Advertisement

ರಷ್ಯಾ ದಾಳಿ ತಡೆದಿದ್ದೇವೆ; 3 ಮಕ್ಕಳು ಸೇರಿ 198 ಮಂದಿ ಸಾವು

10:01 PM Feb 26, 2022 | Team Udayavani |

ಕೀವ್‌: ರಾಜಧಾನಿ ಕೀವ್‌ನಲ್ಲಿ ರಷ್ಯಾ ಪಡೆಗಳು ಮುನ್ನಡೆ ಸಾಧಿಸುತ್ತಿರುವಂತೆಯೇ, ರಾಜಧಾನಿಯನ್ನು ವಶಕ್ಕೆ ಪಡೆಯದಂತೆ ತಡೆಯುವಲ್ಲಿ ನಮ್ಮ ಸೈನಿಕರು ಯಶಸ್ವಿಯಾಗಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೋಲೋಡಿಮಿರ್‌ ಝೆಲೆನ್‌ಸ್ಕಿ ಘೋಷಿಸಿದ್ದಾರೆ.

Advertisement

ಶನಿವಾರ ಬೆಳಗ್ಗೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ರೊಂದಿಗೆ ಮಾತುಕತೆ ನಡೆಸಿದ್ದೇನೆ. ನಮ್ಮ ಪಾಲುದಾರ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳು ಹಾಗೂ ಯುದ್ಧ ಸಾಮಾಗ್ರಿಗಳು ಆಗಮಿಸುತ್ತಿವೆ ಎಂದೂ ಅವರು ಹೇಳಿದ್ದಾರೆ.

ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಿಲ್ಲ ಎಂದಿದ್ದ ರಷ್ಯಾ, ಈಗಾಗಲೇ 40 ಕಡೆ ಬಾಂಬ್‌ ದಾಳಿ ನಡೆಸಿದೆ. ಈ ದಾಳಿಯಿಂದ ಮೂವರು ಮಕ್ಕಳು ಸೇರಿದಂತೆ 198 ನಾಗರಿಕರು ಮೃತಪಟ್ಟಿದ್ದಾರೆ. 1,115 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 33 ಮಕ್ಕಳೂ ಸೇರಿದ್ದಾರೆ ಎಂದು ಉಕ್ರೇನ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇನ್ನೊಂದೆಡೆ, ಉಕ್ರೇನ್‌ ಮತ್ತು ರಷ್ಯಾವು ಸಂಧಾನ ಮಾತುಕತೆಗೆ ಸ್ಥಳ ನಿಗದಿ ಮಾಡುವ ಕುರಿತು ಸದ್ಯವೇ ನಿರ್ಧಾರ ಕೈಗೊಳ್ಳಲಿವೆ ಎಂದು ಝೆಲೆನ್‌ಸ್ಕಿ ಅವರ ವಕ್ತಾರ ಸೆರ್ಗಿ ನೈಕೈಫೊರೋವ್‌ ಹೇಳಿದ್ದಾರೆ.

ರೈಡ್‌ ಬೇಡ, ಶಸ್ತ್ರಾಸ್ತ್ರ ಕೊಡಿ:
“ನಿಮ್ಮನ್ನು ಉಕ್ರೇನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರ ಮಾಡಲು ವ್ಯವಸ್ಥೆ ಮಾಡುತ್ತೇವೆ’ ಎಂಬ ಅಮೆರಿಕದ ಆಫ‌ರ್‌ ಅನ್ನು ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. “ನನಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿ, ನಿಮ್ಮ ರೈಡ್‌ನ‌ ಅಗತ್ಯವಿಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ. ವಿಶೇಷವೆಂದರೆ, ಝೆಲೆನ್‌ಸ್ಕಿ ಅವರು ಕೀವ್‌ನಲ್ಲೇ ಇದ್ದು, ಶನಿವಾರ ಬೆಳಗ್ಗೆ ಅಲ್ಲಿಂದಲೇ ವಿಡಿಯೋ ಸಂದೇಶವನ್ನು ನಾಗರಿಕರಿಗೆ ರವಾನಿಸಿದ್ದಾರೆ. ಸೇನಾ ಟೆಂಟ್‌ವೊಂದರಲ್ಲಿ ಸೈನಿಕರೊಂದಿಗೆ ಚಹಾ ಕುಡಿಯುತ್ತಾ, ಅವರನ್ನು ಹುರಿದುಂಬಿಸುತ್ತಿದ್ದ ವಿಡಿಯೋ ಕೂಡ ವೈರಲ್‌ ಆಗಿದೆ.

Advertisement

ಸುಳ್ಳು ಸುದ್ದಿ ನಂಬಬೇಡಿ:
“ಉಕ್ರೇನ್‌ ಅಧ್ಯಕ್ಷರು ರಷ್ಯಾದೆದುರು ಶರಣಾಗತಿಯಾಗಿದ್ದಾರೆ ಮತ್ತು ತನ್ನೆಲ್ಲ ಸೈನಿಕರಿಗೂ ಶಸ್ತ್ರತ್ಯಾಗ ಮಾಡುವಂತೆ ಸೂಚಿಸಿದ್ದಾರೆ’ ಎಂಬ ಸುಳ್ಳು ಸುದ್ದಿಗಳು ಉಕ್ರೇನಾದ್ಯಂತ ಹರಿದಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಅವರೇ ಸ್ವತಃ ಟ್ವಿಟರ್‌ನಲ್ಲಿ ತಮ್ಮದೇ ವಿಡಿಯೋವೊಂದನ್ನು ಅಪ್‌ಲೋಡ್‌ ಮಾಡಿ, ಸುಳ್ಳು ಸುದ್ದಿಗಳನ್ನು ನಂಬದಂತೆ ಸಲಹೆ ನೀಡಿದ್ದಾರೆ. “ನಾನು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದೇನೆ. ನಾವು ನಮ್ಮ ದೇಶವನ್ನು ರಕ್ಷಿಸಿಕೊಳ್ಳೋಣ. ಇದು ನಮ್ಮ ನೆಲ, ನಮ್ಮ ದೇಶ, ಇಲ್ಲಿರುವುದು ನಮ್ಮ ಮಕ್ಕಳು. ನಾವು ನಮ್ಮನ್ನು ರಕ್ಷಿಸಿಕೊಳ್ಳಲೇಬೇಕಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next