Advertisement

ಆಹಾರ ಸಾಮಗ್ರಿ ಖಾಲಿಯಾಗುತ್ತಿದೆ : ಮಂಗಳೂರು ಮೂಲದ ವಿದ್ಯಾರ್ಥಿ ಪೃಥ್ವೀರಾಜ್‌ ಆತಂಕ

11:44 PM Feb 25, 2022 | Team Udayavani |

ಮಂಗಳೂರು: “ಉಕ್ರೇನ್‌ನಿಂದ ತುರ್ತಾಗಿ ನಿರ್ಗಮಿಸಲು ಯಾವಾಗ ಬಸ್‌ ಬರುತ್ತದೋ ಎಂದು ಕಾತರದಿಂದ ಕಾಯುತ್ತಿದ್ದೇವೆ. ಸೈರನ್‌ ಮೊಳಗಿದ ಕೂಡಲೇ ಬಂಕರ್‌ ಸೇರುತ್ತಿದ್ದೇವೆ’ -ಇದು ಮೂಲತಃ ಮಂಗಳೂರು ಬಿಕರ್ನಕಟ್ಟೆ ಅಳಿಕೆ ಬೈಲಿನ ಪದ್ಮನಾಭ ಭಟ್‌ ಮತ್ತು ಪ್ರೇಮಾ ಅವರ ಪುತ್ರ, ಉಕ್ರೇನ್‌ನ ದಕ್ಷಿಣ ಪೂರ್ವ ಭಾಗದ ಝಪೊರ್‌ಒಜಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್‌ ನಾಲ್ಕನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪೃಥ್ವೀರಾಜ್‌ ಅವರ ಆತಂಕದ ನುಡಿ. ಉಕ್ರೇನ್‌ನಿಂದ “ಉದಯವಾಣಿ’ಯೊಂದಿಗೆ ಮಾತನಾಡಿದ ಪೃಥ್ವೀರಾಜ್‌ ಅಲ್ಲಿನ ಸಂಕಷ್ಟದ ಸಂದರ್ಭವನ್ನು ಹಂಚಿಕೊಂಡಿದ್ದಾರೆ.

Advertisement

ನಾನು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದೇನೆ. ಸೈರನ್‌ ಮೊಳಗಿದ ಕೂಡಲೇ ವೈಯಕ್ತಿಕ ಅಗತ್ಯ ದಾಖಲೆಗಳನ್ನು ಹಿಡಿದುಕೊಂಡು ಅಪಾರ್ಟ್‌ಮೆಂಟ್‌ನ ಸನಿಹದಲ್ಲಿರುವ ಬಂಕರ್‌ಗೆ ತೆರಳುವಂತೆ ಸೂಚನೆ ಬಂದಿತ್ತು. ಅದರಂತೆ ಶುಕ್ರವಾರ ಸಂಜೆಯವರೆಗೆ ನಾನು ಕೂಡ ಬಂಕರ್‌ನಲ್ಲಿ ಕಳೆದಿದ್ದೆ. ಒಂದು ಬಂಕರ್‌ನಲ್ಲಿ ಸುಮಾರು 30 ಮಂದಿ ಇದ್ದೆವು. ನಮ್ಮ ಪರಿಸರದಲ್ಲಿ ಯಾವುದೇ ದಾಳಿಗಳು ನಡೆಯುತ್ತಿಲ್ಲ. ಆದರೆ ಸ್ವಲ್ಪ ಆತಂಕ ಸೃಷ್ಟಿಯಾಗಿದೆ ಎಂದರು.

ಆಹಾರ ಕೊರತೆಯಾಗುವ ಭೀತಿ
ಈಗ ಅಂಗಡಿಗಳಲ್ಲಿ ದಿನಬಳಕೆಯ ವಸ್ತುಗಳ ಕೊರತೆ ಎದುರಾಗುತ್ತಿದೆ. ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳು ಖಾಲಿಯಾಗಿವೆ. ಸದ್ಯದಲ್ಲೇ ಆಹಾರದ ಸಮಸ್ಯೆ ಉಂಟಾಗುವ ಅಪಾಯವಿದೆ ಅನಿಸುತ್ತಿದೆ. ಎಟಿಎಂಗಳಲ್ಲಿ ಹಣ ವಿದ್‌ಡ್ರಾ ಮಾಡಲು ಕೂಡ ಮಿತಿ ಹೇರಲಾಗಿದೆ. ವಿಮಾನಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿದವ ವ್ಯವಸ್ಥೆ ಕೂಡ ರದ್ದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿಕೆ ಬಗ್ಗೆ ನಾಗಾಭರಣ ಆತಂಕ

ರೊಮೇನಿಯಾದವರೆಗೆ ಬಸ್‌ ನಿರೀಕ್ಷೆ
ಸದ್ಯದಲ್ಲೇ ನಮ್ಮನ್ನು ಭಾರತಕ್ಕೆ ಕರೆದುಕೊಂಡು ಹೋಗಲು ಸರಕಾರ ವ್ಯವಸ್ಥೆ ಮಾಡುತ್ತಿದೆ ಎಂಬ ಸುದ್ದಿ ಸಿಕ್ಕಿದೆ. ಬಸ್‌ನ ಮೂಲಕ ರೊಮೇನಿಯಾ ಅಥವಾ ಹಂಗೇರಿಯಾಕ್ಕೆ ಕರೆದೊಯ್ದು ಅಲ್ಲಿಂದ ವಿಮಾನದಲ್ಲಿ ಕರೆದೊಯ್ಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಬಸ್‌ಗಳ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸರಿ ಸುಮಾರು 2,000 ಮಂದಿ ಭಾರತೀಯರಿದ್ದಾರೆ. ಹಾಗಾಗಿ ಕಡಿಮೆ ಸಂಖ್ಯೆಯ ಬಸ್‌ಗಳು ಬಂದರೆ ಏನು ಮಾಡುವುದೆಂಬ ಆತಂಕವೂ ಇದೆ. ಬಸ್‌ನಲ್ಲಿ ರೊಮೇನಿಯಾ ತಲುಪಲು ಕನಿಷ್ಠ ಒಂದು ದಿನ ಬೇಕು ಎಂದರು.

Advertisement

50 ಮಂದಿ ಕರ್ನಾಟಕದವರು
ಈ ವಿಶ್ವವಿದ್ಯಾನಿಲಯದಲ್ಲಿ ಸುಮಾರು 50 ಮಂದಿ ಕರ್ನಾಟಕದವರಿದ್ದಾರೆ. ಇತ್ತೀಚೆಗೆ ಕೆಲವು ಮಂದಿ ಭಾರತಕ್ಕೆ ವಾಪಸಾಗಿದ್ದರು. ಆದರೆ ನಮಗೆ ಕೆಲವರಿಗೆ ಪರೀಕ್ಷೆ ಇದ್ದ ಕಾರಣ ನಾವು ಇಲ್ಲಿಯೇ ಉಳಿದುಕೊಂಡಿದ್ದೆವು. ಇಲ್ಲವಾದರೆ ವಾರದ ಹಿಂದೆಯೇ ನಾವು ಭಾರತ ತಲುಪುತ್ತಿದ್ದೆವು ಎಂದು ಪೃಥ್ವೀರಾಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next