ಕೀವ್: ಉಕ್ರೇನ್ ವಿರುದ್ಧದ ರಷ್ಯಾ ಪ್ರಕೋಪ ನಿಂತಿಲ್ಲ. ಶುಕ್ರವಾರ ಕೂಡ ಡಿನಿಪ್ರೋ, ಲಸ್ಕ್, ಇವಾನೋ-ಫ್ರಾಂಕ್‌ವಿಸ್ಕ್, ಕೀವ್ ನಗರಗಳನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿ ದಾಳಿ ನಡೆಸ ಲಾಗಿದೆ. ವಾಯವ್ಯ ಭಾಗದಲ್ಲಿರುವ ಲಸ್ಕ್ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಪರಿಣಾಮವಾಗಿ ಇಬ್ಬರು ಅಸುನೀಗಿದ್ದಾರೆ. ಇಜಿಯು ಎಂಬ ನಗರದಲ್ಲಿ ಮನೋರೋಗಿಗಳು ಚಿಕಿತ್ಸೆ ಪಡೆ ಯುತ್ತಿರುವ ಆಸ್ಪತ್ರೆಯ ಮೇಲೆ ದಾಳಿ ನಡೆಸಲಾಗಿದೆ. ಹೀಗಾಗಿ, ಆಸ್ಪತ್ರೆ ಕಟ್ಟಡ ಸಂಪೂರ್ಣ ನಾಶವಾಗಿದೆ. ಡಿನಿಪ್ರೋ ನಗರದ ವಿವಿಧ ಭಾಗಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿರುವ ಮೂರು ದಾಳಿಗಳಲ್ಲಿ ಕಾರ್ಖಾನೆ ಸೇರಿದಂತೆ ಹಲವು ಕಟ್ಟಡಗಳು ಧ್ವಂಸಗೊಂಡಿವೆ. ಜತೆಗೆ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ.
ಇನ್ನೊಂದೆಡೆ ಖಾರ್ಕಿವ್ ನಗರದಲ್ಲಿ ಅಂಗವಿಕಲರು ಇದ್ದ ಕಟ್ಟಡದ ಮೇಲೆ ಕೂಡ ದಾಳಿಯಾಗಿದೆ ಎಂದು ಉಕ್ರೇನ್ ಸರಕಾರ ಆರೋಪಿಸಿದೆ. ದಾಳಿ ನಡೆಯುತ್ತಿ ದ್ದಂತೆಯೇ ಅಲ್ಲಿ ಇದ್ದವರ ಪೈಕಿ 63 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇನ್ನುಳಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ರಾಜಧಾನಿ ಕೀವ್ ಸಮೀಪ ರಷ್ಯಾ ಮತ್ತು ಉಕ್ರೇನ್ ಸೇನೆಯ ಬಿರುಸಿನ ಕಾಳಗ ಮುಂದುವರಿದಿದೆ. ಇನ್ನೊಂದೆಡೆ, ಉಕ್ರೇನ್ ಅನ್ನು ಸದಸ್ಯ ರಾಷ್ಟ್ರವನ್ನಾಗಿ ಸೇರಿಸುವ ಬಗ್ಗೆ ಐರೋಪ್ಯ ಒಕ್ಕೂಟ ಸಮ್ಮತಿ ನೀಡಿದೆ.
ಇನ್ನೊಂದು ಬೆಳವಣಿಗೆಯಲ್ಲಿ ಉಕ್ರೇನ್ ಸರಕಾರ ಪ್ರಕಟಿಸಿದ ಪ್ರಕಾರ ರಷ್ಯಾ ಸೇನೆಯ ಮತ್ತೂಬ್ಬ ಹಿರಿಯ ಅಧಿಕಾರಿಯನ್ನು ಕೊಲ್ಲಲಾಗಿದೆ. ಇದರ ಜತೆಗೆ ಪುತಿನ್ ಸೇನೆಯ ದಾಳಿಯಿಂದ ಅಸುನೀಗಿದ ನಾಗರಿಕರ ಅಂತ್ಯಸಂಸ್ಕಾರ ನಿತ್ಯವೂ ನಡೆಯುತ್ತಿದೆ.
ವಿದ್ಯುತ್ ಬಂದಿಲ್ಲ: ಜಗತ್ತಿನ ಆತಂಕಕ್ಕೆ ಕಾರಣ ವಾಗಿರುವ ಚರ್ನೋಬಿಲ್ ಅಣು ವಿದ್ಯುತ್ ಸ್ಥಾವರದಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಬೆಲಾರಸ್‌ನ ತಜ್ಞರ ನೆರವಿನಿಂದ ಅಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿತ್ತು.
ರಷ್ಯಾದಿಂದ ಯುದ್ಧ; ಚೀನ ಹೇಳಿಕೆ: ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ಆರಂಭಿಸಿ ಎರಡು ವಾರ ಗಳಾದರೂ ಯಾರ ಕಡೆಯೂ ನಿಲುವು ತೆಗೆದುಕೊಳ್ಳದಿದ್ದ ಚೀನ ಶುಕ್ರವಾರ ತನ್ನ ನಿಲುವು ಬದಲಿಸಿದೆ. ಫ್ರಾನ್ಸ್‌ನ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ ಚೀನ ವಿದೇಶಾಂಗ ಸಚಿವ ವಾಂಗ್ ಯಿ, ರಷ್ಯಾ ಉಕ್ರೇನ್‌ನಲ್ಲಿ ನಡೆಸುತ್ತಿರುವುದು ಯುದ್ಧ ಎಂದು ಬಣ್ಣಿಸಿದೆ. “ಈ ಯುದ್ಧ ಆದಷ್ಟು ಬೇಗ ಮುಗಿಯಲಿ ಮತ್ತು ಶಾಂತಿ ನೆಲೆಸಲಿ’ ಎಂದು ವಾಂಗ್ ಆಶಿಸಿದ್ದಾರೆ. ಜತೆಗೆ ಚೀನದ ನಾಗರಿಕ ವಿಮಾನಯಾನ ಇಲಾಖೆಯು, ರಷ್ಯಾದ ಏರ್‌ಲೈನ್‌ಗಳಿಗೆ ಸಾಮಗ್ರಿಗಳ ಮಾರಾಟವನ್ನು ಸ್ಥಗಿತಗೊಳಿಸಿ ಗುರುವಾರ ಆದೇಶಿಸಿದೆ. ಹಾಗಾಗಿ ಏರ್‌ಲೈನ್ ಸಾಮಗ್ರಿಗಳಿಗಾಗಿ ಭಾರತ ಸೇರಿ ಬೇರೆ ದೇಶಗಳ ಮೊರೆ ಹೋಗುವುದಾಗಿ ರಷ್ಯಾ ಹೇಳಿದೆ.
ಸಮರಾಂಗಣದಲ್ಲಿ
ಡಿನಿಪ್ರೋ, ಲಸ್ಕ್, ಇವಾನೋ-ಫ್ರಾಂಕ್‌ವಿಸ್ಕ್, ಕೀವ್ ನಗರಗಳ ಮೇಲೆ ರಷ್ಯಾ ಪಡೆಯಿಂದ ಕ್ಷಿಪಣಿ ದಾಳಿ. ಇಜಿಯುದಲ್ಲಿ ಮನೋರೋಗಿಗಳು ಚಿಕಿತ್ಸೆ ಪಡೆಯು ತ್ತಿರುವ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ರಷ್ಯಾ ಪಡೆ.
ರಷ್ಯಾದ ದಾಳಿಯಿಂದಾಗಿ ಖಾರ್ಕಿವ್ ನಗರದ 48 ಶಾಲೆಗಳು ಧ್ವಂಸವಾಗಿರುವುದಾಗಿ ಮೇಯರ್ ಹೇಳಿಕೆ. ಖಾರ್ಕಿವ್ ಪ್ರದೇಶದಲ್ಲಿ ಒಂದೇ ದಿನದಲ್ಲಿ 89 ಬಾರಿ ರಷ್ಯಾ ಶೆಲ್ ದಾಳಿ: ಖಾರ್ಕಿವ್ ಗವರ್ನರ್. ಉಕ್ರೇನ್‌ನಲ್ಲಿ ಹೋರಾಡಲು ಮಧ್ಯಪ್ರಾಚ್ಯ ದೇಶಗಳಿಂದ 16 ಸಾವಿರ ಮಂದಿಯನ್ನು ಕರೆಸಿಕೊಳ್ಳುವ ಪ್ರಸ್ತಾವಕ್ಕೆ ಸಹಿ ಹಾಕಿದ ರಷ್ಯಾ ಅಧ್ಯಕ್ಷ ಪುತಿನ್. 25 ಲಕ್ಷಕ್ಕೂ ಅಧಿಕ ಮಂದಿ ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯಿಂದ ವರದಿ.