ಕೋಲ್ಕತಾ: ಕೆಕೆಆರ್-ಪಂಜಾಬ್ ನಡುವಿನ ಪಂದ್ಯದ ಟರ್ನಿಂಗ್ ಪಾಯಿಂಟ್ ಯಾವುದು? ಅನುಮಾನವೇ ಇಲ್ಲ, ಮೊಹಮ್ಮದ್ ಶಮಿ ಪಾಲಾದ 17ನೇ ಓವರಿನ ಅಂತಿಮ ಎಸೆತದಲ್ಲಿ ಆ್ಯಂಡ್ರೆ ರಸೆಲ್ ಬೌಲ್ಡ್ ಆಗಿಯೂ “ನೋಬಾಲ್’ನಿಂದ ಜೀವದಾನ ಪಡೆದದ್ದು. ಆಗ ರಸೆಲ್ ಗಳಿಕೆ ಕೇವಲ 3 ರನ್ ಆಗಿತ್ತು. ಈ ಜೀವದಾನದ ಭರಪೂರ ಲಾಭವೆತ್ತಿದ ರಸೆಲ್ 17 ಎಸೆತಗಳಿಂದ ಅಜೇಯ 48 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಪಂಜಾಬ್ ಇದನ್ನು ಹಿಂದಿಕ್ಕುವಲ್ಲಿ ವಿಫಲವಾಯಿತು.
ಅಂದಹಾಗೆ, ಶಮಿ ಅವರ ಆ ಎಸೆತ ನೋಬಾಲ್ ಆಗಲು ಕಾರಣ ಪಂಜಾಬ್ ತಂಡದ ಫೀಲ್ಡಿಂಗ್ ನಿಯಮ ಉಲ್ಲಂಘನೆ. ಆಗ 33 ಯಾರ್ಡ್ ಸರ್ಕಲ್ ಒಳಗೆ ಕೇವಲ 3 ಮಂದಿ ಕ್ಷೇತ್ರರಕ್ಷಕರಿದ್ದರು. ನಿಯಮ ಪ್ರಕಾರ 4 ಮಂದಿ ಫೀಲ್ಡರ್ ಇರಬೇಕಿತ್ತು. ಸರ್ಕಲ್ ಹೊರಗುಳಿದ ಆ ಕ್ಷೇತ್ರರಕ್ಷಕನಿಗೆ ರಸೆಲ್ ಥ್ಯಾಂಕ್ಸ್ ಹೇಳಿದ್ದಾರೆ.
“ಸರ್ಕಲ್‌ನ ಹೊರಗೆ ನಿಂತ ಆ ಕ್ರಿಕೆಟಿಗನಿಗೆ ಧನ್ಯವಾದ. ಆ ಹೊಸ ಆಟಗಾರನ ಹೆಸರು ನನಗೆ ತಿಳಿದಿಲ್ಲ. ಥ್ಯಾಂಕ್ ಯೂ ಗೈ. ಬೌಲ್ಡ್ ಆದಾಗ ಬಹಳ ಬೇಜಾರಾಯಿತು. ಆದರೆ ಆಗ ಬೌಂಡರಿ ಲೈನ್‌ನ ಆಚೆ ಕುಳಿತಿದ್ದ ನಮ್ಮ ತಂಡದ ಆಟಗಾರರೆಲ್ಲ ನೋ ಬಾಲ್ ಸಿಗ್ನಲ್ ಮಾಡುತ್ತಿದ್ದರು. ಇದು ನೋಬಾಲ್ ಆಗಿರಲಪ್ಪ ಎಂದು ನಾನು ದೇವರಲ್ಲಿ ಪ್ರಾರ್ಥಿಸಿದೆ…’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ರಸೆಲ್ ಹೇಳಿದರು.
ತಮ್ಮದೇ ನಾಡಿನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ವಿಕೆಟ್ ಉರುಳಿಸಿದ್ದನ್ನೂ ರಸೆಲ್ ಖುಷಿಯಿಂದ ಹೇಳಿಕೊಂಡರು. “ಗೇಲ್ ನನಗೆ ಸಹೋದರನಿದ್ದಂತೆ, ಬಿಗ್ಗರ್ ಲೆಜೆಂಡ್. ಅವರ ವಿಕೆಟನ್ನು ಆರಂಭದಲ್ಲೇ ಉರುಳಿಸಿದ್ದು ನನ್ನ ಪಾಲಿಗೆ ನಿಜಕ್ಕೂ ಅಮೋಘ ಸಾಧನೆ’ ಎಂದರು.