂಚುರಿ ಸಂಭ್ರಮ ತಯಾರಿಯಲ್ಲಿದ್ದರು. ಅವರ ಗಳಿಕೆ 99ಕ್ಕೆ ಏರಿತ್ತು. ಚೆನ್ನೈ ಆಟಗಾರರು, ಅಭಿಮಾನಿಗಳು ಎದ್ದು ನಿಂತು ಈ ಕ್ಷಣವನ್ನು ಕಣ್ತುಂಬಿಸಿಕೊಳ್ಳುವ ತರಾತುರಿಯಲ್ಲಿದ್ದರು. ಆದರೆ ಗಾಯಕ್ವಾಡ್‌ಗೆ ಸೆಂಚುರಿ ಒಲಿಯದೇ ಹೋಯಿತು. ಟಿ. ನಟರಾಜನ್‌ ಎಸೆತವನ್ನು ಭುವನೇಶ್ವರ್‌ ಕುಮಾರ್‌ ಕೈಗೆ ಕ್ಯಾಚ್‌ ನೀಡಿ ವಾಪಸಾದಾಗ “ಎಂಸಿಎ ಸ್ಟೇಡಿಯಂ’ನಲ್ಲಿ ನೀರವ ಮೌನ! ಒಂದೇ ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡ ಗಾಯಕ್ವಾಡ್‌ ತೀವ್ರ ನಿರಾಸೆಯಿಂದ, ಭಾರವಾದ ಹೆಜ್ಜೆಗಳೊಂದಿಗೆ ವಾಪಸಾದರು.

99ಕ್ಕೆ ಕೊಹ್ಲಿ ರನೌಟ್‌!
ಐಪಿಎಲ್‌ ಇತಿಹಾಸದಲ್ಲಿ ಆಟಗಾರನೊಬ್ಬ 99 ರನ್ನಿಗೆ ಔಟಾದ 5ನೇ ದೃಷ್ಟಾಂತ ಇದಾಗಿದೆ. ಇದರ ಪ್ರಥಮ ನಿದರ್ಶನ ಕಂಡುಬಂದದ್ದು 2013ರಲ್ಲಿ. ಅಂದು ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ವಿರಾಟ್‌ ಕೊಹ್ಲಿ 99 ರನ್ನಿಗೆ ವಿಕೆಟ್‌ ಒಪ್ಪಿಸಿ ಸೆಂಚುರಿ ತಪ್ಪಿಸಿಕೊಂಡಿದ್ದರು. ಅದು ಆರ್‌ಸಿಬಿ ಇನ್ನಿಂಗ್ಸ್‌ನ ಕಟ್ಟಕಡೆಯ ಎಸೆತವಾಗಿತ್ತು. 100ನೇ ರನ್ನಿನ ತರಾತುರಿಯಲ್ಲಿದ್ದ ಕೊಹ್ಲಿ ರನೌಟ್‌ ಆದರು. ಆದರೆ ಆರ್‌ಸಿಬಿ ಪಂದ್ಯವನ್ನು ಗೆದ್ದಿತು.

ಪೃಥ್ವಿ ಶಾ ಕಾಟ್‌ ಬಿಹೈಂಡ್‌
ಅದು 2019ರ ಡೆಲ್ಲಿ-ಕೆಕೆಆರ್‌ ನಡುವಿನ ಮುಖಾಮುಖಿ. ಡೆಲ್ಲಿಯ ಆರಂಭಕಾರ ಪೃಥ್ವಿ ಶಾ 54 ಎಸೆತಗಳಿಂದ 99 ರನ್‌ ಬಾರಿಸಿ ಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಲಾಕಿ ಫ‌ರ್ಗ್ಯುಸನ್‌ ಎಸೆತವೊಂದು ಅವರನ್ನು ವಂಚಿಸಿತು. ಬ್ಯಾಟಿಗೆ ಸವರಿದ ಚೆಂಡು ಸುರಕ್ಷಿತವಾಗಿ ಕೀಪರ್‌ ಕೈ ಸೇರಿತು. ಕೊನೆಗೆ ಈ ಪಂದ್ಯ ಟೈಯಲ್ಲಿ ಮುಕ್ತಾಯ ಕಂಡಿತು. ಸೂಪರ್‌ ಓವರ್‌ನಲ್ಲಿ ಡೆಲ್ಲಿ ಜಯ ಸಾಧಿಸಿತು.

ಇಶಾನ್‌ ಕಿಶನ್‌ ಮತ್ತು ಗೇಲ್‌
2020ರ ಐಪಿಎಲ್‌ನಲ್ಲಿ 99ಕ್ಕೆ ಔಟಾದ ಇಬ್ಬರು ನತದೃಷ್ಟರು ಕಾಣಿಸಿಕೊಳ್ಳುತ್ತಾರೆ. ಇವರೆಂದರೆ ಮುಂಬೈ ಇಂಡಿಯನ್ಸ್‌ನ ಇಶಾನ್‌ ಕಿಶನ್‌ ಮತ್ತು ಪಂಜಾಬ್‌ನ ಕ್ರಿಸ್‌ ಗೇಲ್‌.

Advertisement

ಇಶಾನ್‌ ಕಿಶನ್‌ ಆರ್‌ಸಿಬಿ ವಿರುದ್ಧ ನರ್ವಸ್‌ ನೈಂಟಿಯ ಸಂಕಟಕ್ಕೆ ಸಿಲುಕಿದರು. ಅಂದು ಮುಂಬೈ 202 ರನ್‌ ಚೇಸ್‌ ಮಾಡಲಿಳಿದಿತ್ತು. ಇಶಾನ್‌ ಕಿಶನ್‌ ಸಾಹಸದಿಂದ ಗೆಲುವನ್ನು ಸಮೀಪಿಸಿತ್ತು. ಆದರೆ ಇಸುರು ಉದಾನ ಪಾಲಾದ ಅಂತಿಮ ಓವರ್‌ನ 5ನೇ ಎಸೆತದಲ್ಲಿ 99 ರನ್‌ ಮಾಡಿದ್ದ ಇಶಾನ್‌ ಕಿಶನ್‌ ಔಟಾದರು. ಪೊಲಾರ್ಡ್‌ ಪಂದ್ಯವನ್ನು ಟೈಗೊಳಿಸುವಲ್ಲಿ ಯಶಸ್ವಿಯಾದರು. ಆದರೆ ಆರ್‌ಸಿಬಿ ಸೂಪರ್‌ ಓವರ್‌ನಲ್ಲಿ ಗೆದ್ದು ಬಂದಿತು.

ಇದೇ ಋತುವಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಒನ್‌ಡೌನ್‌ನಲ್ಲಿ ಆಡಲಿಳಿದ ಕ್ರಿಸ್‌ ಗೇಲ್‌ 99ಕ್ಕೆ ಬೌಲ್ಡ್‌ ಆಗಿದ್ದರು. ಜೋಫ್ರಾ ಆರ್ಚರ್‌ ವಿಕೆಟ್‌ ಟೇಕರ್‌. ಈ ಪಂದ್ಯವನ್ನು ರಾಜಸ್ಥಾನ್‌ 7 ವಿಕೆಟ್‌ಗಳಿಂದ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next