ಮೈಸೂರು: ಉಕ್ರೇನ್ ಹಾಗೂ ರಷ್ಯಾ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭವಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾ ಅಧ್ಯಕ್ಷರೇ ಖುದ್ದಾಗಿ ಪ್ರಧಾನಿ ಮೋದಿಯವರಿಗೆ ಕರೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ವಿಚಾರದಲ್ಲಿ ಯಾವ ರೀತಿ ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ಭಾರತ ಸರ್ಕಾರ ಅಥವಾ ಮೋದಿಯವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಮೋದಿ ಮತ್ತು ಪುಟಿನ್ ನಡುವೆ ಆತ್ಮೀಯ ಸ್ನೇಹ ಸಂಬಂಧವಿದೆ. ಅವರು ಏನು ಮಾತನಾಡಿದ್ದಾರೆಂಬ ಮಾಹಿತಿ ನನಗಿಲ್ಲ ಎಂದರು.
ಇದನ್ನೂ ಓದಿ:ಚೆರ್ನೋಬಿಲ್ ಪರಮಾಣು ಸ್ಥಾವರ ವಶಪಡಿಸಿಕೊಂಡ ರಷ್ಯಾ ಪಡೆಗಳು!
ಎಲ್ಲಾ ರಾಷ್ಟ್ರಗಳಿಗೂ ಸ್ವಾರ್ಥವೇ ಮುಖ್ಯ. ಉಕ್ರೇನ್ ನ ಬಹುತೇಕ ಗ್ಯಾಸ್ ಲೈನ್ ಗಳು ರಷ್ಯಾ ಮೂಲ ಹಾದುಹೋಗುವೆ. ಉಕ್ರೇನ್ ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಷ್ಯಾ ಮುಂದಾಗಿದೆ. ಅಮೇರಿಕಾ ಕೂಡ ಸ್ವಾರ್ಥಕ್ಕಾಗಿ ಹಿಂದೆ ಯಾವೆಲ್ಲ ನಿರ್ಧಾರ ತೆಗೆದುಕೊಂಡಿದೆ ಎಂಬುದು ಗೊತ್ತಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭವಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೋದಿ ಮೇಲೆ ನಂಬಿಕೆಯಿಡಿ: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆ ವಿಚಾರವಾಗಿ ಮಾತನಾಡಿದ ಅವರು, ಭಾರತೀಯರ ರಕ್ಷಣೆಗೆ ಕೆಂದ್ರ ಸರ್ಕಾರ ಬದ್ಧವಾಗಿದೆ. ಯುದ್ಧದಿಂದ ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ. ಭಾರತದ ಸಾಕಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಭಾರತದ ಸರ್ಕಾರ ಕೂಡ ಈ ಕುರಿತು ತುರ್ತು ಸಭೆ ಮಾಡಿದೆ. ಮೊದಲ ಹಂತದಲ್ಲಿ ಒಂದು ವಿಮಾನದ ಮೂಲಕ ಭಾರತೀಯರ ರಕ್ಷಣೆಗೆ ಮುಂದಾಗಿದೆ. ರಷ್ಯಾ ಅಧ್ಯಕ್ಷರ ಜತೆ ಕೂಡ ಮಾತಾನಾಡಿದ್ದಾರೆ. ಈ ಎಲ್ಲ ವಿಚಾರ ಚರ್ಚೆ ಮಾಡಿರುತ್ತಾರೆ. ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪ್ರಧಾನಿಗಳು ಮಾತುಕತೆ ನಡೆಸುತ್ತಿದ್ದಾರೆ. ಯಾವುದೇ ಭಯ ಬೇಡ. ಮೋದಿ ಮೇಲೆ ನಂಬಿಕೆ ಇಡಿ. ಸುರಕ್ಷಿತವಾಗಿ ಭಾರತೀಯರನ್ನು ಕರೆತರುತ್ತೇವೆ ಎಂದರು.