Advertisement

ರಸೆಲ್‌ ಪವರ್‌; ಈಡನ್‌ನಲ್ಲಿ ಮೆರೆದ ಕೆಕೆಆರ್‌

09:48 AM Mar 26, 2019 | Team Udayavani |

ಕೋಲ್ಕತಾ: ವೆಸ್ಟ್‌ ಇಂಡೀಸಿನ ದೈತ್ಯ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಸೋಲಿನಂಚಿನಲ್ಲಿದ್ದ ಕೋಲ್ಕತಾ ನೈಟ್‌ರೈಡರ್ ತಂಡಕ್ಕೆ ಗೆಲುವಿನ ಕಾಣಿಕೆ ಕೊಡಿಸಿದ್ದಾರೆ. ಸನ್‌ರೈಸರ್ ಹೈದರಾಬಾದ್‌ ವಿರುದ್ಧ ರವಿವಾರ “ಈಡನ್‌ ಗಾರ್ಡನ್‌’ ನಲ್ಲಿ ನಡೆದ ಐಪಿಎಲ್‌ ಹಣಾಹಣಿಯಲ್ಲಿ ಕೆಕೆಆರ್‌ 6 ವಿಕೆಟ್‌ಗಳ ಜಯ ಸಾಧಿಸಿ “ಕನಸಿನ ಓಟ’ ಆರಂಭಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾ ಬಾದ್‌ ವಾರ್ನರ್‌ ಸಾಹಸದಿಂದ 3 ವಿಕೆಟಿಗೆ 181 ರನ್‌ ಪೇರಿಸಿತು. ಜವಾಬಿತ್ತ ಕೆಕೆಆರ್‌ 19.4 ಓವರ್‌ಗಳಲ್ಲಿ 4 ವಿಕೆಟಿಗೆ 183 ರನ್‌ ಬಾರಿಸಿ ಅಮೋಘ ಗೆಲುವು ಸಾಧಿಸಿತು.

15.3 ಓವರ್‌ಗಳಲ್ಲಿ 4ಕ್ಕೆ 118 ರನ್‌ ಗಳಿಸಿದ್ದಾಗ ಕೆಕೆಆರ್‌ ಗೆಲುವಿನ ಬಗ್ಗೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಆಗ ನಿತೀಶ್‌ ರಾಣ ಅವರ ಪ್ರತಾಪ ಮುಗಿದಿತ್ತು. ಆರಂಭಿಕ ರಾಣ 47 ಎಸೆತಗಳಿಂದ 68 ರನ್‌ ಬಾರಿಸಿ ತಂಡದ ಹೋರಾಟವನ್ನು ಜಾರಿಯಲ್ಲಿರಿಸಿದ್ದರು (8 ಬೌಂಡರಿ, 3 ಸಿಕ್ಸರ್‌).

ಆದರೆ ಶುಭಮನ್‌ ಗಿಲ್‌ ಅವರನ್ನು ಕೂಡಿಕೊಂಡ ಆ್ಯಂಡ್ರೆ ರಸೆಲ್‌ ಒಮ್ಮೆಲೇ ವಿಧ್ವಂಸಕಾರಿಯಾಗಿ ಗೋಚರಿಸಿ ದರು; ಹೈದರಾಬಾದ್‌ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸತೊಡಗಿದರು. ಈಡನ್‌ ಗಾರ್ಡನ್ಸ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯೇ ಆಯಿತು. ಈ ಜೋಡಿ ಮುರಿಯದ 5ನೇ ವಿಕೆಟಿಗೆ ಕೇವಲ 25 ಎಸೆತಗಳಿಂದ 65 ರನ್‌ ಒಟ್ಟುಗೂಡಿಸಿ ತಂಡಕ್ಕೆ ಅಮೋಘ ಗೆಲುವು ತಂದಿತ್ತಿತು.

2 ಓವರ್‌, 34 ರನ್‌…
ಒಂದು ಹಂತದಲ್ಲಿ ಕೆಕೆಆರ್‌ ಕೊನೆಯ 2 ಓವರ್‌ಗಳಲ್ಲಿ 34 ರನ್‌ ತೆಗೆಯುವ ಕಠಿನ ಗುರಿ ಪಡೆದಿತ್ತು. 19ನೇ ಓವರ್‌ ಎಸೆಯಲು ಬಂದ ಭುವನೇಶ್ವರ್‌ ಕುಮಾರ್‌ ಮೇಲೆರಗಿ ಹೋದ ರಸೆಲ್‌ 21 ರನ್‌ ಸೂರೆಗೈದರು. ಇದರಲ್ಲಿ 2 ಸೂಪರ್‌ ಸಿಕ್ಸರ್‌, 2 ಬೌಂಡರಿ ಸೇರಿತ್ತು. ಶಕಿಬ್‌ ಎಸೆದ ಕೊನೆಯ ಓವರಿನಲ್ಲಿ ಶುಭಮನ್‌ ಗಿಲ್‌ 2 ಸಿಕ್ಸರ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು.

Advertisement

ಕೆಕೆಆರ್‌ ತಂಡದ ಮತ್ತೂಬ್ಬ ಪ್ರಮುಖ ಸ್ಕೋರರ್‌ ರಾಬಿನ್‌ ಉತ್ತಪ್ಪ (27 ಎಸೆತ, 35 ರನ್‌, 3 ಬೌಂಡರಿ, 1 ಸಿಕ್ಸರ್‌). ನಾಯಕ ದಿನೇಶ್‌ ಕಾರ್ತಿಕ್‌ ಕೇವಲ 2 ರನ್‌ ಮಾಡಿ ನಿರಾಸೆ ಮೂಡಿಸಿದರು.

ವಾರ್ನರ್‌ ಬ್ಯಾಟಿಂಗ್‌ ಪವರ್‌
ಹೈದರಾಬಾದ್‌ನ ಸವಾಲಿನ ಮೊತ್ತಕ್ಕೆ ಕಾರಣರಾದವರು ನಿಷೇಧದ ಲೇಬಲ್‌ ಅಂಟಿಸಿಕೊಂಡ ಕಾಂಗರೂ ನಾಡಿನ ಆರಂಭಕಾರ ಡೇವಿಡ್‌ ವಾರ್ನರ್‌. ಅವರು ಐಪಿಎಲ್‌ನಲ್ಲಿ 37ನೇ ಅರ್ಧ ಶತಕ ಬಾರಿಸಿ ಭರ್ಜರಿ ಪುನರಾಗಮನ ಸಾರಿದರು. ಜಾನಿ ಬೇರ್‌ಸ್ಟೊ ಜತೆ ಇನ್ನಿಂಗ್ಸ್‌ ಆರಂಭಿಸಿದ ವಾರ್ನರ್‌ 16ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಕೆಕೆಆರ್‌ ಬೌಲರ್‌ಗಳನ್ನು “ಕೇರ್‌’ ಮಾಡದೆ ದಂಡಿಸತೊಡಗಿದರು. ನಿಷೇಧ ವಿಧಿಸಿದ್ದು ಯಾರಿಗೋ ಎಂಬ ರೀತಿಯಲ್ಲಿತ್ತು ವಾರ್ನರ್‌ ಆಟ. ಕಳೆದ ವರ್ಷ ನಿಷೇಧದಿಂದಾಗಿ ಅವರು ಐಪಿಎಲ್‌ ತಪ್ಪಿಸಿಕೊಂಡಿದ್ದರು.

12.5 ಓವರ್‌ ನಿಭಾಯಿಸಿದ ವಾರ್ನರ್‌-ಬೇರ್‌ಸ್ಟೊ ಮೊದಲ ವಿಕೆಟಿಗೆ 118 ರನ್‌ ಪೇರಿಸಿದರು. ಪ್ರಸಿದ್ಧ ಕೃಷ್ಣ-ಪೀಯೂಷ್‌ ಚಾವ್ಲಾ ಜೋಡಿಯ ಓಪನಿಂಗ್‌ ಸ್ಪೆಲ್‌ ಯಾವುದೇ ಪರಿಣಾಮ ಬೀರಲಿಲ್ಲ. ಬೇರ್‌ಸ್ಟೊ ಗಳಿಕೆ 35 ಎಸೆತಗಳಿಂದ 39 ರನ್‌. ಸಿಡಿಸಿದ್ದು 3 ಬೌಂಡರಿ, ಒಂದು ಸಿಕ್ಸರ್‌.

ಡೇವಿಡ್‌ ವಾರ್ನರ್‌ 85 ರನ್‌ ಬಾರಿಸಿ ಕೇವಲ ಕೆಕೆಆರ್‌ಗಷ್ಟೇ ಅಲ್ಲ, ಉಳಿದ ಎದುರಾಳಿಗಳಿಗೂ ಬಲವಾದ ವಾರ್ನಿಂಗ್‌ ಕೊಟ್ಟರು. 53 ಎಸೆತಗಳ ಈ ಅಮೋಘ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 3 ಸಿಕ್ಸರ್‌ ಸೇರಿತ್ತು. ಇದರೊಂದಿಗೆ ಕೆಕೆಆರ್‌ ವಿರುದ್ಧ ಸರ್ವಾಧಿಕ 762 ರನ್‌ ಬಾರಿಸಿದ ದಾಖಲೆ ವಾರ್ನರ್‌ ಅವರದ್ದಾಯಿತು. ಇದಕ್ಕೂ ಹಿಂದಿನ ದಾಖಲೆ ರೋಹಿತ್‌ ಶರ್ಮ ಅವರದ್ದಾಗಿತ್ತು (757).

ಇನ್ನು 15 ರನ್‌ ಬಾರಿಸಿದ್ದರೆ ವಾರ್ನರ್‌ ಐಪಿಎಲ್‌ನಲ್ಲಿ 4 ಶತಕ ಬಾರಿಸಿದ ವಿರಾಟ್‌ ಕೊಹ್ಲಿ, ಶೇನ್‌ ವಾಟ್ಸನ್‌ ಸಾಲಿನಲ್ಲಿ ಕಾಣಿಸಿಕೊಳ್ಳಬಹುದಿತ್ತು. ಇದಕ್ಕೆ 16ನೇ ಓವರಿನಲ್ಲಿ ಆ್ಯಂಡ್ರೆ ರಸೆಲ್‌ ಅಡ್ಡಿಯಾದರು. ಅನಂತರ ಬಂದ ಯೂಸುಫ್ ಪಠಾಣ್‌ ಒಂದೇ ರನ್‌ ಮಾಡಿ ನಿರಾಸೆ ಅನುಭವಿಸಬೇಕಾಯಿತು.

ಆದರೆ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಉತ್ತಮ ಲಯದಲ್ಲಿದ್ದರು. ಎದು ರಾಳಿ ಬೌಲರ್‌ಗಳನ್ನು ನಿರ್ದಯ ವಾಗಿ ದಂಡಿಸುತ್ತ 24 ಎಸೆತಗಳಿಂದ ಅಜೇಯ 40 ರನ್‌ ಬಾರಿಸಿದರು. ಇದರಲ್ಲಿ 2 ಸಿಕ್ಸರ್‌, 2 ಬೌಂಡರಿ ಒಳಗೊಂಡಿತ್ತು. ಇವರೊಂದಿಗೆ ಔಟಾಗದೆ ಉಳಿದವರು ಮನೀಷ್‌ ಪಾಂಡೆ (8). ಕೋಲ್ಕತಾ ಪರ ಆ್ಯಂಡ್ರೆ ರಸೆಲ್‌ 2, ಪೀಯೂಷ್‌ ಚಾವ್ಲಾ ಒಂದು ವಿಕೆಟ್‌ ಕಿತ್ತರು. ಸ್ಪಿನ್ನರ್‌ಗಳಾದ ಸುನೀಲ್‌ ನಾರಾಯಣ್‌, ಕುಲದೀಪ್‌ ಯಾದವ್‌ ಯಶಸ್ಸು ಕಾಣಲಿಲ್ಲ.

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌ ಸಿ ಉತ್ತಪ್ಪ ಬಿ ರಸೆಲ್‌ 85
ಜಾನಿ ಬೇರ್‌ಸ್ಟೊ ಬಿ ಚಾವ್ಲಾ 39
ವಿಜಯ್‌ ಶಂಕರ್‌ ಔಟಾಗದೆ 40
ಯೂಸುಫ್ ಪಠಾಣ್‌ ಬಿ ರಸೆಲ್‌ 1
ಮನೀಷ್‌ ಪಾಂಡೆ ಔಟಾಗದೆ 8
ಇತರ 8
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 181
ವಿಕೆಟ್‌ ಪತನ: 1-118, 2-144, 3-152.
ಬೌಲಿಂಗ್‌: ಎಂ. ಪ್ರಸಿದ್ಧ ಕೃಷ್ಣ 4-0-31-0
ಪೀಯೂಷ್‌ ಚಾವ್ಲಾ 3-0-23-1
ಕಾಲಂ ಫ‌ರ್ಗ್ಯುಸನ್‌ 4-0-34-0
ಸುನೀಲ್‌ ನಾರಾಯಣ್‌ 3-0-29-0
ಕುಲದೀಪ್‌ ಯಾದವ್‌ 2-0-18-0
ಆ್ಯಂಡ್ರೆ ರಸೆಲ್‌ 3-0-32-2
ನಿತೀಶ್‌ ರಾಣ 1-0-9-0

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಸಿ ರಶೀದ್‌ ಬಿ ಶಕಿಬ್‌ 7
ನಿತೀಶ್‌ ರಾಣ ಎಲ್‌ಬಿಡಬ್ಲ್ಯು ರಶೀದ್‌ 68
ರಾಬಿನ್‌ ಉತ್ತಪ್ಪ ಬಿ ಕೌಲ್‌ 35
ದಿನೇಶ್‌ ಕಾರ್ತಿಕ್‌ ಸಿ ಭುವನೇಶ್ವರ್‌ ಬಿ ಸಂದೀಪ್‌ 2
ಆ್ಯಂಡ್ರೆ ರಸೆಲ್‌ ಔಟಾಗದೆ 49
ಶುಭಮನ್‌ ಗಿಲ್‌ ಔಟಾಗದೆ 18
ಇತರ 4
ಒಟ್ಟು (19.4 ಓವರ್‌ಗಳಲ್ಲಿ 4 ವಿಕೆಟಿಗೆ) 183
ವಿಕೆಟ್‌ ಪತನ: 1-7, 2-87, 3-95, 4-118.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-37-0
ಶಕಿಬ್‌ ಅಲ್‌ ಹಸನ್‌ 3.4-0-42-1
ಸಂದೀಪ್‌ ಶರ್ಮ 4-0-42-1
ಸಿದ್ಧಾರ್ಥ್ ಕೌಲ್‌ 4-0-35-1
ರಶೀದ್‌ ಖಾನ್‌ 4-0-26-1
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌

ಭುವನೇಶ್ವರ್‌ ಕುಮಾರ್‌ ನಾಯಕ

ಕೇನ್‌ ವಿಲಿಯಮ್ಸನ್‌ ಗಾಯಾಳಾದ ಕಾರಣ ಸನ್‌ರೈಸರ್ ಹೈದರಾಬಾದ್‌ ತಂಡದ ನಾಯಕತ್ವ ಭುವನೇಶ್ವರ್‌ ಕುಮಾರ್‌ ಪಾಲಾಯಿತು. ಅವರು ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಒಟ್ಟಾರೆಯಾಗಿ ಇದು ಭುವಿಗೆ 2ನೇ ನಾಯಕತ್ವದ ಅನುಭವ. 2016-17ರ ರಣಜಿ ಋತುವಿನಲ್ಲಿ ಅವರು ಮುಂಬಯಿ ವಿರುದ್ಧ ಯುಪಿ ತಂಡದ ನಾಯಕತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next