ನವದೆಹಲಿ: ಭಾರತ ಮತ್ತು ರಷ್ಯಾದ ನಡುವೆ ತುಂಬಾ ನಿಕಟವಾದ ಸ್ನೇಹ ಸಂಬಂಧವಿದೆ ಮತ್ತು ರಷ್ಯಾ ಎಂದಿಗೂ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಜರ್ಮನ್ ದಿನಪತ್ರಿಕೆ ಹ್ಯಾಂಡಲ್ಸ್ ಬ್ಲಾಟ್ ಜತೆ ಮಾತನಾಡುತ್ತ ತಿಳಿಸಿದ್ದರು.
ಇದನ್ನೂ:
Bangalore: ಗರ್ಭಿಣಿಗೆ ಮಹಿಳೆಯರು ಒದ್ದು ಹೊಟ್ಟೆಯಲ್ಲೇ ಮಗು ಸಾವು
ಉಕ್ರೈನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸಲು ಪಾಶ್ಚಾತ್ಯ ದೇಶಗಳು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ದೀರ್ಘಕಾಲದ ಸ್ನೇಹ ಸಂಬಂಧವನ್ನು ಜೈಶಂಕರ್ ಸಮರ್ಥಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ರಷ್ಯಾ ಮತ್ತು ಉಕ್ರೈನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಭಾರತ ನೆರವು ನೀಡಬೇಕು ಎಂಬ ಚರ್ಚೆಯ ಹಿನ್ನೆಲೆಯ ಮಧ್ಯೆ ಸಚಿವ ಜೈಶಂಕರ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕದ ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ, ಯುದ್ಧದಿಂದಾಗಿ ಉಕ್ರೈನ್ ನಲ್ಲಿ 70,000ಕ್ಕೂ ಅಧಿಕ ನಾಗರಿಕರು ಕೊನೆಯುಸಿರೆಳೆದಿರುವುದಾಗಿ ತಿಳಿಸಿದೆ.
ಈ ಹಿಂದಿನ ಅನುಭವದ ಆಧಾರದ ಮೇಲೆ ದೇಶಗಳ ನಡುವಿನ ಸಂಬಂಧವನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ನಾವು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವನ್ನು ನೋಡಿದರೂ ಕೂಡಾ ರಷ್ಯಾ ಎಂದಿಗೂ ಭಾರತದ ಆಶಯವನ್ನು ಘಾಸಿಗೊಳಿಸಿಲ್ಲ. ಹೀಗಾಗಿ ಉಭಯ ದೇಶಗಳ ನಡುವೆ ಉತ್ತಮವಾದ ಸ್ನೇಹ ಸಂಬಂಧವಿದೆ ಎಂದು ಸಚಿವ ಜೈಶಂಕರ್ ಅಭಿಪ್ರಾಯವ್ಯಕ್ತಪಡಿಸಿದ್ದರು.