Advertisement

ಗಗನಚುಂಬಿ ಕಟ್ಟಡಗಳೇ ರಷ್ಯಾದ ಗುರಿ

11:46 PM Mar 02, 2022 | Team Udayavani |

ಕೀವ್‌/ಮಾಸ್ಕೋ: ಯುದ್ಧ ಆರಂಭವಾಗಿ ಬುಧವಾರಕ್ಕೆ 7 ದಿನಗಳು ಪೂರ್ಣಗೊಂಡಿದ್ದು, ಉಕ್ರೇನ್‌ ಮೇಲೆ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಖಾರ್ಕಿವ್‌ ನಗರದ ಪ್ರಮುಖ ಮೂಲಸೌಕರ್ಯ ಕಟ್ಟಡಗಳತ್ತ ಬುಧವಾರ ಕ್ಷಿಪಣಿ ಹಾಗೂ ಶೆಲ್‌ಗ‌ಳು ತೂರಿಬಂದಿವೆ. ಖಾರ್ಕಿವ್‌ನ ಸಿಟಿ ಕೌನ್ಸಿಲ್‌ ಕಟ್ಟಡ, ಪ್ಯಾಲೇಸ್‌ ಆಫ್ ಲೇಬರ್‌ ಸೇರಿದಂತೆ ಹಲವು ಗಗನಚುಂಬಿ ಕಟ್ಟಡಗಳನ್ನು ಗುರಿ ಮಾಡಲಾಗಿದೆ.

Advertisement

ದಾಳಿಯಿಂದಾಗಿ ಇಲ್ಲಿರುವ ಪೊಲೀಸ್‌ ಪ್ರಧಾನಿ ಕಚೇರಿ ಹಾಗೂ ಗುಪ್ತಚರ ಕಚೇರಿಗಳು ಹಾನಿಗೀಡಾಗಿವೆ. ಸ್ಫೋಟದ ತೀವ್ರತೆಗೆ ಕಟ್ಟಡಗಳ ಛಾವಣಿಗಳು ಛಿದ್ರವಾಗಿದ್ದು, ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಕೇವಲ 24 ಗಂಟೆಗಳಲ್ಲಿ ಈ ನಗರದಲ್ಲಿ ರಷ್ಯಾ ದಾಳಿಗೆ 21 ಮಂದಿ ಬಲಿಯಾದರೆ, 112 ಮಂದಿ ಗಾಯಗೊಂಡಿದ್ದಾರೆ.
ಉಕ್ರೇನ್‌ನ ಖೆರ್ಸಾನ್‌ ನಗರವನ್ನು ರಷ್ಯಾ ಪಡೆ ಆಕ್ರಮಿಸಿಕೊಂಡಿದೆ. ಈ ನಗರವು ತಮ್ಮ ವಶವಾಗಿದೆ ಎಂದು ಸೇನೆ ಘೋಷಿಸಿದೆ.

ನಮ್ಮನ್ನು ಅಳಿಸಿಹಾಕಲು ಹೊರಟಿದೆ: ರಷ್ಯಾವು ನಮ್ಮೆಲ್ಲರನ್ನು ಅಳಿಸಿಹಾಕಲು ಮುಂದಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಬುಧವಾರ ಹೇಳಿದ್ದಾರೆ. ಪುತಿನ್‌ಗೆ ನಮ್ಮ ದೇಶದ ರಾಜಧಾನಿ ಬಗ್ಗೆ ಗೊತ್ತಿಲ್ಲ, ನಮ್ಮ ಇತಿಹಾಸದ ಬಗ್ಗೆಯೂ ಗೊತ್ತಿಲ್ಲ. ಆದರೆ, ನಮ್ಮ ಚರಿತ್ರೆಯನ್ನು, ನಮ್ಮ ದೇಶವನ್ನು, ನಮ್ಮೆಲ್ಲರನ್ನು ನಾಶ ಮಾಡುವುದೇ ಅವರ ಗುರಿಯಾಗಿದೆ ಎಂದೂ ಅವರು ಆಕ್ರೋಶಭರಿತರಾಗಿ ನುಡಿದಿದ್ದಾರೆ. ಈ ನಡುವೆಯೇ, ನಾವು ಉಕ್ರೇನ್‌ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಿದ್ಧ ಎಂದು ರಷ್ಯಾ ಹೇಳಿದೆ.

ರಷ್ಯಾಕ್ಕೆೆ ನಿರ್ಬಂಧ ಹೇರಲ್ಲ: ಚೀನ
ಪುತಿನ್‌ ಸರಕಾರಕ್ಕೆ ಆರ್ಥಿಕ ದಿಗ್ಬಂಧನ ಹೇರುವ ಅಮೆರಿಕ ಮತ್ತು ಐರೋಪ್ಯ ಸರಕಾರಗಳೊಂದಿಗೆ ತಾನು ಕೈಜೋಡಿಸುವುದಿಲ್ಲ ಎಂದು ಚೀನ ಬುಧವಾರ ಸ್ಪಷ್ಟಪಡಿಸಿದೆ. ಈ ಮೂಲಕ ಉಕ್ರೇನ್‌ ಯುದ್ಧದಲ್ಲಿ ತಾನು ರಷ್ಯಾ ಪರ ನಿಲ್ಲುತ್ತೇನೆ ಎನ್ನುವುದನ್ನು ದೃಢಪಡಿಸಿದೆ. ರಷ್ಯಾದ ತೈಲ ಮತ್ತು ಗ್ಯಾಸ್‌ನ ಪ್ರಮುಖ ಖರೀದಿದಾರ ದೇಶದಲ್ಲಿ ಚೀನ ಕೂಡ ಒಂದು. “ನಾವು ಈ ನಿರ್ಬಂಧದಲ್ಲಿ ಸೇರುವುದಿಲ್ಲ. ರಷ್ಯಾದೊಂದಿಗಿನ ವ್ಯಾಪಾರ- ವಹಿವಾಟು ಎಂದಿನಂತೆ ಮುಂದು ವರಿಯಲಿದೆ’ ಎಂದು ಚೀನದ ಬ್ಯಾಂಕ್‌ ನಿಯಂತ್ರಣ ಸಂಸ್ಥೆ ತಿಳಿಸಿದೆ.

ಸಮರಾಂಗಣದಲ್ಲಿ
-ಉಕ್ರೇನ್‌ಗೆ 3 ಶತಕೋಟಿ ಡಾಲರ್‌ ಪರಿಹಾರ ಪ್ಯಾಕೇಜ್‌ ಸಿದ್ಧಪಡಿಸಿದ ವಿಶ್ವಬ್ಯಾಂಕ್‌
-ಪೈಪ್‌ಲೈನ್‌ ಯೋಜನೆ ರದ್ದಾದ ಹಿನ್ನೆಲೆ ದಿವಾಳಿ ಯಾದ ರಷ್ಯಾ ಮಾಲಕತ್ವದ ನಾರ್ಡ್‌ ಸ್ಟ್ರೀಮ್‌ 2
-ರಷ್ಯಾದ ನರಮೇಧ ಸಂಬಂಧ ಮಾ.7, 8ರಂದು ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ವಿಚಾರಣೆ
-ದಕ್ಷಿಣದ ಖೇರ್ಸಾನ್‌ ನಗರವನ್ನು ಸುಪರ್ದಿಗೆ ಪಡೆದ ರಷ್ಯಾ ಸೇನಾಪಡೆ
-ಅಮೆರಿಕ ಸಂಸತ್‌ ಉದ್ದೇಶಿಸಿ ಅಧ್ಯಕ್ಷ ಬೈಡೆನ್‌ ಭಾಷಣ. ಪುತಿನ್‌ರನ್ನು ಸರ್ವಾಧಿಕಾರಿ ಎಂದು ಕರೆದ ಜೋ.
-ಖಾರ್ಕಿವ್‌ ನಗರದಲ್ಲಿ ಶೆಲ್‌, ಕ್ಷಿಪಣಿಗಳಿಂದ ನಿರಂತರ ದಾಳಿ. ನಾಲ್ವರ ಸಾವು, 9 ಮಂದಿಗೆ ಗಾಯ
-ಖಾರ್ಕಿವ್‌ನಲ್ಲಿ ಶೆಲ್‌ ದಾಳಿ ನಡೆಯದ ಸ್ಥಳವೇ ಇಲ್ಲ ಎಂದ ಉಕ್ರೇನ್‌ ಆಂತರಿಕ ಸಚಿವಾಲಯ
-3ನೇ ವಿಶ್ವಯುದ್ಧವು ಅಣ್ವಸ್ತ್ರ ಸಮರವೇ ಆಗಿರುತ್ತದೆ ಎಂದ ರಷ್ಯಾ ವಿದೇಶಾಂಗ ಸಚಿವ
-ಉಕ್ರೇನ್‌ ಜತೆ ಮಾತುಕತೆ ಮುಂದುವರಿಸಲು ಸಿದ್ಧ ಎಂದು ರಷ್ಯಾ ಘೋಷಣೆ
-ತಟಸ್ಥ ಧೋರಣೆ ಸಮಯ ಇದಲ್ಲ, ದಯವಿಟ್ಟು ನಮ್ಮ ಬೆಂಬಲಕ್ಕೆ ನಿಲ್ಲಿ ಎಂದ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next