Advertisement

400 ಎಕರೆ ಪ್ರದೇಶದಲ್ಲಿ ಅರಳಿದೆ ಗ್ರಾಮೀಣ ವಿಶ್ವವಿದ್ಯಾಲಯ

06:25 AM Mar 22, 2018 | |

ಹುಬ್ಬಳ್ಳಿ: ಗದಗದಲ್ಲಿ ಆರಂಭವಾಗಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ (ಕೆಎಸ್‌ಆರ್‌ಡಿಪಿಆರ್‌ ವಿವಿ)ದ ನೂತನ ಕಟ್ಟಡ ಮಾ.22ರಂದು ಲೋಕಾರ್ಪಣೆಗೊಳ್ಳಲಿದ್ದು, ಗ್ರಾಮೀಣ ಜನಜೀವನ, ಆರ್ಥಿಕತೆ, ಉದ್ಯಮಶೀಲತೆ, ಕೌಶಲ್ಯತೆ ಹಾಗೂ ಸುಸ್ಥಿರ ಬೆಳವಣಿಗೆಯ ಆಯಾಮಗಳ ಆಶಾಭಾವನೆ ಗರಿಗೆದರುವಂತೆ ಮಾಡಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲರ ಚಿಂತನೆಯ ಫ‌ಲವಾಗಿ ಮೂಡಿದ ಗ್ರಾಮೀಣಾಭಿವೃದ್ಧಿ ವಿವಿ ಪರಿಕಲ್ಪನೆಗೆ 2013-14ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರ್ತ ರೂಪ ನೀಡಿದ್ದರು.

ಅನುಭವಗಳ ವಿನಿಮಯಕ್ಕೆ ಆದ್ಯತೆ: ಗ್ರಾಮೀಣ ವಿವಿ ರೂಪರೇಷೆ,  ಪರಿಣಾಮಕಾರಿ ಹಾಗೂ ಯಶಸ್ವಿ ಪಯಣ ನಿಟ್ಟಿನಲ್ಲಿ ಅಗತ್ಯ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಕ್ಕೆ ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಅವರ ಅಧ್ಯಕ್ಷತೆಯಲ್ಲಿ ಒಟ್ಟು 13 ವಿವಿಧ ಕ್ಷೇತ್ರಗಳ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ತಜ್ಞರ ಸಮಿತಿ ಗ್ರಾಮೀಣ ಬದುಕಿನ ಹಲವು ಮಜಲುಗಳ ಆಧಾರದ ಜತೆಗೆ ಯುವಕರಿಗೆ ತರಬೇತಿ, ಉದ್ಯೋಗ ಸೃಷ್ಟಿ, ಹಳ್ಳಿಗಳ ಆರ್ಥಿಕ ಅಭಿವೃದ್ಧಿ, ಸುಸ್ಥಿರ ಬೆಳವಣಿಗೆ, ಪಂಚಾಯತ್‌ ರಾಜ್‌ ಸಂಸ್ಥೆಗಳ ಬಲವರ್ಧನೆಗೆ ಉಪಯುಕ್ತ ಸಲಹೆ ನೀಡಿತ್ತು. ಮಧುರೈನ ಗಾಂಧಿ ಗ್ರಾಮ, ಅಹ್ಮದಾಬಾದ್‌ನ ಭಾರತೀಯ ವ್ಯವಸ್ಥಾಪನಾ ಸಂಸ್ಥೆ, ನಲ್ಗೊಂಡದ ರಮಾನಂದ ತೀರ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮುಂಬೈನ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ, ಆನಂದದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರ ಕಡೆ ಭೇಟಿ ನೀಡಿ ಅಲ್ಲಿನ ಹಲವು ಮಾಹಿತಿ, ಅನುಭವಗಳನ್ನು ಇಲ್ಲಿನ ಬದುಕಿಗೆ ಪೂರಕವಾಗುವಂತೆ ವರದಿಯಲ್ಲಿ ಅಳವಡಿಸಿತ್ತು.

ಏನೇನು ಕಲಿಯಬಹುದು?: 2017ನೇ ಸಾಲಿನಿಂದ ತನ್ನ ಶೈಕ್ಷಣಿಕ ಕಾರ್ಯ ಆರಂಭಿಸಿರುವ ವಿವಿ, ತಜ್ಞರ ಸಮಿತಿ ವರದಿ ಆಧಾರದಲ್ಲಿ ಕೃಷಿ, ವ್ಯವಹಾರ ವ್ಯವಸ್ಥಾಪನೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥಾಪನಾ ಶಾಲೆ,  ಪರಿಸರ ವಿಜ್ಞಾನ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ವ್ಯವಸ್ಥಾಪನಾ ಶಾಲೆ, ಸಾಮಾಜಿಕ ವಿಜ್ಞಾನ,  ಗ್ರಾಮೀಣ ಪುನಾರಚನೆ, ಕೌಶಲ್ಯತೆ ಮತ್ತು ವಿಜ್ಞಾನ ಉದ್ಯಮಶೀಲತೆ ಅಭಿವೃದ್ಧಿ ಶಾಲೆ ಇನ್ನಿತರ ವಿಭಾಗಗಳನ್ನು ಆರಂಭಿಸಿದೆ.

ಕೃಷಿ, ಕೃಷಿಗೆ ಪೂರಕ ವೃತ್ತಿಗಳು, ಗ್ರಾಮೀಣ ಆರ್ಥಿಕತೆ, ಉದ್ಯಮಶೀಲತೆ ಹಾಗೂ ಕೌಶಲ್ಯತೆ ತರಬೇತಿ, ವಿಶೇಷವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿಸಿದ ಗ್ರಾಮೀಣ ಯುವಕರಿಗೆ ಸರ್ಟಿಫಿಕೇಟ್‌ ಕೋರ್ಸ್‌ಗಳು, ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಸದಸ್ಯರಿಗೆ, ಅಧಿಕಾರಿಗಳಿಗೆ ಅಗತ್ಯ ತರಬೇತಿ, ಪಾರಂಪರಿಕ ಜ್ಞಾನ, ತಂತ್ರಜ್ಞಾನ ಹಾಗೂ ಸ್ಥಳೀಯ ಸಂಪನ್ಮೂಲಗಳ ಸಂಯೋಜಿತ ಪ್ರಯೋಜನಗಳು ಇಲ್ಲಿ ಲಭ್ಯ. ಜತೆಗೆ, ಬಂಕರ್‌ ರಾಯ್‌ ಅವರು ರಾಜಸ್ಥಾನದ ಅಜ್ಮಿàರ್‌ ಜಿಲ್ಲೆಯ ತಿಲೋನಿಯಾ ಹಳ್ಳಿಯಲ್ಲಿ ಸ್ಥಾಪಿಸಿರುವ ಆರ್ಥಿಕ, ಸಾಮಾಜಿಕಾಭಿವೃದ್ಧಿ ಮಾದರಿಯ ಪ್ರಾತ್ಯಕ್ಷಿಕೆ ಕೇಂದ್ರದ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ವಿವಿಯಲ್ಲೂ ಒಂದು ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಸಲಹೆ ನೀಡಲಾಗಿದೆ.

Advertisement

ಗ್ರಾಮೀಣ ಸೊಗಡಿನ ಚಿತ್ರಣ
ಸುಮಾರು 400 ಎಕರೆಯಷ್ಟು ವಿಸ್ತೀರ್ಣದ ಜಾಗದಲ್ಲಿ ವಿಶ್ವವಿದ್ಯಾಲಯ ತಲೆ ಎತ್ತಿದೆ. ಹೆದ್ದಾರಿ ಅಗಲೀಕರಣ ನಿಟ್ಟಿನಲ್ಲಿ ತುಂಡರಿಸಬೇಕಾದ ಹಲವು ಮರಗಳನ್ನು ಸ್ಥಳಾಂತರಿಸುವ ಚಿಂತನೆಯಡಿ ಕೆಲವು ಮರಗಳು ಇದೇ ವಿವಿಯ ಆವರಣಕ್ಕೆ ಸ್ಥಳಾಂತರಗೊಂಡಿವೆ. ಗ್ರಾಮೀಣ ಸೊಗಡಿನ ಚಿತ್ರಣವನ್ನು ವಿವಿ ಹೊಂದಿದೆ. ಡಾ.ಬಿ.ತಿಮ್ಮೇಗೌಡರ ಸಾರಥ್ಯದಲ್ಲಿ ವಿವಿ ಅಂಬೆಗಾಲಿಡಲು ಆರಂಭಿಸಿದೆ.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next