Advertisement

ಯುದ್ಧಭೂಮಿಯಿಂದ ಮರಳುವ ತವಕ

11:40 PM Feb 25, 2022 | Team Udayavani |

ಉನ್ನತ ವ್ಯಾಸಂಗದ ಕನಸು ಹೊತ್ತು ದೂರದ ಉಕ್ರೇನ್‌ ದೇಶಕ್ಕೆ ತೆರಳಿದ್ದ ಕರ್ನಾಟಕದ ವಿದ್ಯಾರ್ಥಿಗಳ ಕಂಗಳಲ್ಲಿ ಈಗ ಆತಂಕದ ಕಾರ್ಮೋಡ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮರಳಲು ರಾಜ್ಯದ ನೂರಾರು ವಿದ್ಯಾರ್ಥಿಗಳು ತವಕಿಸುತ್ತಿದ್ದಾರೆ. ಸದ್ಯಕ್ಕೆ ಉಕ್ರೇನ್‌ನ ವಿವಿಧ ನಗರಗಳಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ನೆಲದಲ್ಲಿ, ಆತಂಕದ ನಡುವೆ ಪ್ರತೀ ಕ್ಷಣವೂ ತವರು ಮತ್ತು ಹೆತ್ತವರು ನೆನಪು. ಕೆಲವು ವಿದ್ಯಾರ್ಥಿಗಳು ಹೆತ್ತವರ ಜತೆ ನಿರಂತರ ಸಂಪರ್ಕದಲ್ಲಿದ್ದರೆ ಮತ್ತೆ ಕೆಲವರ ಸಂಪರ್ಕ ಸಾಧ್ಯವಾಗಿಲ್ಲ.

Advertisement

ಧೈರ್ಯ ತುಂಬಿದ ತಂದೆ
ಮುಂಡಗೋಡ: ಪಟ್ಟಣದ ಎಂಬಿಬಿಎಸ್‌ ವಿದ್ಯಾರ್ಥಿನಿ ಸ್ನೇಹಾ ತನ್ನ ಹೆತ್ತವರಿಗೆ ಆತಂಕದಿಂದಲೇ ಪ್ರತಿಕ್ಷಣದ ಘಟನೆಗಳನ್ನು ವಿವರಿಸುತ್ತಿದ್ದಾರೆ. ತಾಲೂಕಿನ ಫಕ್ಕೀರಪ್ಪ ಹೊಸಮನಿ ಪುತ್ರಿ ಸ್ನೇಹ(22) ಉಕ್ರೇನ್‌ನ ಖಾರ್ಕಿವ್‌ ನ್ಯಾಷನಲ್‌ ವಿವಿಯಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್‌ ಓದುತ್ತಿದ್ದಾರೆ. ರೂಂ ಸಮೀಪ ಇರುವ ಬಂಕರ್‌ನಲ್ಲಿ ಆಶ್ರಯ ಪಡೆಯಲು ತಿಳಿಸಿದ್ದಾರೆ. ಆದರೆ ಬಂಕರ್‌ನಲ್ಲಿ ಉಸಿರಾಟದ ತೊಂದರೆಯಿಂದ ಸ್ನೇಹಾ ಆತಂಕಕ್ಕೆ ಒಳಗಾಗಿ ಮತ್ತೆ ತನ್ನ ಗೆಳತಿಯರ ಜತೆ ಫ್ಲ್ಯಾಟ್ ನ ರೂಂನಲ್ಲಿ ತಂಗಿದ್ದಾಳೆ. ಸ್ನೇಹಾ ಇರುವ ಅಕ್ಕಪಕ್ಕದಲ್ಲೇ ಬಾಂಬ್‌ಗಳ ಶಬ್ದ ಕೇಳಿಬರುತ್ತಿದೆ. ಯಾರೂ ಮನೆಯಿಂದ ಹೊರ ಬರದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಸುತ್ತಿದ್ದಾರೆ. ಮೆಟ್ರೋದಲ್ಲಿದ್ದ ಕೆಲವರ ವಸ್ತು ಹಾಗೂ ಹಣದ ಬ್ಯಾಗ್‌ ಕಳ್ಳರು ಕಳ್ಳತನವಾದ ಬಗ್ಗೆ ಯುವತಿ ಹೆತ್ತವರಿಗೆ ಮಾಹಿತಿ ನೀಡಿದ್ದಾಳೆ. ಯುವತಿ ಇರುವ ಸ್ಥಳದ ಹತ್ತಿರ ಕ್ಷಿಪಣಿ ಬೀಳುತ್ತಿವೆ. ಅಲ್ಲದೇ ಸರಕಾರಿ ಕಟ್ಟಡ, ರಸ್ತೆಗಳ ಮೇಲೆ ಕ್ಷಿಪಣಿ ಬೀಳುತ್ತಿವೆ ಎಂದು ಯುವತಿ ಸ್ನೇಹಾ ಫೋಟೋ ಸಮೇತ ತಂದೆಯ ಜತೆ ಹಚ್ಚಿಕೊಂಡಿದ್ದಾಳೆ. ಪ್ರತಿ ಅರ್ಧಗಂಟೆಗೊಮ್ಮೆ ಸ್ನೇಹಾ ಅವರ ಹೆತ್ತವರು ವೀಡಿಯೋ ಕಾಲ್‌ ಮೂಲಕ ತಮ್ಮ ಪುತ್ರಿಯ ಜತೆ ಮಾತನಾಡಿ ಮಾಹಿತಿ ಸಂಗ್ರಹಿಸಿ ಧೈರ್ಯ ತುಂಬುತ್ತಿದ್ದಾರೆ.

ಬಂಕರ್‌, ಮೆಟ್ರೋ ಅಂಡರ್‌ ಪಾಸ್‌ನಲ್ಲಿ ರಕ್ಷಣೆ
ಕೋಲಾರ: ಕೋಲಾರ ನಗರದ ಕೀಲುಕೋಟೆ ಬಡಾವಣೆಯ ಜೀವನ್‌ ಪಿಡಿಒ ನಾಗರಾಜ್‌ರ ಪುತ್ರ. ಎರಡು ವರ್ಷಗಳಿಂದ ಉಕ್ರೇನ್‌ನ ಕೀನ್‌ ಪ್ರದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಅಲ್ಲಿನ ಬಂಕರ್‌ನಲ್ಲಿ ಹಲವು ಭಾರತೀಯ ವಿದ್ಯಾರ್ಥಿ ಗೆಳೆಯರೊಂದಿಗೆ ಇದ್ದು, ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ವರ್ಷಿತಾ ಖಾರ್ಕಿವ್‌ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಇವರು ಖಾರ್ಕಿವ್‌ ಇಂಟರ್‌ನ್ಯಾಷನಲ್‌ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಯುದ್ಧ ಆರಂಭವಾದಾಗಿನಿಂದಲೂ ಅಲ್ಲಿನ ಮೆಟ್ರೋ ಅಂಡರ್‌ ಪಾಸ್‌ನಲ್ಲಿ ತಂಗಿದ್ದಾರೆ. ಕೋಲಾರ ಮೂಲದ ಮತ್ತೋರ್ವ ವಿದ್ಯಾರ್ಥಿನಿ ರಚಿತಾ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಸದ್ಯಕ್ಕೆ ಕೀವ್‌ ಪ್ರದೇಶದಲ್ಲಿರುವ ಬಂಕರ್‌ ಗಳಲ್ಲಿದ್ದಾರೆ. ಕೋಲಾರ, ಕರ್ನಾಟಕ, ಭಾರತದ ವಿದ್ಯಾರ್ಥಿಗಳು ವಿವಿಧ ಬಂಕರ್‌ಗಳಲ್ಲಿರುವ ದೃಶ್ಯಾವಳಿಗಳನ್ನು ಕುಟುಂಬಸ್ಥರಿಗೆ ಕಳುಹಿಸುತ್ತಿದ್ದಾರೆ. ಸಾಧ್ಯವಾದಾಗ ವಿಡಿಯೋ ಕಾಲ್‌ ಮೂಲಕ ಕುಟುಂಬಸ್ಥರ ಜತೆ ಮಾತನಾಡುತ್ತಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಗ್ರಾಮದ ಜಯರಾಮ್‌ ಪುತ್ರ ಮನೋಜ್‌ ಹಾಗೂ ರಾಜೇಶ್‌ ಖನ್ನಾ ಪುತ್ರಿ ಗಾಯತ್ರಿ ಖನ್ನಾ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಮನೋಜ್‌ ಹಾಗೂ ಗಾಯತ್ರಿ ಇಬ್ಬರೂ ಉಕ್ರೇನ್‌ನ ಕಾರ್ಕ್ನೂ ನ್ಯಾಶನಲ್‌ ಮೆಡಿಕಲ್‌ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರೂ ಸದ್ಯ ಸೇಫ್‌ ಆಗಿದ್ದಾರೆ. ಪ್ರತೀ ದಿನ ಸಂಪರ್ಕದಲ್ಲಿದ್ದು, ಪ್ರತೀ ನಾಲ್ಕು ಗಂಟೆಗೊಮ್ಮೆ ಕುಟುಂಬ ಸದಸ್ಯರ ಸಂಪರ್ಕ ಮಾಡುತ್ತಿದ್ದಾರೆ. ಗುರುವಾರ ಸುರಕ್ಷತೆಗಾಗಿ ಬಂಕರ್‌ ನಲ್ಲಿ ಇಟ್ಟಿದ್ದರು. ಆದರೆ ಶುಕ್ರವಾರ ಕಾರ್ಕ್ನೂ ನಗರದ ಮೇಲೆ ದಾಳಿ ಮಾಡಿದ್ದರಿಂದ ಕೀಯಾವ್‌ ನಗರಕ್ಕೆ ಸ್ಥಳಾಂತರ ಮಾಡಿದ್ದರು. ಅನಂತರ ಕೀವ್‌ ನಗರದ ಮೇಲೂ ರಷ್ಯಾ ದಾಳಿ ಮಾಡಿರುವುದರಿಂದ ಮತ್ತೆ ಎಲ್ಲ ವಿದ್ಯಾರ್ಥಿಗಳನ್ನು ಬಂಕರ್‌ನಲ್ಲಿ ಇರಿಸಿದ್ದಾರೆ. ಊಟ, ನೀರಿಗೆ ಸಮಸ್ಯೆ ಇಲ್ಲ. ಆದರೆ ವಿದ್ಯುತ್‌ ಸಮಸ್ಯೆಯಾಗಿದೆ. ನಮ್ಮ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯಾವುದೇ ರೀತಿಯ ತೊಂದರೆಯಿಲ್ಲ ಎಂದು ವಿದ್ಯಾರ್ಥಿಗಳ ಹೆತ್ತವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಬಿಸ್ಕತ್‌, ಹಣ್ಣುಗಳು ಖಾಲಿ
ಹನೂರು: ಚಾ.ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ 24 ವರ್ಷದ ವಿದ್ಯಾರ್ಥಿನಿ ಕಾವ್ಯಾ, ಹನೂರು ತಾಲೂಕು ಒಡೆಯರಪಾಳ್ಯದ ಸಿದ್ದೇಶ್‌, ಹನೂರು ಪಟ್ಟಣದ ಸ್ವಾತಿ ಮತ್ತು ಅಜ್ಜೀಪುರದ ಭೂಮಿಕಾ ತಾಯ್ನಾಡಿಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸಿದ್ದೇಶ್‌ ತಂದೆ ನಾಗಭೂಷಣ್‌ ಉದಯವಾಣಿಗೆ ಪ್ರತಿಕ್ರಿಯಿಸಿದ್ದು, “ವೀಡಿಯೋ ಕರೆ ಮಾಡಿ ಮಗನನ್ನು ವಿಚಾರಿಸುತ್ತಿದ್ದೇವೆ. ಕೀವ್‌ ನಗರದಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ ಮಗ ಅಳಲು ತೋಡಿ ಕೊಂಡಿದ್ದಾನೆ. ಗುರುವಾರದಿಂದ ಅವರ ಬಳಿಯಿದ್ದ ಬಿಸ್ಕತ್‌, ಜ್ಯೂಸ್‌, ಹಣ್ಣುಗಳನ್ನು ಸೇವಿಸುತ್ತಿದ್ದಾರೆ. ಇದೀಗ ಅವುಗಳೂ ಖಾಲಿಯಾಗುವ ಹಂತಕ್ಕೆ ಬಂದಿವೆ. ಮಕ್ಕಳು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕ್ರಮವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

Advertisement

ಮಗನ ರಕ್ಷಣೆಗೆ ಹೆತ್ತವರಿಂದ ಪತ್ರ
ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ವಾಸಿ ವೈಭವ್‌ ಉಕ್ರೇನ್‌ ಕಾರ್ಕಿವ್‌ ನ್ಯಾಶನಲ್‌ ಮೆಡಿಕಲ್‌ ಯುನಿರ್ವಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತಮ್ಮ ಮಗನನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಂತೆ ಯುವಕನ ಹೆತ್ತವರು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ನಗರದ ಡಾ| ಶ್ರೀನಿವಾಸ್‌ ಮತ್ತು ಸುಧಾ ಅವರ ಪುತ್ರ ವೈಭವ್‌ ಉಕ್ರೇನ್‌ ಕಾರ್ಕಿವ್‌ ನ್ಯಾಶನಲ್‌ ಮೆಡಿಕಲ್‌ ಯೂನಿರ್ವಸಿಟಿಯಲ್ಲಿ 2ನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದು, ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿರುವುದರಿಂದ ತಮ್ಮ ಮಗನನ್ನು ದೇಶಕ್ಕೆ ಸುರಕ್ಷಿತವಾಗಿ ಕರೆ ತರುವಂತೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬಾಗಲಕೋಟೆಯ 19 ಜನರಿಗೆ ಸಂಕಷ್ಟ
ಬಾಗಲಕೋಟೆ: ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಜಿಲ್ಲೆಯಿಂದ ತೆರಳಿರುವ 19 ವಿದ್ಯಾರ್ಥಿಗಳ ವಿವರವನ್ನು ಜಿಲ್ಲಾಡಳಿತ ಕಲೆಹಾಕಿದೆ. ಬಾಗಲಕೋಟೆ ವಿದ್ಯಾಗಿರಿಯ ಪ್ರಸಾದ ಬಂಗಾರಶೆಟ್ಟರ, ಕಿರಣ ರವೀಂದ್ರಕುಮಾರ ಶಿಂಗಡಿ, ಅನಿಕೇತ ಶೀಪರಮಟ್ಟಿ, ಶಿವಾಜಿ ಅಶ್ವಿ‌ನಿ ಯಾದವಾಡ, ನಾವಲಗಿಯ ಕಿರಣ ಲಕ್ಷ್ಮಣ ಸವದಿ, ಆಲಗೂರಿನ ಸುಷ್ಮಾ ಭರಮು ನ್ಯಾಮಗೌಡ, ತೊದಲಬಾಗಿಯ ರೋಹಿತ ರಾಜಶೇಖರ ಹಿಪ್ಪರಗಿ, ಸಿಮೀಕೇರಿಯ ಸ್ಫೂರ್ತಿ ಮಹೇಶ ದೊಡಮನಿ, ಹಳಿಂಗಳಿಯ ಪ್ರಜ್ವಲ ಹಿಪ್ಪರಗಿ, ವಿದ್ಯಾಗಿರಿಯ ಮನೋಜಕುಮಾರ ಬಾಲಕೃಷ್ಣ ಚಿತ್ರಗಾರ, ಮುಧೋಳದ ಚೇತನ ಶ್ರೀಶೈಲ ಮಾಗಿ, ವಿದ್ಯಾಗಿರಿಯ ಅಪೂರ್ವ ಸಿದ್ದಲಿಂಗೇಶ್ವರ ಕದಾಂಪುರ, ಗುರವ್ವ ಅಶ್ವತ ಗಂಗಪ್ಪ, ಬೀಳಗಿಯ ಸಹನಾ ಮಲ್ಲನಗೌಡ ಪಾಟೀಲ, ಬಾಗಲಕೋಟೆಯ ಒವೈಸಿ ಎಸ್‌. ಗುಲ್ಬರ್ಗ, ಬನಹಟ್ಟಿಯ ಮದಭಾವಿ ಪ್ರಜ್ವಲಕುಮಾರ ಎಂ. ತಿಮ್ಮಾಪುರ, ನವೀನ ಬಸವರಾಜ ಪಾಟೀಲ, ಪ್ರಜ್ವಲ ಗಟ್ಟದ, ಆಲಗೂರಿನ ವೃಷಬ್‌ ಬಾಳಪ್ಪಾ ಕಡಕೋಳ ಉಕ್ರೇನ್‌ನಲ್ಲಿದ್ದಾರೆ.

ಲಗೇಜ್‌ಗಳೊಂದಿಗೆ ಸಿದ್ಧವಾಗಿರಿ ಎಂದಿದ್ದಾರೆ
ಹರಪನಹಳ್ಳಿ: ಉಕ್ರೇನ್‌ನಲ್ಲಿ ಹರಪನಹಳ್ಳಿ ಪಟ್ಟಣದ ವಿಕಾಸ ಪಾಟೀಲ್‌, ಸಂಜಯ ಹಾಗೂ ಲಾವಣ್ಯಾ ಸೇರಿ ತಾಲೂಕಿನ ಕೆಸರಹಳ್ಳಿ ಗ್ರಾಮದ ಜಿ.ಎನ್‌. ಗಗನ್‌ ದೀಪ ಸಿಲುಕಿದ್ದಾರೆ. ಸಂಜಯ ಹಾಗೂ ವಿಕಾಸ “ಉದಯವಾಣಿ’ ಜತೆ ಮಾತನಾಡಿ, ನಾವು ಪ್ರಸ್ತುತ ಸುರಕ್ಷಿತವಾಗಿದ್ದೇವೆ. ನಾವಿರುವ ರಾಜ್ಯದ ಮೇಲೆ ದಾಳಿ ನಡೆದಿಲ್ಲ. ಯಾವಾಗ ಬೇಕಾದರೂ ದಾಳಿ ನಡೆಯಬಹುದು. ಒಟ್ಟಿನಲ್ಲಿ ಆತಂಕ ಸ್ಥಿತಿ ಎದುರಿಸುತ್ತಿದ್ದೇವೆ. ಲಗೇಜ್‌ಗಳೊಂದಿಗೆ ಸಿದ್ಧವಾಗಿರಿ, ಪೋಲೆಂಡ್‌ ಗಡಿಭಾಗಕ್ಕೆ ವಿಮಾನ ಕಳಿಸಿ ತಮ್ಮನ್ನು ಕರೆಸಿಕೊಳ್ಳುತ್ತೇವೆ ಎಂದು ಭಾರತ ಸರಕಾರದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿದ್ಧರಾಗಿದ್ದೇವೆ ಎಂದರು.

ಬಂಕರ್‌ನಲ್ಲಿ ಅಥಣಿಯ ಐವರು ಸುರಕ್ಷಿತ
ಅಥಣಿ: ಉಕ್ರೇನ್‌ನಲ್ಲಿ ಅಥಣಿ ತಾಲೂಕಿನ ಐವರು ವಿದ್ಯಾರ್ಥಿಗಳು ಸಿಲುಕಿದ್ದು, ಪಾಲಕರಲ್ಲಿ ಆತಂಕವನ್ನುಂಟು ಮಾಡಿದೆ. ಎಂಬಿಬಿಎಸ್‌ ಸೇರಿ ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ತೆರಳಿರುವ ಅಥಣಿ ತಾಲೂಕಿನ ರಕ್ಷಿತ್‌ ರವಿಕುಮಾರ ಗಣಿ, ಆನಂದ ಸಿದ್ದಪ್ಪ ನಜರೆ, ಅಫರಿನ್‌ ಮದರಸು ನಿಡೋಣಿ, ನಾಗೇಶ ಪೂಜಾರಿ, ರಾಕೇಶ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿದ್ಯಾರ್ಥಿಗಳು ಸೇರಿ ಸುಮಾರು 200 ಜನ ವಿದ್ಯಾರ್ಥಿಗಳನ್ನು ಬಾಂಬ್‌ ಬಂಕರ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಪಾಲಕರು ನಿರಂತರ ವಿದ್ಯಾರ್ಥಿಗಳ ಜತೆ ಸಂಪರ್ಕದಲ್ಲಿದ್ದು, ಅಲ್ಲಿಯ ಸನ್ನಿವೇಶ ಮತ್ತು ಆತಂಕಗಳ ಕುರಿತು ವಿಚಾರಿಸುತ್ತಿದ್ದಾರೆ.

ಹಾಸನದ ಐವರು ವಿದ್ಯಾರ್ಥಿಗಳ ಪರದಾಟ
ಹಾಸನ: ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ಹೋಗಿರುವ ಜಿಲ್ಲೆಯ ವಿದ್ಯಾರ್ಥಿಗಳು ರಷ್ಯಾ- ಉಕ್ರೇನ್‌ ಯುದ್ಧ ಆರಂಭಕ್ಕೂ ಮೊದಲು ವಾಪಸ್ಸಾಗುವ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಕಳೆದೆರಡು ದಿನಗಳಿಂದ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದ ನಂತರ ಜಿಲ್ಲೆಯ ಯು.ಸಿ.ಕೀರ್ತನಾ, ಅರ್ಪಿತಾ, ಧನುಜಾ, ಸಂಜನಾ, ಹಿಮನ್‌ರಾಜ್‌ ಎಂಬ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೀರ್ತನಾ ತಂದೆ ಚಿನ್ನಪ್ಪಗೌಡ ಮಾತನಾಡಿ, ಪ್ರತಿದಿನವೂ ನಮ್ಮ ಮಗಳೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದೇವೆ. ವಿಮಾನಗಳ ಹಾರಾಟ ಆರಂಭವಾದ ತಕ್ಷಣ ವಾಪಸ್‌ ಕಳುಹಿಸುವುದಾಗಿ ಶಿಕ್ಷಣ ಸಂಸ್ಥೆಯವರು ಹೇಳಿದ್ದಾರಂತೆ. ಹಾಗಾಗಿ ಲಗೇಜ್‌ನೊಂದಿಗೆ ವಾಪಸ್ಸಾಗಲು ಸಜ್ಜಾಗಿದ್ದೇವೆ ಎಂದು ತಿಳಿಸಿದ್ದಾರೆ. ಆದರೂ ನಮಗೆ ಆತಂಕವಿದೆ ಎಂದು ಹೇಳಿದರು. ಉಕ್ರೇನ್‌ನಲ್ಲಿರುವ ಹಾಸನದ ವಿಜಯನಗರದ ವೇಣುಗೋಪಾಲ್‌ ಪುತ್ರಿ ಸಂಜನಾ ಅವರು ತಮ್ಮ ಕುಟುಂಬದವರೊಂದಿಗೆ ಮಾತನಾಡಿ, ಕೀವ್‌ ನಗರದಿಂದ ಸುಮಿ ನಗರಕ್ಕೆ ನಮ್ಮನ್ನು ಸ್ಥಳಾಂತರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ನಿಂದ ಗಾನಶ್ರೀ ಮಾತು
ಬೆಂಗಳೂರು: ಭಾರತೀಯ ರಾಯಭಾರಿ ಕಚೇರಿಯು ಯುದ್ಧಪೀಡಿತ ಪ್ರದೇಶದಲ್ಲಿರುವ ವಿದ್ಯಾರ್ಥಿಗಳನ್ನು ಮೊದಲ ಆದ್ಯತೆಯಾಗಿ ರಕ್ಷಣೆ ಮಾಡುತ್ತಿದೆ. ನಾವು ಪರಿಸ್ಥಿತಿ ಗಂಭೀರವಲ್ಲದ ಸುಮಿ ಪ್ರದೇಶಗಳಲ್ಲಿದ್ದೇವೆ. ಭಾರತದಲ್ಲಿರುವ ವಿದ್ಯಾರ್ಥಿಗಳ ಹೆತ್ತವರು ಆತಂಕಗೊಳ್ಳುವುದು ಬೇಡ..

– ಇದು ಈಶಾನ್ಯ ಉಕ್ರೇನ್‌ನ ಸುಮಿ ನಗರದಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಉಡುಪಿ ಮೂಲದ ಗಾನಶ್ರೀ ಮಾತು. ಅಲ್ಲಿನ ಪರಿಸ್ಥಿತಿ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಉಕ್ರೇನ್‌ ದೇಶದ ಜನರ ರಕ್ಷಣೆ ಮಾಡುವುದಕ್ಕಾಗಿ ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸರು ಸೈರನ್‌ ಮಾಡುವ ಮೂಲಕ ನಿವಾಸಿಗಳಿಗೆ ಎಚ್ಚರಿಕೆ ನೀಡುತ್ತಾರೆ. ಯುದ್ದದ ಸನ್ನಿವೇಶ ಇರುವುದರಿಂದ ಯಾರೊಬ್ಬರು ಮನೆಯಿಂದ ಹೊರಗಡೆ ಕಾಲಿಡುತ್ತಿಲ್ಲ. ಆದರೆ, ತುಂಬಾ ತುರ್ತು ಪರಿಸ್ಥಿತಿ ಸಮಯದಲ್ಲಿ ಪೊಲೀಸ್‌ ವಾಹನದ ಸೈರನ್‌ ಬಾರಿಸುತ್ತದೆ. ಅಂತಹ ವೇಳೆಯಲ್ಲಿ ನೆಲಮಹಡಿ ಅಥವಾ ಶೆಲ್ಟರ್‌ ಹೌಸ್‌ಗಳಲ್ಲಿ ಅವಿತುಕೊಳ್ಳಬೇಕಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿನಿ
ಹಟ್ಟಿಚಿನ್ನದಗಣಿ: ವ್ಯಾಸಂಗಕ್ಕೆ ತೆರಳಿದ್ದ ಎಂಬಿಬಿಎಸ್‌ ವಿದ್ಯಾರ್ಥಿನಿ ಹಟ್ಟಿ ಪಟ್ಟಣದ ರುಬಿಯಾ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಹಟ್ಟಿ ಪಟ್ಟಣದ ಹುಸೇನ್‌ಬಾಷಾ ಅವರ ಪುತಗರಿ ರುಬಿಯಾ ಉಕ್ರೇನ್‌ನ ಕಾಕ್ರಿ ವಿವಿಯಲ್ಲಿ ಎಂಬಿಬಿಎಸ್‌ ವ್ಯಾಸಂಗಕ್ಕೆಂದು ಕಳೆದ ಡಿಸೆಂಬರ್‌ನಲ್ಲಿ ತೆರಳಿದ್ದರು. ಮೊದಲನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದು, ರಷ್ಯಾ-ಉಕ್ರೇನ್‌ ನಡುವೆ ಉಂಟಾದ ಸಂಘರ್ಷದಿಂದಾಗಿ ಭಾರತಕ್ಕೆ ಮರಳಲು ಟಿಕೆಟ್‌ ಕಾದಿರಿಸಿದ್ದರು. ಯುದ್ಧದಿಂದಾಗಿ ಉಕ್ರೇನ್‌ ಸರಕಾರ ವಿಮಾನ ಯಾನವನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಕಾರಣ ಭಾರತಕ್ಕೆ ಮರಳಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇತ್ತ ಅವರ ಹೆತ್ತವರು ಆತಂಕಪಡುತ್ತಿದ್ದಾರೆ.

ಏನಾಗುತ್ತದೆ ಎಂದೇ ಗೊತ್ತಾಗುತ್ತಿಲ್ಲ!
ಹಾವೇರಿ: ಯುದ್ಧ ಆರಂಭಗೊಂಡ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ಜಿಲ್ಲೆಯ 9 ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಅಲ್ಲದೇ ಅವರ ಪಾಲಕರಲ್ಲೂ ಮತ್ತಷ್ಟು ಆತಂಕ ಮನೆ ಮಾಡಿದೆ. ಶುಕ್ರವಾರ ಬೆಳಗ್ಗೆಯಿಂದ ಖಾರ್ಕಿವ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಡ ದಾಳಿ ನಡೆಯುತ್ತಿದೆ. ಆಗಾಗ ಬಾಂಬ್‌ ಸೊ #àಟದ ಶಬ್ಧಗಳು ಕೇಳಿಸುತ್ತಿವೆ. ಇದರಿಂದ ಎಲ್ಲರೂ ಗಾಬರಿಗೊಂಡಿದ್ದಾರೆ. ನಾವೆಲ್ಲ ಬಹಳ ಒತ್ತಡದಲ್ಲಿ¨ªೇವೆ. ಯಾವಾಗ ಏನಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ನಮ್ಮ ಪರಿಚಯದ ಕನ್ನಡಿಗರನ್ನೆಲ್ಲ ಬಂಕರ್‌, ಬೇಸ್‌ಮೆಂಟ್‌ನಲ್ಲಿ ಕೂರಿಸಿ¨ªೇವೆ. ಎಲ್ಲರನ್ನೂ ಕರೆದುಕೊಂಡು ಓಡಾಡಲು ಸಾಧ್ಯವಾಗುವುದಿಲ್ಲ. ನಮ್ಮೊಂದಿಗೆ ಹೊರಗೆ ಇದ್ದರೆ ಸಮಸ್ಯೆ ಹೆಚ್ಚು. ಆದ್ದರಿಂದ, ನಾನು ಮತ್ತು ಇಬ್ಬರು ಮಿತ್ರರು ಸೇರಿ ಧೂತಾವಾಸ ಕಚೇರಿ ಸೇರಿದಂತೆ ತಾಯ್ನಾಡಿಗೆ ಬರಲು ಸತತವಾಗಿ ಓಡಾಡುತ್ತಿ¨ªೇವೆ. ದಯವಿಟ್ಟು ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ನಮ್ಮ ಪರವಾಗಿ ಸರಕಾರಕ್ಕೆ ಒತ್ತಡ ತನ್ನಿ ಎಂದು ಎಂಬಿಬಿಎಸ್‌ ಓದುತ್ತಿರುವ ರಾಣಿಬೆನ್ನೂರಿನ ಸುಮನ್‌ ವೈಶ್ಯರ ಅಲ್ಲಿ ಕನ್ನಡಿಗರು ಎದುರಿಸುತ್ತಿರುವ ಆತಂಕದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಬಂಕರ್‌ನಲ್ಲಿ ಬಾಗಲಕೋಟೆ, ತುಮಕೂರು ವಿದ್ಯಾರ್ಥಿಗಳು
ರಬಕವಿ-ಬನಹಟ್ಟಿ: ಉಕ್ರೇನ್‌ನಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ನಾವಲಗಿ ಗ್ರಾಮದ ಕಿರಣ ಸವದಿ ಸದ್ಯ ಅಲ್ಲಿಯ ಹಾಸ್ಟೆಲ್‌ ಕೆಳಗಡೆ ಇರುವ ಬಂಕರ್‌ನಲ್ಲಿ ವಾಸವಾಗಿದ್ದಾರೆ. ದೂರವಾಣಿ ಮೂಲಕ “ಉದಯವಾಣಿ’ ಜತೆ ಮಾತನಾಡಿದ ಅವರು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾನಿರುವ ಹಾಸ್ಟೆಲ್‌ನಿಂದ ಐದಾರು ಕಿಮೀ ದೂರದಲ್ಲಿ ಬಾಂಬ್‌ ಸ್ಫೋಟಗೊಂಡಿದ್ದು, ದೊಡ್ಡ ಸದ್ದು ಕೇಳಿ ಬಂದಿದೆ. ಇಲ್ಲಿರುವ ಅಂದಾಜು 200 ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಮಧ್ಯಾಹ್ನ ಹಾಸ್ಟೆಲ್‌ಗೆ ತೆರಳಿ ಐದು ಹತ್ತು ನಿಮಿಷಗಳಲ್ಲಿ ಊಟ ಮಾಡಿ ಮತ್ತೆ ಬಂಕರ್‌ನಲ್ಲಿ ಇರಬೇಕಾಗಿದೆ. ಆಹಾರ ಮತ್ತು ನೀರು ಕಡಿಮೆಯಾಗುತ್ತಿದೆ. ಇಲ್ಲಿ ಕೆಲವರಿಗೆ ಮಾತ್ರ ಮಲಗಲು ಇನ್ನು ಕೆಲವರಿಗೆ ಕುಳಿತುಕೊಳ್ಳಲು ಅವಕಾಶವಿದೆ ಎಂದರು. ಕಿರಣ ಸವದಿ ಜತೆ ತುಮಕೂರಿನ ನಂದಿನಿ, ಉದಿತ್‌ ಮತ್ತು ಯಶಸ್ವಿನಿ ಕೂಡ ಇದ್ದಾರೆ.

ತವರಿಗೆ ಮರಳಿದ ಶಿವಮೊಗ್ಗ ಯುವತಿ
ಶಿವಮೊಗ್ಗ: ಶಿವಮೊಗ್ಗದ ನಾಲ್ವರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದು ಎಲ್ಲರೂ ಹೆತ್ತವರ ಜತೆ ಸಂಪರ್ಕದಲ್ಲಿದ್ದು ಯಾವುದೇ ಆತಂಕವಿಲ್ಲ. ಒಬ್ಬ ವಿದ್ಯಾರ್ಥಿನಿ ದಿಲ್ಲಿ ತಲುಪಿದ್ದು ಉಳಿದವರು ಸುರಕ್ಷಿತವಾಗಿರುವ ಮಾಹಿತಿ ದೊರೆತಿದೆ. ಶಿವಮೊಗ್ಗ ತಾಲೂಕು ಸಂತೆಕಡೂರು ಗ್ರಾಮದ ತೇಜಸ್‌ ಯುದ್ಧ ನಡೆಯುತ್ತಿರುವ ಸ್ಥಳದಿಂದ ಸುಮಾರು 600 ಕಿ.ಮೀ. ದೂರದಲ್ಲಿದ್ದಾರೆ. ಪ್ರತೀ ದಿನ ಅಪ್ಪ, ಅಮ್ಮನಿಗೆ ಕರೆ ಮಾಡುತ್ತಿದ್ದು ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ. ವಿದ್ಯಾನಗರದ ಜೈಶೀಲಾ ವಿಮಾನ ಸ್ಥಗಿತಗೊಂಡ ಪರಿಣಾಮ ಖಜಕಿಸ್ಥಾನದಿಂದ ದಿಲ್ಲಿ ತಲುಪಿದ್ದಾರೆ. ಎಲ್ಲ ಆತಂಕ ನಿವಾರಣೆಯಾಗಿದೆ ಹೆತ್ತವರು ತಿಳಿಸಿದ್ದಾರೆ. ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದ ಗಾನಶ್ರೀ ಸುಮ್ಮಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಹೆತ್ತವರಿಗೆ ತಿಳಿಸಿದ್ದಾರೆ. ಸಾಗರ ಅಣಲೆಕೊಪ್ಪದ ಮನಿಷಾ ಲೋಬೋ ಫೆ.28ರಂದು ವಾಪಾಸ್‌ ಬರಬೇಕಿತ್ತು. ಯುದ್ಧ ಸನ್ನಿವೇಶ ಹಿನ್ನೆಲೆ ಬಂಕರ್‌ನಲ್ಲಿ ಆಶ್ರಯ ಪಡೆದಿದ್ದು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಹೆತ್ತವರಿಗೆ ದೊರೆತಿದೆ.

ಕೊಡಗಿನ ವಿದ್ಯಾರ್ಥಿಗಳು ಅತಂತ್ರ
ಮಡಿಕೇರಿ: ಯುದ್ಧ ಗ್ರಸ್ತವಾಗಿರುವ ಪುಟ್ಟ ರಾಷ್ಟ್ರ ಉಕ್ರೇನ್‌ನಲ್ಲಿ, ಶಿಕ್ಷಣಾರ್ಥ ತೆರಳಿರುವ ಕೊಡಗು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಕುಶಾಲನಗರ ಸಮೀಪದ  ನಿವಾಸಿ, ಕೊಡಗು ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ಅವರ ಪುತ್ರ ಚಂದನ್‌ ಗೌಡ, ಮುಳ್ಳುಸೋಗೆ ಗ್ರಾಮದ ಲಿಖೀತ್‌, ಕೂಡಿಗೆಯ ಅಕ್ಷತಾ ಹಾಗೂ ವಿರಾಜಪೇಟೆ ಬಳಿಯ ಆರ್ಜಿ ಗ್ರಾಮದ ಶಾರುಖ್‌ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು.

ಸ್ವದೇಶಕ್ಕೆ ಕರೆತರಲು ಚಂದನ್‌ ಮನವಿ: ಯುದ್ಧದ ಸಂಕಷ್ಟದಲ್ಲಿರುವ ಉಕ್ರೇನ್‌ನಿಂದ ಭಾರತಕ್ಕೆ ನಮ್ಮನ್ನು ಕರೆಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ. ಇದೊಂದೆ ನನ್ನ ವಿನಂತಿ..

ಉಕ್ರೇನ್‌ನ ಖಾರ್ಕಿವ್‌ ಪಟ್ಟಣದಿಂದ ವೀಡಿಯೋ ಕಾಲ್‌ ಮೂಲಕ ಮಾತನಾಡಿರುವ ಕೂಡೂÉರಿನ ಚಂದನ್‌ ಗೌಡ, ಉಕ್ರೇನ್‌ನಲ್ಲಿ ಸುಮಾರು 15,000 ದಷ್ಟು ಭಾರತೀ ವಿದ್ಯಾರ್ಥಿಗಳಿದ್ದಾರೆ. ನಾನಿರುವ ಖಾರ್ಕಿವ್‌ನಲ್ಲಿ 150 ರಿಂದ 200 ಮಂದಿ ಕರ್ನಾಟಕದ ವಿದ್ಯಾರ್ಥಿಗಳಿದ್ದೇವೆ. ಯುದ್ಧದ ಹಿನ್ನೆಲೆಯಲ್ಲಿ ನಮ್ಮನ್ನು ಬಾಂಬ್‌ ಷೆಡ್ಡರ್ಗಳಲ್ಲಿ ಇರುವಂತೆ ಸರಕಾರ ತಿಳಿಸಿದೆ. ಆದರೆ ಅಗತ್ಯ ಆಹಾರ ವ್ಯವಸ್ಥೆ ಇಲ್ಲ. ನಾವಿರುವ ಮನೆಯಲ್ಲಿ ಎರಡು ಮೂರು ದಿನಗಳಿಗೆ ಆಗುವಷ್ಟು ಮಾತ್ರ ಆಹಾರವಿದೆಯೆಂದು ತಿಳಿಸಿದ್ದಾರೆ.

ಖಾರ್ಕಿವ್‌ ಪಟ್ಟಣ ಗಡಿ ಭಾಗದಿಂದ ಕೇವಲ 15 ರಿಂದ 20 ಕಿ.ಮೀ. ನಷ್ಟು ದೂರದಲ್ಲಿದ್ದು, ಯಾವ ಕ್ಷಣದಲ್ಲಿ ಗುಂಡಿನ ದಾಳಿ, ಬಾಂಬ್‌ ದಾಳಿ ನಡೆಯು ತ್ತದೋ ಗೊತ್ತಾಗುವುದಿಲ್ಲ. ನಮ್ಮನ್ನು ಇಲ್ಲಿಂದ ಹೊರ ಕರೆದೊಯ್ಯಬೇಕೆಂದರೂ ನಾವಿರುವ ಸ್ಥಳದಿಂದ ಉಕ್ರೇನ್‌ನ ಪಶ್ಚಿಮ ಭಾಗಕ್ಕೆ 1,500 ಕಿ.ಮೀ. ತೆರಳಿ ಬಳಿಕ ಪೋಲೆಂಡ್‌ ಮೂಲಕ ಭಾರತಕ್ಕೆ ಕರೆದೊಯ್ಯಬೇಕು. ಆದರೆ ಪ್ರಸ್ತುತ ಯಾವುದೇ ವಾಹನ ವ್ಯವಸ್ಥೆ ಇಲ್ಲಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ಸರಕಾರದ ಮೇಲೆ ಪೂರ್ಣ ಭರವಸೆ: ಉಡುಪಿಯ ನಿಯಮ್‌ ರಾಘವೇಂದ್ರ
ಉಡುಪಿ: ಉಕ್ರೇನ್‌ನ ವಿನಿಸ್ಟಿಯಾ ನ್ಯಾಶನಲ್‌ ಪಿರೊಒ ಮೆಡಿಕಲ್‌ ವಿವಿಯಲ್ಲಿ ಮೊದಲ ವರ್ಷದ ಎಂಬಿಬಿಎಸ್‌ ಪದವಿಯನ್ನು ಓದುತ್ತಿರುವ ನಿಯಮ ರಾಘವೇಂದ್ರ ಕಳೆದ ಡಿಸೆಂಬರ್‌ನಲ್ಲಿ ಉಕ್ರೇನ್‌ಗೆ ಹೋಗಿದ್ದರು.
ದಿಲ್ಲಿಯ ಕರ್ನಾಟಕ ಭವನದ ವ್ಯವಸ್ಥಾಪಕ ರಾಗಿರುವ ಪರ್ಕಳದ ಬಿ.ವಿ.ರಾಘವೇಂದ್ರ ಅವರ ಪುತ್ರ ನಿಯಮ್‌ ಮಣಿಪಾಲದಲ್ಲಿ ಪಿಯುಸಿ ಪೂರೈಸಿ ವೈದ್ಯಕೀಯ ಶಿಕ್ಷಣಕ್ಕೆ 2021ರ ಡಿಸೆಂಬರ್‌ನಲ್ಲಿ ಉಕ್ರೇನ್‌ಗೆ ಹೋಗಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಬಿ.ವಿ.ರಾಘವೇಂದ್ರ ಅವರು, ಮಗನ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮಗನ ಮಾಹಿತಿಯನ್ನು ಜಿಲ್ಲಾಡಳಿತ, ಕೇಂದ್ರ ಸರಕಾರಕ್ಕೂ ಸಲ್ಲಿಸಿದ್ದೇವೆ. ಅಲ್ಲಿಂದ ಭಾರತಕ್ಕೆ ಕರೆತರುವ ಪ್ರಯತ್ನವೂ ಕೇಂದ್ರ ಸರಕಾರ ಮಾಡುತ್ತಿದೆ ಎಂದರು.

ಗ್ಲೆನ್‌ವಿಲ್‌ ಮೆಕ್ಲಿನ್‌ ಫೆರ್ನಾಂಡಿಸ್‌: ಉಡುಪಿಯ ಕಲ್ಯಾಣಪುರ ನಿವಾಸಿ ಮೆಲ್ವಿನ್‌ ಫೆರ್ನಾಂಡಿಸ್‌ ಅವರ ಪುತ್ರ ಗ್ಲೆನ್‌ವಿಲ್‌ ಮೆಕ್ಲಿನ್‌ ಅಲ್ಲಿನ ಟೌನ್‌ ನ್ಯಾಶನಲ್‌ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್‌ ಓದುತ್ತಿದ್ದು. 10 ದಿನದ ಹಿಂದಷ್ಟೆ ಊರಿಂದ ಉಕ್ರೇನ್‌ಗೆ ಹೋಗಿದ್ದರು. ಮಗ ಸುರಕ್ಷಿತ ವಾಗಿದ್ದಾನೆ. ಅಲ್ಲಿ ಅವರಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ನಾವೇ ಅವನಿಗೆ ಫೋನ್‌ ಮಾಡಿ ಧೈರ್ಯ ತುಂಬುತ್ತಿದ್ದೇವೆ. ಸರಕಾರ ಆದಷ್ಟು ಬೇಗ ಅಲ್ಲಿರುವ ಭಾರತೀಯರನ್ನು ಇಲ್ಲಿಗೆ ಕರೆತರುವ ಕೆಲಸ ಮಾಡಬೇಕು ಎಂದು ಮೆಲ್ವಿನ್‌ ಫೆರ್ನಾಂಡಿಸ್‌ ಮನವಿ ಮಾಡಿದರು.
ಉಡುಪಿ ಜಿಲ್ಲೆಯ ಇನ್ನಿಬ್ಬರು ವಿದ್ಯಾರ್ಥಿಗಳಾದ ಎನಿಫ್ರೆಡ್‌ ರಿಡ್ಲಿ ಡಿ’ಸೋಜಾ ಮತ್ತು ಮೃನಾಳ್‌ ಕ್ರಮವಾಗಿ ಖಾರ್ಕಿವ್‌ ನ್ಯಾಶನಲ್‌ ಮೆಡಿಕಲ್‌ ವಿವಿ ಮತ್ತು ಐವಾನೊ-ಫ್ರಾನ್‌ ಕಿವಿಸ್ಕ್ ನ್ಯಾಶನಲ್‌ ಮೆಡಿಕಲ್‌ ವಿವಿಯಲ್ಲಿ ಮೆಡಿಕಲ್‌ ವ್ಯಾಸಂಗ ನಿರತರಾಗಿದ್ದಾರೆ.

ಕಾಸರಗೋಡು:
ಹೆತ್ತವರಲ್ಲಿ ಆತಂಕ
ಕಾಸರಗೋಡು: ಇರಿಯಣ್ಣಿಯ ಡಾ| ಗಣಪತಿ ಅಯ್ಯರ್‌ ಹಾಗೂ ಆರತಿ ದಂಪತಿಯ ಪುತ್ರ ಅನಿಕೇತನ್‌ ಅಯ್ಯರ್‌, ಆದೂರು ಎಸ್‌ಐ ರತ್ನಾಕರನ್‌ ಅವರ ಪುತ್ರಿ ಕೃಷ್ಣವೇಣಿ, ಬೋವಿಕ್ಕಾನದ ಬಿಆರ್‌ಎಚ್‌ಎಸ್‌ಎಸ್‌ನ ಅಧ್ಯಾಪಕಿ ಖದೀಜ ಅವರ ಪುತ್ರ ಅಬಿ ಕೆ. ಮುಹಮ್ಮದ್‌ ಸಹಿತ 6 ಮಂದಿ ವಿದ್ಯಾರ್ಥಿಗಳು ಹಾಗೂ ವಿವಿಧ ವಿಷಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ 50ಕ್ಕಿಂತ ಅಧಿಕ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿದ್ದಾರೆ.

ಯುದ್ಧ ಭೂಮಿಯಲ್ಲಿ ಆತಂಕದಿಂದ ದಿನ ಕಳೆಯುತ್ತಿರುವ ದಯನೀಯ ಸ್ಥಿತಿಯಿಂದ ಅವರ ಹೆತ್ತವರು, ಸಂಬಂಧಿಕರು ಆತಂಕಿತರಾಗಿದ್ದಾರೆ. ಅವರ ಫೋನ್‌ ಕರೆಗಾಗಿ ಕಾದು ನಿಂತಿರುವ ರಕ್ಷಕರು, ಸಂಬಂಧಿಕರು ಅವರಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ದೂರವಾಣಿ, ಮೊಬೈಲ್‌ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ಇದೆಯೆಂಬ ಮಾಹಿತಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಉಕ್ರೇನ್‌ನ ಪ್ರಮುಖ ವಿಶ್ವವಿದ್ಯಾನಿಲಯವಾದ ಒಡೇಸಾ ನ್ಯಾಶನಲ್‌ ಯೂನಿವರ್ಸಿಟಿಯಲ್ಲಿ ಅಂತಿಮ ವರ್ಷ ಎಂಬಿಬಿಎಸ್‌ ವಿದ್ಯಾರ್ಥಿಗಳ ಪೈಕಿ ಆರು ಮಂದಿ ಕಾಸರಗೋಡು ನಿವಾಸಿಗಳಾಗಿದ್ದಾರೆ. ಅವರೆಲ್ಲ ಸುರಕ್ಷಿತರಾಗಿದ್ದಾರೆಂದು ಭಾರತೀಯ ರಾಯಭಾರಿ ಕಚೇರಿಯಿಂದ ವರದಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next