ಮಾಸ್ಕೋ: ಆಕೆ ನಗುತ್ತಾ ಬಳುಕತ್ತಾ ನಡೆಯುತ್ತಿದ್ದರೆ ನೋಡುತ್ತಿದ್ದ ಎಲ್ಲರೂ ಫಿದಾ!
ಆದರೆ ಈ ಗಜಗಮನೆ ವಿಷ್ಯದಲ್ಲಿ ಆಗಿದ್ದೇ ಬೇರೆ. ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ಅಷ್ಟಕ್ಕೇ ಬಿಡಲಿಲ್ಲ. ಪರೀಕ್ಷೆ ಮಾಡೇ ಬಿಟ್ಟರು. ಅಲ್ಲಿಗೆ ಆಕೆಯ ನಿಜ ವಿಚಾರ ಬಯಲಾಯ್ತು ನೋಡಿ.
ಆ ಮಹಿಳೆ ಬಳಿ ಇದ್ದಿದ್ದು ಬರೋಬ್ಬರಿ 1.9 ಕೆ.ಜಿ. ಚಿನ್ನ. ಅದೂ ಹಾಕಿದ ಶೂನಲ್ಲಿ.
ರಷ್ಯಾ-ಚೀನ ಗಡಿಯಲ್ಲಿ (ಪೂರ್ವ ಸೈಬೀರಿಯಾ)ದಲ್ಲಿ ರಷ್ಯಾದ ಗಡಿ ಪ್ರವೇಶಿಸಿದ ಮಹಿಳೆ ಬಳಿ ಇಷ್ಟೊಂದು ಚಿನ್ನ ಪತ್ತೆಯಾಗಿದೆ.
ಶೂ ಇನ್ಸೋಲ್ ಅಡಿಯಲ್ಲಿ ಟೇಪ್ ಹಾಕಿ ಚಿನ್ನವನ್ನು ಇಡಲಾಗಿತ್ತಂತೆ. ಆಕೆ ಬಳಿ ಯಾವುದೇ ದಾಖಲೆ ಇಲ್ಲದ್ದರಿಂದ ಚಿನ್ನ ಕಳ್ಳಸಾಗಣೆ ಎಂದು ಆಕೆ ವಿರುದ್ಧ ಕೇಸು ಜಡಿದೇ ಬಿಟ್ಟಿದ್ದಾರೆ. ಚೀನದ ಪ್ರಜೆಯೊಬ್ಬನ ಕೋರಿಕೆ ಮೇರೆಗೆ ತಾನು ಚಿನ್ನವನ್ನು ಹೀಗೆ ಸಾಗಿಸುತ್ತಿದ್ದುದಾಗಿ ಆಕೆ ಬಳಿಕ ಬಾಯ್ಬಿಬಿಟ್ಟಿದ್ದಾಳೆ.
ನಡೆದುಕೊಂಡು ಬರುತ್ತಿದ್ದರೂ ಆಕೆಯ ನಡವಳಿಕೆ ಶಂಕಾಸ್ಪದವಾಗಿತ್ತು. ಆಕೆ ಕಾಲನ್ನು ಸಹಜವಾಗಿ ಮುಂದೆ ಇಟ್ಟಿರಲಿಲ್ಲ. ಇದರಿಂದ ಅಧಿಕಾರಿಗಳು ಪರಿಶೀಲನೆಗೆ ಇಳಿದಿದ್ದು, ಚಿನ್ನ ಸಾಗಾಟದ ಕಳ್ಳಿ ಸಿಕ್ಕಿ ಬೀಳಲು ಕಾರಣವಾಯಿತು.