ಮಾಸ್ಕೋ: ಕೋವಿಡ್ ಲಸಿಕೆ ಸ್ಫುಟಿಕ್ ವಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ್ದ ರಷ್ಯಾದ ವಿಜ್ಞಾನಿ ಆಂಡ್ರೆ ಬೊಟಿಕೋವ್ (47) ಕೊಲೆಯಾದ ಸ್ಥಿತಿಯಲ್ಲಿ ತಮ್ಮ ನಿವಾಸದಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಮಾಸ್ಕೋದಲ್ಲಿರುವ ತಮ್ಮ ನಿವಾಸದಲ್ಲಿ ಆಂಡ್ರೆ ಬೊಟಿಕೋವ್ ಅವರ ಮೃತದೇಹ ಕೊಲೆಯಾಗಿರುವ ಸ್ಥಿತಿಯಲ್ಲಿ ಗುರುವಾರ (ಮಾ.2 ರಂದು) ಪತ್ತೆಯಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ಗಮಲೇಯ ರಾಷ್ಟ್ರೀಯ ಪರಿಸರ ವಿಜ್ಞಾನ ಮತ್ತು ಗಣಿತ ಸಂಶೋಧನಾ ಕೇಂದ್ರದ ಹಿರಿಯ ಸಂಶೋಧಕರಾಗಿ ಆಂಡ್ರೆ ಬೊಟಿಕೋವ್ ಕೆಲಸ ಮಾಡುತ್ತಿದ್ದರು. ಕೋವಿಡ್ ಲಸಿಕೆ ಸ್ಫುಟಿಕ್ ವಿಯನ್ನು ಇತರ 18 ಜನರೊಂದಿಗೆ ಅಭಿವೃದ್ಧಿಪಡಿಸಲು ಆಂಡ್ರೆ ಬೊಟಿಕೋವ್ ಸಹಾಯ ಮಾಡಿದ್ದರು. ಘಟನೆಯ ಕುರಿತು ರಷ್ಯಾದ ಒಕ್ಕೂಟದ ತನಿಖಾ ಸಮಿತಿಯ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ಹಣಕಾಸಿನ ವಿಷಯವಾಗಿ 29 ವರ್ಷದ ಯುವಕನೊಂದಿಗೆ ಆಂಡ್ರೆ ಬೊಟಿಕೋವ್ ಮಾತುಕತೆ ನಡೆಸುವ ವೇಳೆ, ಮಾತು ವಾಗ್ವಾದಕ್ಕೆ ತಿರುಗಿದೆ ಈ ವೇಳೆ ಯುವಕ ಬೆಲ್ಟ್ ನಿಂದ ಆಂಡ್ರೆ ಬೊಟಿಕೋವ್ ಅವರ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಶಂಕಿತ ಆರೋಪಿಯನ್ನು ಕೆಲ ಗಂಟೆಗಳ ಬಳಿಕ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ವೈರಾಲಜಿಸ್ಟ್ ಆಂಡ್ರೆ ಬೊಟಿಕೋವ್ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2021 ರಲ್ಲಿ ಕೋವಿಡ್ ಲಸಿಕೆಯಲ್ಲಿ ಮಾಡಿದ ಕೆಲಸಕ್ಕಾಗಿ ಆರ್ಡರ್ ಆಫ್ ಮೆರಿಟ್ ಫಾರ್ ಫಾದರ್‌ಲ್ಯಾಂಡ್ ಪ್ರಶಸ್ತಿಯನ್ನು ನೀಡಿದ್ದರು.