Advertisement

ಪಶ್ಚಿಮಕ್ಕೆ ದಾಳಿ ವಿಸ್ತರಣೆ; ಉಕ್ರೇನ್‌- ಪೋಲೆಂಡ್‌ ಗಡಿ ಭಾಗದಲ್ಲಿ ರಷ್ಯಾ ಬಾಂಬ್‌ ದಾಳಿ

10:04 PM Mar 13, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ ಮತ್ತು ರಷ್ಯಾ ನಡುವಿನ ಕದನವೆಂಬ ಕಾಡ್ಗಿಚ್ಚು ಸದ್ಯಕ್ಕೆ ಶಮನವಾಗುವ ಲಕ್ಷಣಗಳಿಲ್ಲ. ಅದು ಮತ್ತಷ್ಟು ವಿಸ್ತರಿಸಿದ್ದು, ಭಾನುವಾರ ನಡೆದ ಬೆಳವಣಿಗೆಯಲ್ಲಿ ಪೋಲೆಂಡ್‌ಗೆ ಹೊಂದಿಕೊಂಡಿಕೊಂಡಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಲುವ್ಯೂ ನಗರದ ಸಮೀಪದಲ್ಲಿ ರಷ್ಯಾ ಸೇನೆ ಘಾತಕ ಕ್ಷಿಪಣಿ, ಬಾಂಬ್‌ ದಾಳಿ ನಡೆಸಿದ್ದರಿಂದ 35 ಮಂದಿ ಅಸುನೀಗಿದ್ದಾರೆ ಮತ್ತು 134ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Advertisement

ಉಕ್ರೇನ್‌ನ ಪಶ್ಚಿಮ ಭಾಗದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿ ಇರಿಸಿಕೊಂಡು ಈ ಆಕ್ರಮಣ ನಡೆಸಲಾಗಿದೆ. ಪೋಲೆಂಡ್‌ ಗಡಿಯಿಂದ 32 ಕಿಮೀ ದೂರದ ಯಾವೋರಿವ್‌ ಎಂಬಲ್ಲಿರುವ ಸೇನಾ ನೆಲೆಗೆ 32 ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಈ ದಾಳಿ ನಡೆಸಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿರುವ ಸೇನೆ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಕ್ಷಿಪಣಿ ದಾಳಿಯಿಂದ ಛಿದ್ರಗೊಂಡಿರುವ ಕಟ್ಟಡವನ್ನು ಸ್ಥಳೀಯ ಅಧಿಕಾರಿಗಳು ಮತ್ತು ಸೈನಿಕರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಮೂಲಕ ಭಾನುವಾರ, ಕಾಳಗ 18ನೇ ದಿನ ಪ್ರವೇಶಿಸಿದೆ.

ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಅಮೆರಿಕದ “ದ ನ್ಯೂಯಾರ್ಕ್‌ ಟೈಮ್ಸ್‌’ನ ಮಾಜಿ ಪತ್ರಕರ್ತ ಮತ್ತು ಹವ್ಯಾಸಿ ಚಿತ್ರ ನಿರ್ಮಾಪಕ ಬ್ರೆಂಟ್‌ ರೆನೋಡ್‌ (51) ಅವರು ರಷ್ಯಾ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಇರ್ಪಿನ್‌ನಲ್ಲಿ ಇತರ ಪತ್ರಕರ್ತರ ಜತೆಗೆ ಪ್ರಯಾಣಿಸುತ್ತಿದ್ದ ವೇಳೆ, ವ್ಲಾಡಿಮಿರ್‌ ಪುಟಿನ್‌ ಸೇನೆ ನಡೆಸಿದ ಕ್ಷಿಪಣಿ ಅವರಿದ್ದ ಟ್ರಕ್‌ಗೆ ಅಪ್ಪಳಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ರೆನೋಡ್‌ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಜತೆಗೆ ಇದ್ದ ಮತ್ತೂಬ್ಬ ಪತ್ರಕರ್ತ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖೆರ್ಸಾನ್‌ನಲ್ಲಿ ಪ್ರತಿಭಟನೆ:
ರಷ್ಯಾ ಸೇನೆಯ ನಿರಂತರ ದಾಳಿ ಕಂಡಿಸಿ ಖೆರ್ಸಾನ್‌ನಲ್ಲಿ ಸ್ಥಳೀಯರು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ರಷ್ಯಾ ಸರ್ಕಾರ ಡಾನೆಸ್ಕ್ ಮತ್ತು ಲಗಾನ್ಸ್‌$Rನಲ್ಲಿ ಜನಮತ ಸಂಗ್ರಹ ನಡೆಸಲಿದೆ ಎಂಬ ಬೆಳವಣಿಗೆಯ ನಡುವೆಯೇ ಜನರು ಬೀದಿಗೆ ಇಳಿದಿದ್ದಾರೆ.

ರಾಯಭಾರ ಕಚೇರಿ ಪೋಲೆಂಡ್‌ಗೆ
ಉಕ್ರೇನ್‌ನಲ್ಲಿ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜಧಾನಿ ಕೀವ್‌ನಲ್ಲಿ ಇರುವ ಭಾರತದ ರಾಯಭಾರ ಕಚೇರಿಯನ್ನು ಪೋಲೆಂಡ್‌ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತದೆ. ಈ ಬಗ್ಗೆ ನವದೆಹಲಿಯಲ್ಲಿ ಭಾನುವಾರ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಉಕ್ರೇನ್‌ನಲ್ಲಿ ಕೈಮೀರಿ ಹೋಗುತ್ತಿರುವ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದಾಗಿ ತಾತ್ಕಾಲಿಕ ನೆಲೆಯಲ್ಲಿ ಕೀವ್‌ನಲ್ಲಿ ಇರುವ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕೆಲ ದಿನಗಳಿಂದ ರಾಯಭಾರ ಕಚೇರಿ ಲುವ್ಯೂ ನಗರದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಪೋಲೆಂಡ್‌ನಿಂದ 70 ಕಿಮೀ ದೂರದಲ್ಲಿದೆ ಲುವ್ಯೂ ನಗರ.

Advertisement

ಅಧ್ಯಕ್ಷ ಪುಟಿನ್‌ಗೆ ಕ್ಯಾನ್ಸರ್‌?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಕಾನ್ಸರ್‌ ಇದೆಯೇ? ಈ ಬಗ್ಗೆ ರಷ್ಯಾದ ಸಂಸತ್‌, ಕ್ರೆಮ್ಲಿನ್‌ನ ಮೂಲಗಳು ಹಾಗೂ ಅಮೆರಿಕ, ಯು.ಕೆ, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್‌ನ‌ ಗುಪ್ತಚರ ಸಂಸ್ಥೆಗಳೂ ಕೂಡ ಈ ಅಂಶವನ್ನು ಖಚಿತಪಡಿಸಿವೆ ಎಂದು ಹೇಳಲಾಗಿದೆ. ಕ್ಯಾನ್ಸರ್‌ ನಿಯಂತ್ರಣಕ್ಕಾಗಿ ಸ್ಟೀರಾಯ್ಡ ಔಷಧ ತೆಗೆದುಕೊಳ್ಳುತ್ತಿರುವುದರಿಂದ ಮರೆಗುಳಿ ಕಾಯಿಲೆಯೂ ಶುರುವಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಪತ್ರಿಕೆಯೊಂದು ವರದಿ ಮಾಡಿದೆ. ಐದು ವರ್ಷಗಳ ಅವಧಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ ಅವರು ನಿರ್ಧಾರ ಕೈಗೊಳ್ಳುವ ವರ್ತನೆ ಹಾಗೂ ಕ್ರಮದಲ್ಲಿ ಭಾರೀ ಬದಲಾವಣೆಯಾಗಿದೆ. ಇತ್ತೀಚೆಗೆ ಪ್ರಕಟಗೊಂಡಿರುವ ಅವರ ಫೋಟೋಗಳಲ್ಲಿ ಕೂಡ ಕುಗ್ಗಿದ ರೀತಿಯಲ್ಲಿ ಪುಟಿನ್‌ ಇರುವಂತೆ ಕಂಡುಬಂದಿದೆ ಎಂದೂ ಅಭಿಪ್ರಾಯಪಡಲಾಗುತ್ತಿದೆ.

2,187 ಮರಿಯುಪೋಲ್‌ನಲ್ಲೇ ಸಾವು
ಬರೋಬ್ಬರಿ 2,187 ಮಂದಿ ಮರಿಯುಪೋಲ್‌ ನಗರವೊಂದರಲ್ಲಿಯೇ ರಷ್ಯಾ ದಾಳಿಯಿಂದ ಅಸುನೀಗಿದ್ದಾರೆ. ಈ ಸಾವಿನ ಸಂಖ್ಯೆ ಫೆ.24ರ ಬಳಿಕ ನಿರಂತರವಾಗಿ ಪುಟಿನ್‌ ಸೇನೆ ದಾಳಿ ನಡೆಸಿದ್ದರಿಂದ ಉಂಟಾಗಿದೆ. ಸತತ ದಾಳಿಯಿಂದಾಗಿ ಈ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾಗಿದೆ. ಕೆಲ ದಿನಗಳ ಹಿಂದಷ್ಟೇ ರಷ್ಯಾ ಸೇನೆ ಹೆರಿಗೆ ಆಸ್ಪತ್ರೆ ಮೇಲೆ ದಾಳಿ ನಡೆಸಿ, ಪೂರ್ಣ ಪ್ರಮಾಣದಲ್ಲಿ ಕಟ್ಟಡ ಧ್ವಂಸಗೊಂಡಿತ್ತು. 24 ಗಂಟೆಗಳ ಅವಧಿಯಲ್ಲಿ ಮರಿಯುಪೋಲ್‌ ಮೇಲೆ 22 ಬಾಂಬ್‌ ದಾಳಿಗಳು ನಡೆದಿವೆ. ಇದೇ ವೇಳೆ, ರಷ್ಯಾ ಮತ್ತು ಉಕ್ರೇನ್‌ ನಡುವೆ ನಾಲ್ಕನೇ ಹಂತದ ಮಾತುಕತೆಗಳು ಮಾ.14 ಮತ್ತು 15 ರಂದು ನಡೆಯಲಿವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next