ನವದೆಹಲಿ:ರಷ್ಯಾದ ಸ್ಫುಟ್ನಿಕ್ v ಲಸಿಕೆ ಭಾರತದಲ್ಲಿ ತಯಾರಿಸಲಾಗುತ್ತಿದ್ದು, ಈ ಲಸಿಕೆಯ ಒಂದು ಡೋಸ್ ನ ಬೆಲೆ 995.40 ರೂಪಾಯಿ + ಶೇ.5ರಷ್ಟು ಜಿಎಸ್ ಟಿ ಪಾವತಿಸಬೇಕು ಎಂದು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಶುಕ್ರವಾರ(ಮೇ14) ಘೋಷಿಸಿದ್ದು, ದೇಶದಲ್ಲಿ ಸ್ಥಳೀಯವಾಗಿ ಲಸಿಕೆ ಪೂರೈಕೆ ಆರಂಭವಾದ ನಂತರ ಕಡಿಮೆ ಬೆಲೆಗೆ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಕೋವಿಡ್ 19 : ಲಸಿಕೆ ಲಭ್ಯತೆಯನ್ನು ತಿಳಿದು ಆಸ್ಪತ್ರೆಗೆ ಬನ್ನಿ : ಮನವಿ
ಹೈದರಾಬಾದ್ ಮೂಲದ ಔಷಧ ತಯಾರಿಕೆ ಸಂಸ್ಥೆ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ರಷ್ಯಾದ ಸ್ಫುಟ್ನಿಕ್ v ಲಸಿಕೆಯ ಮೊದಲ ಚುಚ್ಚುಮದ್ದನ್ನು ಫಲಾನುಭವಿಯೊಬ್ಬರಿಗೆ ನೀಡುವ ಮೂಲಕ ಭಾರತದಲ್ಲಿ ತುರ್ತು ಬಳಕೆಗೆ ಚಾಲನೆ ನೀಡಿದೆ ಎಂದು ವರದಿ ಹೇಳಿದೆ.
ಸ್ಫುಟ್ನಿಕ್ v ಲಸಿಕೆಯ ಮೊದಲ ಸರಕು ಮೇ 1ರಂದು ಭಾರತಕ್ಕೆ ಸರಬರಾಜಾಗಿದ್ದು, ಮೇ 13ರಂದು ಕೇಂದ್ರ ಔಷಧ ಪ್ರಯೋಗಾಲಯ ನಿಯಂತ್ರಕ ಮಂಡಳಿ ಅನುಮತಿ ಪಡೆದಿರುವುದಾಗಿ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ತಿಂಗಳು ಇನ್ನಷ್ಟು ಹೆಚ್ಚಿನ ಸ್ಫುಟ್ನಿಕ್ ಲಸಿಕೆಯನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದೆ. ರಷ್ಯಾದ ಸ್ಫುಟ್ನಿಕ್ v ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಹೈದರಬಾದ್ ನ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಒಪ್ಪಂದ ಮಾಡಿಕೊಂಡಿದೆ.