Advertisement

ನಿರ್ಬಂಧದ ಪ್ರಹಾರ; ರಷ್ಯಾ ವಿಲವಿಲ; ದಿನವಿಡೀ ಮುಚ್ಚಿದ ಸ್ಟಾಕ್‌ಎಕ್ಸ್‌ಚೇಂಜ್‌

09:50 AM Mar 01, 2022 | Team Udayavani |

ಮಾಸ್ಕೋ/ವಾಷಿಂಗ್ಟನ್‌: ಉಕ್ರೇನ್‌ನಲ್ಲಿ ದಾಳಿ ನಡೆಸಿ ಹಾಹಾಕಾರ ಉಂಟು ಮಾಡಿರುವ ರಷ್ಯಾದಲ್ಲಿಯೇ ಈಗ ಜನರು ಪರಿತಪಿಸುವಂತಾಗಿದೆ. ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಜಾಗತಿಕ ಬ್ಯಾಂಕ್‌ ಮತ್ತು ವಿತ್ತೀಯ ಸಂಸ್ಥೆಗಳ ಸರಣಿ (ಸ್ವಿಫ್ಟ್)ಯಿಂದ ರಷ್ಯಾದ ಕೆಲವು ಬ್ಯಾಂಕ್‌ಗಳಿಗೆ ನಿಷೇಧ ಹೇರಿದ್ದರಿಂದ ಆ ದೇಶದ ಕರೆನ್ಸಿ ರೂಬಲ್‌ ಮೌಲ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

Advertisement

ಮಾಸ್ಕೋ ಸೇರಿದಂತೆ ರಷ್ಯಾದ ಪ್ರಮುಖ ನಗರಗಳಲ್ಲಿ ಜನರು ಎಟಿಎಂನಿಂದ ಹಣ ವಿಥ್‌ಡ್ರಾ ಮಾಡಲು ಸಾಲಿನಲ್ಲಿ ನಿಂತಿದ್ದಾರೆ. ಜತೆಗೆ ಬ್ಯಾಂಕ್‌ಗಳಲ್ಲಿರುವ ತಮ್ಮ ಹಣವನ್ನೂ ವಿಥ್‌ಡ್ರಾ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ರೂಬಲ್‌ ಮೌಲ್ಯ ಪತನವನ್ನು ತಡೆಯಲು ಪುಟಿನ್‌ ಸರಕಾರ ಬಡ್ಡಿದರವನ್ನು ಶೇ.9.5ರಿಂದ ಶೇ.20ಕ್ಕೆ ಏರಿಸಿದೆ. ನಗದು ಹರಿವಿನ ಪ್ರಮಾಣ ಸ್ಥಿರವಾಗಿರಿಸಲು ರಷ್ಯಾದ ಕೇಂದ್ರ ಬ್ಯಾಂಕ್‌ 8.78 ಬಿಲಿಯನ್‌ ಡಾಲರ್‌ ಮೊತ್ತ (66,300 ಕೋಟಿ ರೂ.)ವನ್ನು ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಿದೆ.

ಮುಚ್ಚಿದ ಷೇರುಮಾರುಕಟ್ಟೆ: ಅಮೆರಿಕದ ದಿಗ್ಬಂಧನ ಕ್ರಮದಿಂದಾಗಿ ಸೋಮವಾರ ದಿನವಿಡೀ, ಮಾಸ್ಕೋ ದಲ್ಲಿ ಷೇರು ಮಾರುಕಟ್ಟೆ ಮುಚ್ಚಿತ್ತು. ಸ್ಥಳೀಯ ರಫ್ತುದಾರರು ತಾವು ಹೊಂದಿರುವ ವಿದೇಶಿ ವಿನಿಮಯ ಸಂಗ್ರಹ ಮಾರಾಟ ಮಾಡುವಂತೆ ಸೂಚಿಸಿದೆ.

ಕಚ್ಚಾ ತೈಲ ಏರಿಕೆ: ಅಮೆರಿಕದ ತೈಲ ಮಾರುಕಟ್ಟೆ, ನ್ಯೂಯಾರ್ಕ್‌ ಮರ್ಕೆಂಟೈಲ್‌ ಎಕ್ಸ್‌ಚೇಂಜ್‌ನಲ್ಲಿ ಕಚ್ಚಾ ತೈಲದ ಬೆಲೆ ಶೇ.5.33 ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 96.92 ಡಾಲರ್‌ ಆಗಿದೆ. ಬ್ರೆಂಟ್‌ ಕಚ್ಚಾ ತೈಲ ಶೇ.5.6 ಏರಿಕೆಯಾಗಿ, ಪ್ರತೀ ಬ್ಯಾರೆಲ್‌ಗೆ 98.33ಗೆ ಏರಿದೆ. ಹೀಗಾಗಿ ಮತ್ತೆ ಪ್ರತೀ ಬ್ಯಾರೆಲ್‌ಗೆ 100 ಅಮೆರಿಕನ್‌ ಡಾಲರ್‌ನತ್ತ ಏರಿಕೆಯಾಗುವತ್ತ ಸಾಗಿದೆ.

ರಷ್ಯಾ ಬ್ಯಾಂಕ್‌ಗಳಿಗೆ ನಿಷೇಧ: ರಷ್ಯಾದ ಕೇಂದ್ರ ಬ್ಯಾಂಕ್‌ ಮತ್ತು ಸರಕಾರಿ ನಿಧಿಗಳ ಮೇಲೆ ಅಮೆರಿಕ ಸರಕಾರ ನಿಷೇಧ ಹೇರಿದೆ. ಇದರಿಂದಾಗಿ ರಷ್ಯಾದ ಅರ್ಥ ವ್ಯವಸ್ಥೆ ಮೇಲೆ ಮತ್ತಷ್ಟು ಪ್ರತಿಕೂಲ ಪರಿಣಾಮಗಳು ಉಂಟಾಗಿವೆ.
ಜಗತ್ತಿನ ಷೇರು ಪೇಟೆ ಇಳಿಕೆ:ಇದೇ ವೇಳೆ ಜಗತ್ತಿನ ಹಲವು ರಾಷ್ಟ್ರಗಳ ಷೇರುಪೇಟೆಯಲ್ಲಿ ಕೂಡ ನಿರಾಶಾ ದಾಯಕ ವಹಿವಾಟು ನಡೆದಿದೆ. ಯು.ಕೆ.ಯ ಎಫ್ಟಿಎಸ್‌ಇ ಶೇ.1, ಜರ್ಮನಿಯ ಡಿಎಎಕ್ಸ್‌ ಶೇ.2, ಫ್ರಾನ್ಸ್‌ನ ಸಿಎಸಿ 40 ಶೇ.2 ರಷ್ಟು ಕುಸಿತ ಅನುಭವಿಸಿವೆ. ಹಾಂಕಾಂಗ್‌, ಶಾಂಘೈ ಷೇರುಪೇಟೆಯೂ ಕುಸಿತ ಅನುಭವಿಸಿವೆ.

Advertisement

ಚೇತರಿಸಿದ ಬಿಎಸ್‌ಇ
ಉಕ್ರೇನ್‌-ರಷ್ಯಾ ಬಿಕ್ಕಟ್ಟಿನಿಂದಾಗಿ ಬಾಂಬೆ ಷೇರು ಪೇಟೆಯಲ್ಲಿ ಸೋಮವಾರ ಸೂಚ್ಯಂಕ ವಹಿವಾಟಿನ ಆರಂಭದಲ್ಲಿ 1,025 ಅಂಕಗಳ ವರೆಗೆ ಕುಸಿತ ಕಂಡಿತ್ತು. ಅನಂತರ ಹಂತಗಳಲ್ಲಿ ಚೇತರಿಕೆ ದಾಖಲಿಸಿ ದಿನದ ಮುಕ್ತಾಯದ ವೇಳೆಗೆ 388.76 ಅಂಕ ಏರಿಕೆಯಾಯಿತು. ಹೀಗಾಗಿ ಸೂಚ್ಯಂಕ 54,833.50ರಲ್ಲಿ ಮುಕ್ತಾಯ ಗೊಂಡಿತು. ನಿಫ್ಟಿ ಕೂಡ 135.50 ಅಂಕ ಏರಿಕೆಯಾಗಿ, 16,793.90ರಲ್ಲಿ ಕೊನೆಗೊಂಡಿದೆ. ಇದೇ ವೇಳೆ, ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 2 ಪೈಸೆ ಕುಸಿತ ಅನುಭವಿಸಿ, 75.35 ರೂ.ಗಳಿಗೆ ಮುಕ್ತಾಯವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next