Advertisement
ಯುದ್ಧ ಆರಂಭವಾಗಿ ಗುರುವಾರ 8 ದಿನ ಪೂರ್ಣಗೊಂಡಿದ್ದು, ಖೇರ್ಸಾನ್ ನಗರವು ರಷ್ಯಾದ ಸುಪರ್ದಿಗೆ ಬಂದಿದೆ. ಈ ಮೂಲಕ ಉಕ್ರೇನ್‌ನ ಮೊದಲ ಪ್ರಮುಖ ನಗರವು ರಷ್ಯಾ ವಶವಾದಂತಾಗಿದೆ. ಸುಮಾರು 3 ಲಕ್ಷ ಜನಸಂಖ್ಯೆಯಿರುವ ಖೆರ್ಸಾನ್‌ನಲ್ಲಿ ಪುತಿನ್ ಪಡೆಗಳ ಅಟ್ಟಹಾಸ ಆರಂಭವಾಗಿದೆ. ಕೌನ್ಸಿಲ್ ಸಭೆ ನಡೆಯುತ್ತಿದ್ದಾಗ ರಷ್ಯಾದ ಸಶಸ್ತ್ರ ಸೈನಿಕರು ಸಭೆಗೇ ನುಗ್ಗಿ, ಹೊಸ ನಿಯಮಗಳನ್ನು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖೆರ್ಸಾನ್ ಮೇಯರ್ ಇಗೋರ್ ಕೋಲಿಖೇವ್ ಅವರು, “ರಷ್ಯಾ ಸೇನೆಯ ಆಜ್ಞೆಯನ್ನು ಪಾಲಿಸಿ’ ಎಂದು ನಾಗರಿಕರಿಗೆ ಸೂಚಿಸಿದ್ದಾರೆ. ಜತೆಗೆ, ದಯವಿಟ್ಟು ಸಾರ್ವಜನಿಕರ ಮೇಲೆ ಗುಂಡು ಹಾರಿಸಬೇಡಿ ಎಂದು ರಷ್ಯಾಗೆ ಮನವಿ ಮಾಡಿದ್ದಾರೆ.
Related Articles
Advertisement
ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ರೇಟಿಂಗ್ ನೀಡುವ ಸಂಸ್ಥೆಗಳಾದ ಮೂಡೀಸ್ ಮತ್ತು ಫಿಚ್, ರಷ್ಯಾದ ಆರ್ಥಿಕ ರೇಟಿಂಗ್ ಅನ್ನು ಕೆಳದರ್ಜೆಗೆ (ಜಂಕ್ ದರ್ಜೆ) ಇಳಿಸಿವೆ. ಅಮೆರಿಕ ಸೇರಿದಂತೆ ಹಲವಾರು ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನ ಹಾಗೂ ಅದರ ಪರಿಣಾಮವಾಗಿ ರಷ್ಯಾದ ಆಮದು ವೆಚ್ಚ ಹೆಚ್ಚಾಗುವುದನ್ನು ಅಂದಾಜಿಸಿ ಈ ರೇಟಿಂಗ್ ನೀಡಲಾಗಿದೆ. ಮೂಡೀಸ್ ರಷ್ಯಾದ ದೀರ್ಘಾವಧಿಯ, ಅಭದ್ರತೆಯ ಸಾಲದ ರೇಟಿಂಗ್ ಅನ್ನು “ಬಿಎಎ 3′ ದರ್ಜೆಯಿಂದ (ಸಾಮಾನ್ಯ ದರ್ಜೆಯಿಂದ) “ಬಿ3′ ದರ್ಜೆಗೆ (ಯಾವ ದೇಶದಿಂದಲೂ ಸಾಲ ಸಿಗದಂಥ ಪರಿಸ್ಥಿತಿ) ಇಳಿಸಿದೆ. ಫಿಚ್ ಕೂಡ ಇದೇ ರೀತಿ ವಿಶ್ಲೇಷಿಸಿದೆ.
ಟ್ರಯಂಫ್ ಕೂಡ ಯುದ್ಧಕ್ಕೆ ಪ್ರವೇಶ? :
ಉಕ್ರೇನ್ ಮೇಲೆ ಯುದ್ಧ ಆರಂಭಿಸುವ ಮುನ್ನ ಸೇನಾ ಕವಾಯತು ನಡೆಸಿದ್ದ ರಷ್ಯಾ, ಈಗ ಪುನಃ ಮತ್ತೂಂದು ಸುತ್ತಿನ ಸೇನಾ ಕವಾಯತು ಆರಂಭಿಸಿದೆ. ರಷ್ಯಾದ ನೊವೊಸಿಬಿರ್ಸ್Rನಲ್ಲಿ ಸೇನಾ ಕವಾಯತು ಆರಂಭಗೊಂಡಿದ್ದು, ಅತ್ಯಾಧುನಿಕ ಎಸ್- 400 ಕ್ಷಿಪಣಿ ನಿಗ್ರಹ ವ್ಯವಸ್ಥೆಗಳು ಈ ಕವಾಯತಿನಲ್ಲಿ ಪಾಲ್ಗೊಂಡಿವೆ. ರಷ್ಯಾದ ಸರ್ಬಿಯಾ ಪ್ರಾಂತ್ಯದಲ್ಲಿರುವ ನೊವೊಸಿಬಿರ್ಸ್R, ಉಕ್ರೇನ್‌ನಿಂದ ಅಂದಾಜು 4,000 ಕಿ.ಮೀ. ದೂರವಿದೆ. ಈ ಪ್ರಾಂತ್ಯದಲ್ಲಿ ನಡೆಸಲಾಗುತ್ತಿರುವ ಸೇನಾ ಕವಾಯತಿನ ಮೂಲಕ ರಷ್ಯಾ ಸರಕಾರ, ಉಕ್ರೇನ್‌ನ ಬೆಂಬಲಕ್ಕೆ ನಿಂತಿರುವ ಅಮೆರಿಕ, ನ್ಯಾಟೋ ಪಡೆಗಳು ಹಾಗೂ ಇತರ ಐರೋಪ್ಯ ರಾಷ್ಟ್ರಗಳ ಮುಂದೆ ತನ್ನ ಶಕ್ತಿ ಪ್ರದರ್ಶನ ಮಾಡಲಾರಂಭಿಸಿದೆ ಎಂದು ವಿಶ್ಲೇಷಿಸಲಾಗಿದೆ.
8 ದಿನ; 8 ನಗರಗಳು :
ಕೀವ್: ಬುಧವಾರ ತಡರಾತ್ರಿ ನಾಲ್ಕು ದೊಡ್ಡ ರಾಕೆಟ್‌ಗಳು ಉಕ್ರೇನ್ ರಾಜಧಾನಿ ಕೀವ್‌ಗೆ ಅಪ್ಪಳಿಸಿದೆ. ಈ ಪೈಕಿ ಒಂದು ರಾಕೆಟ್ ನಾಗರಿಕರ ಸ್ಥಳಾಂತರಕ್ಕೆ ಬಳಸಲಾಗುತ್ತಿದ್ದ ರೈಲು ನಿಲ್ದಾಣದ ಮೇಲೆ ಬಂದು ಬಿದ್ದರೆ, ಉಳಿದವು ಟಿವಿ ಮತ್ತು ರೇಡಿಯೋ ಸ್ಟೇಶನ್‌ಗಳನ್ನು ಧ್ವಂಸಗೊಳಿಸಿವೆ.
ಖಾರ್ಕಿವ್: ಉಕ್ರೇನ್‌ನ 2ನೇ ಅತೀ ದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ನಿರಂತರ ಶೆಲ್ ದಾಳಿ ನಡೆದಿವೆ. ವಸತಿ ಕಟ್ಟಡಗಳು ನೆಲಕ್ಕುರುಳಿದ್ದು, ನಗರವಿಡೀ ಅವಶೇಷಗಳಿಂದ ತುಂಬಿಹೋಗಿದೆ.
ಇಝಿಯುಂ: ಖಾರ್ಕಿವ್‌ನಿಂದ ದಕ್ಷಿಣಕ್ಕೆ 70 ಮೈಲು ದೂರದಲ್ಲಿರುವ ಇಝಿಯಂ ನಗರದ ಮೇಲೂ ರಷ್ಯಾ ದಾಳಿ ನಡೆಸಿದೆ. ಬುಧವಾರ ರಾತ್ರಿಯಿಡೀ ಬಾಂಬ್‌ಗಳ ಸದ್ದು ಮೊಳಗಿದೆ.
ಚೆರ್ನಿಹಿವ್: ಯುದ್ಧ ಆರಂಭವಾದಾಗಿನಿಂದಲೂ ಈ ನಗರದಲ್ಲಿ ರಷ್ಯಾ ಮತ್ತು ಉಕ್ರೇನ್ ಪಡೆಗಳ ನಡುವೆ ಕಾಳಗ ನಡೆಯುತ್ತಲೇ ಇದೆ. ಸದ್ಯಕ್ಕೆ ಇದು ಉಕ್ರೇನ್ ಪಡೆಗಳ ಕೈಯ್ಯಲ್ಲೇ ಇದೆ. ಗುರುವಾರ ಇಲ್ಲಿನ ತೈಲ ಡಿಪೋ ಶೆಲ್ ದಾಳಿಯಿಂದ ಹೊತ್ತಿ ಉರಿದಿದೆ.
ಮರಿಯುಪೋಲ್: ಒಂದು ನಿಮಿಷವೂ ಬಿಡುವಿಲ್ಲದಂತೆ ನಿರಂತರವಾಗಿ ಶೆಲ್, ರಾಕೆಟ್ ದಾಳಿ ನಡೆಸಲಾಗುತ್ತಿದೆ. ರಸ್ತೆಯಲ್ಲಿ ಗಾಯಗೊಂಡು ಬಿದ್ದವರಿಗೆ ಚಿಕಿತ್ಸೆ ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಮೇಯರ್ ಹೇಳಿದ್ದಾರೆ.
ಖೆರ್ಸಾನ್: ಸತತ 3-4 ದಿನಗಳಿಂದ ಇಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ಭಾರೀ ಕಾಳಗ ನಡೆಯುತ್ತಿತ್ತು. ಗುರುವಾರ ಈ ನಗರವು ರಷ್ಯಾ ಸೇನೆಯ ವಶವಾಗಿದೆ. ಸ್ಥಳೀಯ ಕೌನ್ಸಿಲ್ ಸಭೆಗೂ ರಷ್ಯಾದ ಸಶಸ್ತ್ರ ಪಡೆಗಳ ಸೈನಿಕರು ಹಾಜರಾಗಿದ್ದಾರೆ.
ಝಪೋರಿಝಿಯಾ: ಯುರೋಪ್‌ನಲ್ಲಿ ಅತ್ಯಂತ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಇಲ್ಲಿದೆ. ಈಗಾಗಲೇ ಈ ನಗರವನ್ನು ರಷ್ಯಾ ಪಡೆಗಳು ಸುತ್ತುವರಿದಿವೆ. ಸ್ಥಾವರದ ಹೊರಗೆ ನಾಗರಿಕರೆಲ್ಲ ಸೇರಿ ರಸ್ತೆ ಬ್ಲಾಕ್ ಮಾಡಿದ್ದಾರೆ. ಇವರ ಮೇಲೆ ರಷ್ಯಾ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಒಡೆಸ್ಸಾ: ಕಪ್ಪು ಸಮುದ್ರದ ಬಂದರು ನಗರಿ, ಉಕ್ರೇನ್‌ನ ಪ್ರಮುಖ ನೌಕಾ ನೆಲೆಯಿರುವ ನಗರ. ಕ್ರಿಮಿಯಾ ಮೂಲಕ 12ಕ್ಕೂ ಅಧಿಕ ರಷ್ಯಾ ಯುದ್ಧನೌಕೆಗಳು ಒಡೆಸ್ಸಾದತ್ತ ಬರುತ್ತಿವೆ. ನಾಗರಿಕರು ಹಳೆಯ ರೈಲ್ವೆ ಸ್ಲಿàಪರ್‌ಗಳ ಮೂಲಕ ತಾತ್ಕಾಲಿಕ ಗುರಾಣಿಗಳನ್ನು ನಿರ್ಮಿಸಿಕೊಂಡಿದ್ದು, ಬೀಚ್‌ನುದ್ದಕ್ಕೂ ನೆಲಬಾಂಬ್ ಹುದುಗಿಸಿಟ್ಟಿದ್ದಾರೆ.
ಸಮರಾಂಗಣದಲ್ಲಿ :
- ಕೀವ್ ಮತ್ತು ಖಾರ್ಕಿವ್‌ನಲ್ಲಿ ಬುಧವಾರ ರಾತ್ರಿ ಪೂರ್ತಿ ಮುಂದುವರಿದ ಶೆಲ್-ರಾಕೆಟ್ ದಾಳಿ
- ಇಂಧನ ಮತ್ತು ಆಹಾರದ ಕೊರತೆಯಿಂದಾಗಿ ಅರ್ಧಕ್ಕೇ ನಿಂತ ಉತ್ತರ ಕೀವ್‌ನತ್ತ ಬರುತ್ತಿದ್ದ ರಷ್ಯಾದ ಸೇನಾವಾಹನಗಳು
- ಉಕ್ರೇನ್‌ನಲ್ಲಿ ನಮ್ಮ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ಬಹಿರಂಗಪಡಿಸಿದ ರಷ್ಯಾ
- ರಷ್ಯಾದ ಯುದ್ಧಾಪರಾಧಗಳಿಗೆ ಸಂಬಂಧಿಸಿದ ವಿಚಾರಣೆ ಶೀಘ್ರವೇ ಆರಂಭ ಎಂದ ಅಂತಾರಾಷ್ಟ್ರೀಯ ಕೋರ್ಟ್
- ಬಾಲ್ಟಿಕ್ ಸಮುದ್ರದಲ್ಲಿ ರಷ್ಯಾದ 4 ಯುದ್ಧ ವಿಮಾನಗಳು ತನ್ನ ವಾಯುಗಡಿಯನ್ನು ಪ್ರವೇಶಿಸಿವೆ ಎಂದ ಸ್ವೀಡನ್
- ಬನ್ನಿ, ನಿಮ್ಮ ಮಕ್ಕಳ ಮೃತದೇಹಗಳನ್ನು ಕೊಂಡೊಯ್ಯಿರಿ ಎಂದು ರಷ್ಯಾ ಸೈನಿಕರ ಅಮ್ಮಂದಿರಿಗೆ ಉಕ್ರೇನ್ ಆಹ್ವಾನ
- ದಕ್ಷಿಣ ಉಕ್ರೇನ್‌ನ ಖೆರ್ಸಾನ್ ನಗರವನ್ನು ಸಂಪೂರ್ಣ ವಶಕ್ಕೆ ಪಡೆದ ಪುತಿನ್ ಪಡೆ
- ಇರ್ಪಿನ್ ನಗರದಲ್ಲಿ ರಷ್ಯಾದ ಸುಖೋಯ್ ಎಸ್‌ಯು-30 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ
- ರಷ್ಯಾ ಸೈನಿಕರು ನಡೆಸಿದ ಶೆಲ್ ದಾಳಿಯಿಂದಾಗಿ ಹೊತ್ತಿ ಉರಿದ ಚೆರ್ನಿಹಿವ್ ನಗರದ ತೈಲ ಡಿಪೋ
- ಉಕ್ರೇನ್‌ನಲ್ಲಿ ರಷ್ಯಾದ ಮೇಜರ್ ಜನರಲ್ ಆ್ಯಂಡ್ರ್ಯೂ ಸುಖೋವೆಟ್‌ಸ್ಕಿ ಅವರ ಹತ್ಯೆ.