ಕೀವ್: ರಷ್ಯಾ- ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಉಕ್ರೇನ್ ನ ಹಲವೆಡೆ ರಷ್ಯಾ ದಾಳಿ ನಡೆಸುತ್ತಿದೆ. ಕೇವಲ ಸೈನಿಕರ ಮೇಲೆ ಮಾತ್ರವಲ್ಲದೆ ಜನವಸತಿ ಪ್ರದೇಶಗಳಲ್ಲೂ ರಷ್ಯಾ ಮದ್ದುಗುಂಡುಗಳು ಸದ್ದು ಮಾಡುತ್ತಿದೆ. ಈ ನಡುವೆ ರಷ್ಯಾ ಫಿರಂಗಿ ದಾಳಿಗೆ ಉಕ್ರೇನ್ ನ 70ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ.
ಖಾರ್ಕಿವ್ ಮತ್ತು ಕೀವ್ ನಗರಗಳ ನಡುವಿನ ಓಖ್ಟಿರ್ಕಾ ಪಟ್ಟಣದಲ್ಲಿರುವ ಮಿಲಿಟರಿ ಬೇಸ್ ಮೇಲೆ ರಷ್ಯಾ ಫಿರಂಗಿ ದಾಳಿ ನಡೆಸಿದೆ. ಉಕ್ರೇನ್ ರಾಜಧಾನಿ ಕೀವ್ ನಿಂದ ಸುಮಾರು 345 ಕಿ.ಮೀ ದೂರದಲ್ಲಿದೆ ಈ ಓಖ್ಟಿರ್ಕಾ.
ವಾಯು ದಾಳಿ ಭೀತಿಯಿಂದ ಉಕ್ರೇನ್ ನಗರಗಳಾದ ವೊಲಿನ್, ಟೆರ್ನೋಪಿಲ್ ಮತ್ತು ರಿವ್ನೆ ಪ್ರದೇಶಗಳಲ್ಲಿ ಏರ್ ರೈಡ್ ಸೈರನ್ ಮೊಳಗಿಸಲಾಗಿದೆ. ಜನರಿಗೆ ಕೂಡಲೇ ಸ್ಥಳೀಯ ಆಶ್ರಯಗಳಲ್ಲಿ ತಲೆಮರೆಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಪ್ರಬಲ ಪ್ರತಿರೋಧಕ್ಕೆ ಥರಗುಟ್ಟಿದ ರಷ್ಯಾ; ಕೀವ್ ವಶ ಪ್ರಯತ್ನವೂ ವಿಫಲ
ರಷ್ಯಾವು ಇಲ್ಲಿಯವರೆಗೆ 350 ಕ್ಕೂ ಹೆಚ್ಚು ಉಕ್ರೇನ್ ನಾಗರಿಕರನ್ನು ಕೊಂದಿದೆ ಎಂದು ವರದಿಯಾಗಿದೆ. 40 ಮೈಲಿ ಉದ್ದದ ಬೆಂಗಾವಲು ಪಡೆಯು ಉಕ್ರೇನ್ ರಾಜಧಾನಿ ಕೀವ್ ನತ್ತ ಸಾಗುತ್ತಿರುವುದನ್ನು ಇತ್ತೀಚಿನ ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ.
ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾದಂತಹ ಹಲವಾರು ರಾಷ್ಟ್ರಗಳು ಉಕ್ರೇನ್ ಗೆ ಮಿಲಿಟರಿ ಬೆಂಬಲವನ್ನು ಕಳುಹಿಸಲು ನಿರ್ಧರಿಸಿವೆ.