Advertisement

ವಿಜಯಪುರ : ಅಳಿವಿನಂಚಿನಲ್ಲಿರುವ ತುಕ್ಕುಮಚ್ಚೆ ಬೆಕ್ಕಿನ ಮರಿಗಳು ಪತ್ತೆ

08:30 PM Nov 27, 2020 | sudhir |

ವಿಜಯಪುರ : ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ವಿಶ್ವದಲ್ಲೇ ಅಪರೂಪದ ಹಾಗೂ ಏಷಿಯಾ ಖಂಡದಲ್ಲಿ ಮಾತ್ರ ಕಂಡು ಬರುವ ಅಳಿವಿನ ಅಂಚಿನಲ್ಲಿರುವ ತುಕ್ಕುಮಚ್ಚೆಯ ಬೆಕ್ಕಿನ ಮರಿಗಳು ಪತ್ತೆಯಾಗಿವೆ. ಇದರೊಂದಿಗೆ ಐತಿಹಾಸಿಕ ವಿಜಯಪುರ ಜಿಲ್ಲೆ ಮತ್ತೆ ಗಮನ ಸೆಳೆಯುವಂತಾಗಿದೆ.

Advertisement

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ತುಕ್ಕುಮಚ್ಚೆಯ ಬೆಕ್ಕಿನ ಎರಡು ಮರಿಗಳು ಪತ್ತೆಯಾಗಿವೆ. ದಶಕದ ಹಿಂದೆ ಭಾರತದಲ್ಲಿ ಕಾಣಿಸಿಕೊಂಡಿದ್ದ ಈ ಬೆಕ್ಕು, 2016 ರಲ್ಲಿ ನೇಪಾಳ ದೇರದ ಪಶ್ಚಿಮ ತೆರೈ ಅರಣ್ಯ ಪ್ರದೇಶದಲ್ಲೂ ಕಂಡು ಬಂದಿತ್ತು. ದಶಕದ ಬಳಿಕ ಭಾರತದ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಸ್ಟೀ ಸ್ಪಾಟೆಡ್ ಕ್ಯಾಟ್ ಎಂದು ಕರೆಯಲ್ಪಡುವ ತುಕ್ಕು ಮಚ್ಚೆಯ ಬೆಕ್ಕು ಕಾಣಿಸಿಕೊಂಡಿದೆ.

ಜಗತ್ತಿನಲ್ಲೇ ಭಾರತ, ಶ್ರೀಲಂಕಾ ದೇಶದಲ್ಲಿ ಮಾತ್ರ ಕಂಡು ಬರುವ ಈ ಅಪರೂಪದ ತಳಿಯ ಬೆಕ್ಕು, ಕಾಡುಗಳ ನಾಶದಿಂದಾಗಿ ಇದೀಗ ಅಳಿವಿನ ಅಂಚಿನಲ್ಲಿದೆ. ಹೀಗಾಗಿ ಈ ಬೆಕ್ಕು ಸಂರಕ್ಷಿತ ವನ್ಯಜೀವಿಯ ಶಡ್ಯೂಲ್ 1 ರಲ್ಲಿ ಸೇರಿಸಲ್ಪಟ್ಟಿದೆ. ನಿಶಾಚರಿ ಜೀವನ ಕ್ರಮದ ಅಪರೂಪದ ಈ ಬೆಕ್ಕು ಕಾಡು ನಾಶವಾದ ಹಗಲು ವೇಳೆ ನೆಲೆ ಕಂಡುಕೊಳ್ಳಲು ಪರದಾಡುತ್ತಿದೆ. ಇದರಿಂದ ಒತ್ತಡಕ್ಕೆ ಸಿಲುಕಿರುವ ರಸ್ಟೀ ಸ್ಪಾಟೆಡ್ ಕ್ಯಾಟ್ ಸಂತತಿ ಅಭಿವೃದ್ಧಿ ಕ್ಷೀಣಿಸಿದೆ. ಪರಿಣಾಮ ಅಳಿವಿನ ಅಂಚಿಗೆ ತಲುಪಿದೆ.

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಹೆಚ್ಚಿ ಕಬ್ಬಿನ ಗದ್ದೆಗಳು ದಟ್ಟವಾಗಿದ್ದು, ವನ್ಯಜೀವಿಗಳ ಆವಾಸ ತಾಣವಾಗುತ್ತಿದೆ. ತುಕ್ಕುಮಚ್ಚೆ ಬೆಕ್ಕಿನ ಮರಿಗಳು ಪತ್ತೆಯಾಗಿರುವ ಬಬಲೇಶ್ವರ ತಾಲೂಕಿನ ಜೈನಾಪುರ ಪರಿಸರದ ಕಬ್ಬಿನ ಗದ್ದೆಗಳಲ್ಲಿ ಚಿರತೆಗಳೂ ವಾಸ ಮಾಡತೊಡಗಿವೆ, ಕೆಲವೇ ತಿಂಗಳ ಹಿಂದೆ ಅರಣ್ಯ ಇಲಾಖೆ ಜೈನಾಪುರ ಭಾಗದಲ್ಲೇ ಪ್ರಾಣಿ ಭಕ್ಷಕ ಚಿರತೆಯನ್ನು ಸೆರೆ ಹಿಡಿದಿದೆ.

ಇದನ್ನೂ ಓದಿ:ಬಸವನಬಾಗೇವಾಡಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 19 ಕೆ.ಜಿ ಗಾಂಜಾ ವಶ

Advertisement

ಬಾಗಲಕೋಟೆ, ಬೆಳಗಾವಿ ಅರಣ್ಯ ಪರಿಸರದಿಂದ ಆಹಾರ ಅರಸುತ್ತ ಬರುತ್ತಿರುವ ಚಿರತೆ ಹಾಗೂ ಇತರೆ ವನ್ಯಜೀವಿಗಳಿಗೆ ವರ್ಷಪೂರ್ತಿ ದಟ್ಟವಾಗಿ ಬೆಳೆದು ನಿಲ್ಲುವ ಕಬ್ಬಿನ ಗದ್ದೆಗಳು ಸುರಕ್ಷಿತ ನೆಲೆಯನ್ನು ಒದಗಿಸುತ್ತಿವೆ. ಈ ಪರಿಸರದಲ್ಲಿ ಕುರಿ, ಮೇಕೆಗಳಂಥ ಸಣ್ಣ ಪ್ರಾಣಿಗಳ ಮೇಲೆ ದಾಳಿ ಮಾಡಿ ಹಸಿವು ನೀಗಿಸಿಕೊಳ್ಳುತ್ತಿವೆ.

ಮರಿಗಳಿರುವ ಯಾವುದೇ ಅನ್ಯಜೀವಿ ತಾಯಿ ಮರಿಗಳನ್ನು ಇರುವ ಸ್ಥಳಕ್ಕೆ ಸಹಜವಾಗಿ ಬಂದೇ ಬರುತ್ತವೆ. ಆದರೆ ಮೂಲ ನೆಲೆಗೆ ಧಕ್ಕೆ ಬಂದಿರುವುದರಿಂದ ಕಾಡಿನಂತೆ ಜಾಡು ಹಿಡಿದ ಬೆಕ್ಕಿಗೆ ಕಟಾವಾದ ಕಬ್ಬಿನ ಗದ್ದೆಗಳೂ ಇದೀಗ ತೊಡಕಾಗಿವೆ. ಇದರ ಪರಿಣಾಮವೇ ಅಪರೂಪದ ಬೆಕ್ಕಿನ ತಳಿಯ ಈ ಮರಿಗಳು ಇದೀಗ ತಾಯಿ ಇಲ್ಲದೇ ಅನಾಥವಾಗಲು ಕಾರಣವಾಗಿದೆ.

ತುಕ್ಕುಮಚ್ಚೆ ಬೆಕ್ಕಿನ ಎರಡು ಮರಿಗಳು ಪತ್ತೆಯಾಗಿರುವ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡಲಾಗಿದೆ. ಹೀಗಾಗಿ ಭಯಗೊಂಡ ಈ ಮರಿಗಳ ತಾಯಿಬೆಕ್ಕು ತನ್ನ ಜೀವ ರಕ್ಷಣೆಗಾಗಿ ಸ್ಥಳದಿಂದ ಪರಾರಿಯಾಗಿದೆ. ಬೆಕ್ಕಿನ ಮರಿಗಳು ಪತ್ತೆಯಾಗುತ್ತಲೇ ಚಿರತೆ ಮರಿಗಳು ಎಂದು ರಕ್ಷಿಸಿ ಮನೆಗೆ ತಂದ ಜಮೀನಿನ ರೈತ ಪ್ರಶಾಂತ ದೇಸಾಯಿ, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮರಿಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಚಿರತೆ ಮರಿಗಳಲ್ಲ, ತುಕ್ಕುಮಚ್ಚೆಯ ಬೆಕ್ಕಿನ ಮರಿಗಳು ಎಂಬುದನ್ನು ಖಚಿತ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಒಂದು ವಾರದ ಪ್ರಾಯ ಹೊಂದಿರುವ ಕಾರಣ ಬೆಕ್ಕಿನ ಮರಿಗಳನ್ನು ತಾಯಿಯಿಂದ ಬೇರ್ಪಡಿಸುವುದು ಅಸಾಧ್ಯ. ಹೀಗಾಗಿ ಪತ್ತೆಯಾದ ಸ್ಥಳದಲ್ಲೇ ಬಿಟ್ಟು, ತಾಯಿ ಬೆಕ್ಕು ಬರುವಿಕೆಗೆ ಕಾದಿದ್ದಾರೆ. ಆದರೆ ಎರಡು ದಿನವಾದರೂ ತಾಯಿ ಬೆಕ್ಕು ಪತ್ತೆಯಾಗದ್ದರಿಂದ ಅರಣ್ಯ ಇಲಾಖೆ ಮರಿಗಳನ್ನು ವಶಕ್ಕೆ ಪಡೆದು ಪಾಲನೆ ಮಾಡುತ್ತಿದೆ.

ಏಷಿಯಾ ಖಂಡದ ಭಾರತ, ಶ್ರೀಲಂಕಾ ದೇಶಗಳಲ್ಲಿ ಮಾತ್ರ ಕಂಡು ಬರುವ ರಸ್ಟೀ ಸ್ಪಾಟೆಡ್ ಕ್ಯಾಟ್ ಅಳಿವಿನ ಅಂಚಿನಲ್ಲಿರುವ ಬೆಕ್ಕಿನ ಪ್ರಬೇಧದ ಸಂರಕ್ಷಿತ ವನ್ಯಜೀವಿ. ಪತ್ತೆಯಾದ ಸ್ಥಳದಲ್ಲೇ ಮರಿಗಳನ್ನು ಬಿಟ್ಟು ಎರಡು ದಿನ ಅವಲೋಕಿಸಿದರೂ ತಾಯಿ ಬೆಕ್ಕು ಬಂದಿಲ್ಲ. ಹೀಗಾಗಿ ಈ ಮರಿಗಳನ್ನು ನಮ್ಮ ಸುಪರ್ದಿಗೆ ಪಡೆದು ಪಾಲನೆ ಮಾಡಲಾಗುತ್ತಿದೆ.
– ಅಶೋಕ ಪಾಟೀಲ, ಡಿಎಫ್‍ಓ, ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ

– ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next