Advertisement

ಷೇರುಪೇಟೆಗೆ ಯುದ್ಧಾಘಾತ 

12:43 AM Feb 25, 2022 | Team Udayavani |

ಮುಂಬಯಿ: ಉಕ್ರೇನ್‌ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಭಾರತ ಸಹಿತ ಜಗತ್ತಿನಾದ್ಯಂತ ಷೇರುಪೇಟೆಗಳು ತಲ್ಲಣಿಸಿವೆ.

Advertisement

ಹೂಡಿಕೆದಾರರು ಒಂದೇ ಸಮನೆ ಷೇರುಗಳ ಮಾರಾಟ ದಲ್ಲಿ ತೊಡಗಿದ ಕಾರಣ ಮುಂಬಯಿ  ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 2,700 ಅಂಕಗಳ ಕುಸಿತ ದಾಖಲಿಸಿದೆ. ಅದೇ ರೀತಿ ನಿಫ್ಟಿ ಕೂಡ 815 ಅಂಕಗಳಷ್ಟು ಪತನಗೊಂಡಿದೆ. ಸೆನ್ಸೆಕ್ಸ್‌ ಪತನದಿಂದಾಗಿ ಹೂಡಿಕೆದಾರರ 13 ಲಕ್ಷ ಕೋಟಿ ರೂ.ಗಳ ಸಂಪತ್ತು ಕೊಚ್ಚಿಹೋದವು.

ವಹಿವಾಟಿನ ಒಂದು ಹಂತದಲ್ಲಿ 2,850 ಅಂಕ ಕುಸಿತ ಕಂಡಿದ್ದ ಸೆನ್ಸೆಕ್ಸ್‌, ದಿನದಂತ್ಯದ  ವೇಳೆ 2,702.15ಕ್ಕೆ (ಶೇ. 4.72) ಕುಸಿಯಿತು. ಒಂದೇ ದಿನ  ಇಷ್ಟೊಂದು ಪ್ರಮಾಣದಲ್ಲಿ ಕುಸಿದಿರುವುದು 2 ವರ್ಷಗಳಲ್ಲಿ ಇದೇ ಮೊದಲು ಹಾಗೂ  ಷೇರುಪೇಟೆಯ ಇತಿಹಾಸದಲ್ಲಿ ನಾಲ್ಕನೇ ಬಾರಿ.

ಸೆನ್ಸೆಕ್ಸ್‌ ಚಾರ್ಟ್‌ನಲ್ಲಿ ಎಲ್ಲ 30 ಷೇರುಗಳೂ ಭಾರೀ  ನಷ್ಟ ಅನುಭವಿಸಿದ್ದು, ಇಂಡಸ್‌ಇಂಡ್‌ ಬ್ಯಾಂಕ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಬಜಾಜ್‌ ಫೈನಾನ್ಸ್‌, ಆಕ್ಸಿಸ್‌ ಬ್ಯಾಂಕ್‌, ಟೆಕ್‌ ಮಹೀಂದ್ರಾ, ಮಾರುತಿ ಸುಜುಕಿ ಇಂಡಿಯಾ, ಟಾಟಾ ಸ್ಟೀಲ್‌, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್ಸಿ ಬ್ಯಾಂಕ್‌ ಷೇರುಗಳು  ಶೇ.5.48ರಿಂದ ಶೇ.8ರಷ್ಟು ಕುಸಿತ ಕಂಡವು.

2,702.15 ಅಂಕ :  ಸೆನ್ಸೆಕ್ಸ್‌  ಕುಸಿತ

Advertisement

54,529.91: ವಹಿವಾಟು ಅಂತ್ಯ

815.30 ಅಂಕ : ನಿಫ್ಟಿ  ಕುಸಿತ

16,247.95 :  ವಹಿವಾಟು ಅಂತ್ಯ

ರೂಪಾಯಿ ಮೌಲ್ಯಕ್ಕೂ ಧಕ್ಕೆ :

ರಷ್ಯಾ-ಉಕ್ರೇನ್‌ ಬೆಳವಣಿಗೆ  ಡಾಲರ್‌ ಎದುರು ರೂಪಾಯಿ ಮೌಲ್ಯವನ್ನು ಮತ್ತಷ್ಟು ತಗ್ಗಿಸಿದೆ. ಗುರುವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 99 ಪೈಸೆ ಇಳಿಕೆಯಾಗಿ 75.60 ರೂ. ತಲುಪಿದೆ. ಏಷ್ಯಾದ ಕರೆನ್ಸಿಗಳ ಪೈಕಿ ರೂಪಾಯಿ ಅತ್ಯಂತ ಕಳಪೆ ಸಾಧನೆಗೈದ  ಕುಖ್ಯಾತಿಗೆ  ಒಳಗಾಯಿತು.

ಚಿನ್ನದ ದರದಲ್ಲಿ ಭಾರೀ ಏರಿಕೆ :

ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಕಾರಣ, ಚಿನ್ನದ ದರದಲ್ಲಿ ಭಾರೀ ಏರಿಕೆಯಾಗಿದೆ. ದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ 1,656 ರೂ. ಏರಿಕೆಯಾಗಿ, 10 ಗ್ರಾಂಗೆ 51,627 ರೂ.ಗೆ ತಲುಪಿದೆ. ಬೆಳ್ಳಿ ದರದಲ್ಲೂ ಹೆಚ್ಚಳವಾಗಿದ್ದು, 2,350 ರೂ. ಏರಿಕೆ ಕಂಡು, ಕೆಜಿಗೆ 66,267 ರೂ. ಆಗಿದೆ.

ಕಚ್ಚಾ ತೈಲ 105 ಡಾಲರ್‌ :

ಯುದ್ಧ ಆರಂಭವಾದ ಮೊದಲ ದಿನವೇ ಜಾಗತಿಕ ಕಚ್ಚಾ ತೈಲದ ದರವು ಗಗನಕ್ಕೇರಿದೆ. ಬ್ರೆಂಟ್‌ ಕಚ್ಚಾ ತೈಲದ ದರ ಶೇ.9ರಷ್ಟು ಹೆಚ್ಚಳವಾಗಿ, ಬ್ಯಾರೆಲ್‌ಗೆ 105.3 ಡಾಲರ್‌ಗೆ ತಲುಪಿದೆ. 2014ರ ಬಳಿಕ ತೈಲ ದರ ಈ ಮಟ್ಟಕ್ಕೇರಿರುವುದು ಇದೇ ಮೊದಲು. ರಷ್ಯಾ ಮೇಲಿನ ನಿರ್ಬಂಧಗಳು ಅಲ್ಲಿನ ಕಂಪೆನಿಗಳ ಕಚ್ಚಾ ತೈಲ ರಫ್ತಿನ್ನು ಬಾಧಿಸಲಿದೆ  ಎಂಬ ಭೀತಿಯೇ ದರ ಏರಿಕೆಗೆ ಕಾರಣ.

 ರಷ್ಯಾ ಷೇರು ಶೇ.45 ಕುಸಿತ :

ರಷ್ಯಾ ಷೇರು ಮಾರುಕಟ್ಟೆ ಮೇಲೆ ಯುದ್ಧವು ಭಾರೀ ಪರಿಣಾಮ ಬೀರಿದ್ದು, ಷೇರುಪೇಟೆ ಶೇ.45ರಷ್ಟು ಕುಸಿತ ದಾಖಲಿಸಿದೆ. ಗುರುವಾರ ಆರಂಭದಲ್ಲಿ ವಹಿವಾಟನ್ನೇ ಸ್ಥಗಿತಗೊಳಿಸಲಾಗಿತ್ತು. ಅನಂತರ ಮತ್ತೆ ವಹಿವಾಟು ಆರಂಭವಾಯಿತು. ದಿನದ ಅಂತ್ಯಕ್ಕೆ ಹೂಡಿಕೆದಾರರು 19.58 ಲಕ್ಷ ಕೋಟಿ ರೂ. ನಷ್ಟ ಅನುಭವಿಸುವಂತಾಯಿತು.

ವಿಶ್ವ  ಮಾರುಕಟ್ಟೆಯಲ್ಲೂ ಭಾರೀ ಕುಸಿತ :

ಯುದ್ಧವು ವಿಶ್ವ ಮಾರುಕಟ್ಟೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದು, ಯುರೋಪ್‌ ಮತ್ತು ಏಷ್ಯಾ ಮಾರುಕಟ್ಟೆ ಗಳು ಗುರುವಾರ ಶೇ.4ರಷ್ಟು ಕುಸಿತ ಕಂಡಿವೆ. ಟೋಕಿಯೋದ ನಿಕ್ಕಿ ಸೂಚ್ಯಂಕ ಶೇ.1.8, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್‌ ಶೇ.3.2, ಶಾಂಘೈ ಸೂಚ್ಯಂಕ ಶೇ.1.7ರಷ್ಟು ಕುಸಿತ ದಾಖಲಿಸಿವೆ. ಸಿಯೋಲ್‌ನ ಕೋಸ್ಪಿ ಶೇ.2.6, ಸಿಡ್ನಿಯ ಎಸ್‌ ಆ್ಯಂಡ್‌ ಪಿ-ಎಎಸ್‌ಎಕ್ಸ್‌ ಶೇ.3, ನ್ಯೂಜಿಲೆಂಡ್‌ನ‌ ಷೇರುಪೇಟೆ ಶೇ.3.3 ಪತನ ಗೊಂಡಿವೆ. ಇನ್ನು, ಲಂಡನ್‌ನ ಎಫ್ಟಿ ಎಸ್‌ಇ 100 ಶೇ.2.5, ಫ್ರಾಂಕ್‌ ಫ‌ರ್ಟ್‌ನ ಡಿಎಎಕ್ಸ್‌ ಶೇ.4, ಪ್ಯಾರಿಸ್‌ನ ಸಿಎಸಿ ಶೇ.3.6 ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next