ಭಟ್ಕಳ: ಇನ್ನು ಮುಂದೆ ನೀರಿನ ಲಭ್ಯತೆಯಿಲ್ಲದೇ ಸಾರ್ವಜನಿಕ ನೀರಿನ ಸರಬರಾಜು ಯೋಜನೆ ಮಾಡಿದಲ್ಲಿ ಅದಕ್ಕೆ ಸಂಬಂಧಪಟ್ಟ ಅಭಿಯಂತರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ಅವರು ತಾಪಂ ಸಭಾ ಭವನದಲ್ಲಿ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಹಲವಾರು ಸಂದರ್ಭದಲ್ಲಿ ನೀರಿನ ಟ್ಯಾಂಕ್, ಪೈಪ್‌ಲೈನ್ ಎಲ್ಲವನ್ನು ಮಾಡಲಾಗಿದ್ದು ನೀರಿನ ಲಭ್ಯತೆಯೇ ಇಲ್ಲದೆ ಯೋಜನೆಯೇ ಹಳ್ಳ ಹಿಡಿದಿರುವ ಕುರಿತು ಅವರು ವಿವರಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಕ ಅಭಿಯಂತರ ಫಯಾಜ್ ತಮ್ಮ ಇಲಾಖೆ ವರದಿಯನ್ನು ವಾಚಿಸುವಾಗ ಶಾಸಕ ಸುನೀಲ್ ನಾಯ್ಕ ಅವರು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಯೊಜನೆಯಡಿ ತಾಲೂಕಿನಾದ್ಯಂತ ಕೊಟ್ಯಂತರ ರೂ. ವೆಚ್ಚದಲ್ಲಿ ಟ್ಯಾಂಕಗಳು, ಪೈಪ್‌ಲೈನುಗಳು, ಪಂಪ್ ಹೌಸ್‌ಗಳನ್ನು ನಿರ್ಮಾಣ ಮಾಡಲಾಗಿದ್ದರೂ ಸಹ ಕೆಲವು ಟ್ಯಾಂಕ್ ಮತ್ತು ಪೈಪ್‌ಲೈನ್ ಮತ್ತು ಪಂಪ್ ಹೌಸ್‌ಗಳನ್ನು ನೀರಿನ ಮೂಲಗಳಿಲ್ಲದೆ ನಿರ್ಮಾಣ ಮಾಡಲಾಗಿದೆ. ತಾಲೂಕಿನಲ್ಲಿ ಈವರೆಗೆ ಎರಡು ಮೂರು ಗ್ರಾಪಂಗಳಿಗೆ ಈ ಯೋಜನೆಯನ್ನು ಹಸ್ತಾಂತರಿಸಿದ್ದನ್ನು ಬಿಟ್ಟರೆ ಉಳಿದ ಯೊಜನೆ ವರ್ಷ ಕಳೆದರೂ ಈವರೆಗೂ ಆಯಾ ಗ್ರಾಪಂಗಳಿಗೆ ಹಸ್ತಾಂತರವಾಗಿಲ್ಲ. ಕಳೆದ ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಏರ್ಪಟ್ಟಿತ್ತು. ಆದರೆ ಗ್ರಾಪಂ ಕುಡಿಯುವ ನೀರಿನ ಯೋಜನೆ ಉಪಯೋಗಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸಹಿಸಲು ಸಾಧ್ಯವಿಲ್ಲ. ಯೋಜನೆ ಆದಷ್ಟು ಬೇಗ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ಇದಕ್ಕೆ ಕಾರಣರಾದ ಅಭಿಯಂತರರನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೆಎಸ್‌ಆರ್‌ಟಿಸಿ ಅಧಿಕಾರಿ ಸಭೆಗೆ ಬಾರದೇ ಸಿಬ್ಬಂದಿ ಕಳುಹಿಸಿದ್ದರು. ಯಾವುದೇ ಸೂಕ್ತ ಮಾಹಿತಿ ಇಲ್ಲದ್ದರಿಂದ ಅವರನ್ನು ಸಭೆಯಿಂದ ಹೊರಗೆ ಕಳುಹಿಸಲಾಯಿತು.
ಅರಣ್ಯ ಇಲಾಖೆ ಜಾಗಾದಲ್ಲಿ ಕೇಂದ್ರ ಸರಕಾರದ ಯೋಜನೆಯಡಿ ನಿಲ್ಲಿಸಿದ ವಿದ್ಯುತ್ ಕಂಬ ಕೆಡವಿ ಹಾಕಿದ ಕುರಿತು ವಲಯ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಫ್‌ಒ ಶಂಕರ ಗೌಡಾ ಅರಣ್ಯ ಇಲಾಖೆ ಜಾಗದಲ್ಲಿ ಕಂಬಗಳನ್ನು ಹಾಕುವುದು ಕಾನೂನು ಬಾಹೀರವಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ತಹಶೀಲ್ದಾರ್ ವಿ.ಎನ್. ಬಾಡ್ಕರ್, ತಾಲೂಕು ಪಂಚಾಯತ್ ಇಒ ಪ್ರಭಾಕರ ಚಿಕ್ಕನಮನೆ, ತಾಲೂಕು ಪಂಚಾಯತ್ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಜಿಪಂ ಸದಸ್ಯ ಅಲ್ಬರ್ಟ ಡಿಕೊಸ್ಟ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.