Advertisement

ಋಣ ಮುಕ್ತ ಅರ್ಜಿ ಸಲ್ಲಿಕೆಗೆ ನೂಕುನುಗ್ಗಲು

12:18 PM Oct 23, 2019 | Suhan S |

ಕೋಲಾರ: ಖಾಸಗಿ ಸಾಲ ಋಣ ಮುಕ್ತ ಕಾಯ್ದೆಯ ಸೌಲಭ್ಯ ಪಡೆಯಲು ಸಹಸ್ರಾರು ಮಂದಿ ಉಪವಿಭಾಗಾಧಿಕಾರಿ ಕಚೇರಿಗೆ ಮುಗಿಬಿದ್ದು ಅರ್ಜಿ ಸಲ್ಲಿಸಿದ್ದಾರೆ. ಖಾಸಗಿ ಸಾಲ ಋಣಮುಕ್ತ ಅರ್ಜಿ ಸಲ್ಲಿಸಲು ಅ.22 ಕೊನೆಯ ದಿನವೆಂದು ಘೋಷಿಸಿದ್ದರಿಂದ ಮಂಗಳವಾರ ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರು ಮೈಲುದ್ದದ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸಿದ್ದಾರೆ.

Advertisement

ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ತಾವು ಅಧಿಕಾರದಿಂದ ಕೆಳಗಿಳಿಯುವ ಮುನ್ನ ಜಾರಿಗೆ ತಂದಿದ್ದ ಈ ಕಾಯ್ದೆಯಡಿ ಸಾರ್ವಜನಿಕರು ಖಾಸಗಿ ಸಾಲದಿಂದ ಋಣಮುಕ್ತರಾಗುವ ಸಲುವಾಗಿ 90 ದಿನಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆರಂಭದಲ್ಲಿ ಹಿಂಜರಿಕೆಯಿಂದಲೇ ಅರ್ಜಿ ಸಲ್ಲಿಸಲು ಬರುತ್ತಿದ್ದ ಜನರು, ಅ.22ರ ವೇಳೆಗೆ ಎಸಿ ಕಚೇರಿಗೆ ಮುಗಿ ಬಿದ್ದು ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಅಷ್ಟರ ಮಟ್ಟಿಗೆ ಜನತೆಗೆ ಈ ಯೋಜನೆಯಡಿ ಋಣಮುಕ್ತರಾಗಲು ಬಯಸುತ್ತಿರುವುದು ಬೆಳಕಿಗೆ ಬರುವಂತಾಗಿತ್ತು.  ಹೀಗೆ ಸ್ಪೀಕರಿಸ ತ್ತಿರುವ ಅರ್ಜಿಗಳನು ಹೇಗೆ ವಿಲೇವಾರಿ ಮಾಡಿ ಜನತೆಯನ್ನು ಖಾಸಗಿ ಸಾಲದಿಂದ ಋಣ ಮುಕ್ತರಾಗಿಸಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಸ್ಪೀಕರಿಸಿದ ಅರ್ಜಿಗಳನ್ನು ಕಚೇರಿಯಲ್ಲಿ ಪೇರಿಸಿಡಲಾಗುತ್ತಿದೆ.

15 ಸಾವಿರ ಅರ್ಜಿ!: ಕೋಲಾರ ಜಿಲ್ಲೆಯಲ್ಲಿ ಕಳೆದ ವಾರಾಂತ್ಯಕ್ಕೆ ಐದು ತಾಲೂಕುಗಳಿಂದ 10 ಸಾವಿರಕ್ಕೂ ಅಧಿಕಅರ್ಜಿಗಳು ಸ್ಪೀಕಾರಗೊಂಡಿದ್ದವು. ಕೊನೆಯ ಮೂರು ದಿನಗಳಲ್ಲಿ ಸಾವಿರಾರು ಮಂದಿ ಎಸಿ ಕಚೇರಿಗೆ ಮುಗಿ ಬಿದ್ದು ಅರ್ಜಿ ಸಲ್ಲಿಸಿದ್ದರಿಂದ ಅರ್ಜಿ ಸಲ್ಲಿಸಿದವರ ಸಂಖ್ಯೆ 15 ಸಾವಿರ ಮುಟ್ಟುವ ಸಾಧ್ಯತೆ ಇದೆ ಎಂದು ಎಸಿ ಕಚೇರಿ ಮೂಲಗಳು ತಿಳಿಸುತ್ತಿವೆ.ಕೋಲಾರ ಜಿಲ್ಲೆಯೊಂದರಲ್ಲಿಯೇ 15 ಸಾವಿರಕ್ಕೂ ಅಧಿಕ ಅರ್ಜಿಗಳು ಖಾಸಗಿ ಸಾಲ ಋಣ ಮುಕ್ತರಾಗಲು ಸಲ್ಲಿಕೆಯಾಗಿದ್ದರೆ ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ.

ಎರಡು ಸಾವಿರ ಖರ್ಚು: ಋಣ ಮುಕ್ತ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳನ್ನು ಕ್ರೋಡೀಕರಿಸಲು ಪ್ರತಿಯೊಬ್ಬರು ಕನಿಷ್ಠವೆಂದರೂ ಎರಡರಿಂದ ಮೂರು ಸಾವಿರ ರೂ. ಅನ್ನು ವ್ಯಯಿಸಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ದೂರದ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಎಸಿ ಕಚೇರಿಗೆಯಲ್ಲಿ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸಲು ಪ್ರಯಾಸ ಪಟ್ಟಿರುವ ಸಾರ್ವಜನಿಕರ ಖಾಸಗಿಸಾಲ ಋಣಮುಕ್ಕ ಆಗುವುದು ಸದ್ಯಕ್ಕೆ ತ್ರಿಶಂಕು ಸ್ಥಿತಿ ಎನ್ನುವಂತಾಗಿದೆ.

ಹೈಕೋರ್ಟ್‌ನಲ್ಲಿ ದಾವೆ: ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೊನೆಯ ದಿನ ಘೋಷಣೆ ಮಾಡಿ ಹೋಗಿದ್ದ ಈ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಹೊಸ ಬಿಜೆಪಿ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಇದರ ಜೊತೆಗೆ ಕೋಲಾರದ 54 ಮಂದಿ ಪಾನ್‌ ಬ್ರೋಕರ್‌ಗಳು ಕಾಯ್ದೆಯಡಿ ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೈಕೋರ್ಟ್‌ನಲ್ಲಿ ರಿಟ್‌ಪಿಟಿಷಿನ್‌ ಸಂಖ್ಯೆ 39415-19 ಅಡಿ ದಾವೆ ಹೂಡಿದ್ದಾರೆ. ಈ ದಾವೆಯಡಿ ಕೆಲವಾರು ಅಂಶಗಳಿಗೆ ತಡೆಯಾಜ್ಞೆ ಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಆದರೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಬಹುದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಜನತೆಯಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಅವಧಿ ಇರುವವರೆಗೂ ಪೂರ್ಣಗೊಳಿಸಿದೆ.

Advertisement

ಪ್ರಸಿದ್ಧ ಕಂಪನಿಗಳು ವ್ಯಾಪ್ತಿಗೆ ಬರುತ್ತಿಲ್ಲ: ಇತ್ತೀಚಿನ ದಿನಗಳಲ್ಲಿ ಬಂಗಾರ ಒಡವೆ ಅಡವಿಟ್ಟು ಸಾಲ ಪಡೆದುಕೊಳ್ಳಿ ಎಂದು ಖ್ಯಾತ ಚಿತ್ರನಟರಿಂದ ಜಾಹೀರಾತು ಕೊಡಿಸಿ ಜನರ ಒಡವೆಗಳನ್ನು ಅಡವಿಟ್ಟುಕೊಂಡಿರುವ ಕಂಪನಿಗಳು ಈ ಖಾಸಗಿ ಋಣ ಮುಕ್ತ ಕಾಯ್ದೆ ವ್ಯಾಪ್ತಿಗೆ ಬರುತ್ತಿಲ್ಲ. ಈ ಕಂಪನಿಗಳು ಆರ್‌ಬಿಐನಿಂದ ಪರವಾನಗಿ ಪಡೆದು ದೇಶಾದ್ಯಂತ ವ್ಯವಹಾರ ಮಾಡುತ್ತಿರುವುದರಿಂದ ಕೇವಲ ರಾಜ್ಯ ಸರ್ಕಾರದಿಂದ ಪರವಾನಗಿ ಪಡೆದು ಗಿರವಿ ಇಟ್ಟುಕೊಳ್ಳುವ ವಹಿವಾಟು ನಡೆಸುತ್ತಿರುವವರು ಮಾತ್ರವೇ ಕಾಯ್ದೆ ವ್ಯಾಪ್ತಿಗೆ ಬರುತ್ತಿರುವುದು ಟೀಕೆಗೆ ಗುರಿಯಾಗಿದೆ. ಈ ಕಾರಣದಿಂದ ನೂರಾರು ಮಂದಿ ಖಾಸಗಿ ಕಂಪನಿಗಳಲ್ಲಿ ಒಡವೆ ಅಡವಿಟ್ಟು ಸಾಲ ಪಡೆದು ಕೊಂಡವರು ಕನಿಷ್ಠ ಅರ್ಜಿ ಸಲ್ಲಿಸುವ ಅವಕಾಶದಿಂದಲೂ ವಂಚಿತವಾಗಿರುವ ಕುರಿತು ಪರಿತಪಿಸುತ್ತಿದ್ದಾರೆ.

ಸಾಲು ಗಿಟ್ಟುತ್ತಿಲ್ಲ: ಸಾಮಾನ್ಯವಾಗಿ ಶತಮಾನ ಗಳಿಂದಲೂ ಬಡವರು ತಮ್ಮಲ್ಲಿದ್ದ ಒಡವೆಯನ್ನು ಅಡವಿಟ್ಟು ತುರ್ತು ಸಂದರ್ಭಗಳಲ್ಲಿ ಸಾಲ ಪಡೆಯುವ ಸಂಪ್ರದಾಯ ಜನಜನಿತವಾಗಿದೆ. ಆದರೆ, ಈಗ ಖಾಸಗಿ ಋಣಮುಕ್ತ ಕಾಯ್ದೆಯಿಂದಾಗಿ ಸ್ಥಳೀಯ ಪಾನ್‌ ಬ್ರೋಕರ್‌ಗಳು ಒಡವೆ ಗಿರವಿ ಇಟ್ಟುಕೊಂಡು ಸಾಲ ನೀಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇದರ ನೇರ ಪರಿಣಾಮ ಬಡಕುಟುಂಬಗಳ ಮೇಲೆ ಬೀಳುವಂತಾಗಿದೆ. ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳು ಕಡುಬಡವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಸುಲಭವಾಗಿ ಸಿಗುತ್ತಿದ್ದ ಗಿರವಿ ಸಾಲಕ್ಕೂ ಕುತ್ತುಬರುವಂತಾಗಿದೆ. ಸಾಮಾನ್ಯವಾಗಿ ಆಸ್ಪತ್ರೆ ವೆಚ್ಚ, ಮಕ್ಕಳ ವಿದ್ಯಾಭ್ಯಾಸ, ವ್ಯವಸಾಯಕ್ಕೆ ಬಡಕುಟುಂಬಗಳು ಈ ರೀತಿಯ ಸಾಲದ ನೆರವು ಬಯಸುತ್ತಿದ್ದರು. ಆದರೆ, ಈಗ ಅದು ಕೈಗೆಟುಕದಂತಾಗಿಬಿಟ್ಟಿದೆ. ಖಾಸಗಿ ಸಾಲ ಋಣಮುಕ್ತ ಕಾಯ್ದೆಯ ಕುರಿತು ಸ್ಪಷ್ಟತೆ ಬರುವವರೆಗೂ ಹೈಕೋರ್ಟ್‌ನಲ್ಲಿರುವ ದಾವೆ ಇತ್ಯರ್ಥವಾಗುವವರೆಗೂ ಯಾವುದೇ ಸಾಲ ನೀಡದಿರಲು ಸ್ಥಳೀಯ ಪಾನ್‌ಬ್ರೋಕರ್‌ಗಳು ನಿರ್ಧರಿಸಿರುವುದು ಜನರ ಸಂಕಷ್ಟಕ್ಕೆ ಕಾರಣವಾಗಿದೆ. ಇದೇ ರೀತಿಯ ನಿಲುವು ಬಡ್ಡಿಗೆ ಸಾಲ ನೀಡುವವರು ತೆಗೆದುಕೊಂಡಿರುವುದು ಇಂತ ಸಾಲದ ಮೇಲೆ ಆಧಾರವಾಗಿರುವ ಕುಟುಂಬಗಳ ಪೀಕಲಾಟಕ್ಕೆ ಕಾರಣವಾಗಿದೆ.

ಕಾಯ್ದೆ ಕೈಗೆಟುಕದ ಕುಸುಮ!: ಬದಲಾದ ಸರ್ಕಾರ, ಕಾಯ್ದೆ ಅನುಷ್ಠಾನಕ್ಕೆ ಆಸಕ್ತಿ ತೋರಿಸದಿರುವ ಬಿಜೆಪಿ ಸರ್ಕಾರ, ಕಾಯ್ದೆಯಡಿ ಪರಿಹಾರ ಬಯಸುತ್ತಿರುವ ಪಾನ್‌ ಬ್ರೋಕರ್‌ಗಳು, ಹೈಕೋರ್ಟ್‌ನಲ್ಲಿರುವ ದಾವೆ, ಲಕ್ಷಾಂತರ ಅರ್ಜಿಗಳ ವಿಲೇವಾರಿ ಹೇಗೆಂದು ದಾರಿ ಕಾಣದಂತಾಗಿರುವ ಜಿಲ್ಲಾಡಳಿತ ಅಧಿಕಾರಿಗಳು…ಇವೆಲ್ಲ ಕಾರಣಗಳಿಂದಾಗಿ ಖಾಸಗಿ ಋಣಮುಕ್ತ ಕಾಯ್ದೆ ತ್ರಿಶಂಕು ಸ್ಥಿತಿಯಲ್ಲಿರುವಂತಾಗಿದೆ. ಸಾರ್ವಜನಿಕರಿಗೆ ಇತ್ತ ತಾವು ಅರ್ಜಿ ಸಲ್ಲಿಸಿದ ಸಾಲದ ಋಣಮುಕ್ತವೂ ಆಗದೆ, ಹೊಸ ಸಾಲವೂ ಸಿಗದಂತ ಪರಿಸ್ಥಿತಿಯಲ್ಲಿ ಸಿಲುಕಿನರಳಾಡುವಂತಾಗಿದೆ.

 

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next