Advertisement

ಗ್ರಾಮೀಣ ಪ್ರತಿಭೆ ವಿಜಯದ ಸಾಧನೆ

04:32 PM Nov 06, 2020 | Karthik A |

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ತುಡಿತ ಬಹುತೇಕ ಯುವಕರಿಗೆ ಇರುತ್ತದೆ.

Advertisement

ಆದರೆ ಅದರಲ್ಲಿ ಕೆಲವರು ಮಾತ್ರ ತಮ್ಮ ಗುರಿಯನ್ನು ತಲುಪಿ ಯಶಸ್ವಿಯಾಗುತ್ತಾರೆ.

ಇನ್ನು ಕೆಲವರಿಗೆ ಬಡತನ, ಸೌಕರ್ಯಗಳ ಕೊರತೆಯಿಂದಾಗಿ ಸಾಧನೆಗೆ ವಿರಾಮ ಹೇಳಿದವರೂ ಉಂಟು. ಇವೆಲ್ಲದರ ಮಧ್ಯೆ ಇಲ್ಲೊಬ್ಬ ಯುವಕ ಬಡತನದ ಜತೆಗೆ ತಾನು ನಂಬಿದ ಕಲೆಯಲ್ಲಿ ಸಾಧನೆಯ ದಾಪುಗಾಲು ಇಟ್ಟು “ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌’ನಲ್ಲಿ ಹೆಸರು ಬರೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ, ಹುನಗುಂದ ತಾಲೂಕಿನ ಹಿರೇ ಬಾದವಾಡಗಿ ಗ್ರಾಮದ ಯುವಪ್ರತಿಭೆ ವಿಜಯ್‌ ರಮೇಶ್‌ ಬೋಳಶೆಟ್ಟಿ ಎಂಬುವರೇ ಈ ಸಾಧಕ.ಇವರು ಚಿತ್ರಕಲಾ ಪ್ರಕಾರಗಳಾದ ರೇಖಾಚಿತ್ರ, ಅಮೂರ್ತ ಕಲೆ, ವ್ಯಂಗ್ಯಚಿತ್ರ, ನಿಸರ್ಗ ಚಿತ್ರ, ವ್ಯಕ್ತಿಚಿತ್ರ, ಸ್ಪೀಡ್‌ ಪೇಂಟಿಂಗ್‌, ಕ್ಲೇ ಮಾಡ್ಲಿಂಗ್‌, ಪೇಪರ್‌ಕ್ರಾಫ್ಟ್ ಹೀಗೆ ಕಲಾ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿ ಅಪಾರ ಕಲಾಭಿಮಾನಿಗಳನ್ನು ಗಳಿಸಿದ್ದಾರೆ.

ಪ್ರಾಥಮಿಕ ಹಂತದಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವುದರಿಂದ ವಿಜಯ್‌ ಅವರು ಪ್ರೌಢ ಶಿಕ್ಷಣದ ಅನಂತರ ಕಲಾ ವಿಷಯವನ್ನೇ ಆಯ್ಕೆ ಮಾಡಿಕೊಂಡು “ಇಲಕಲ್‌’ನ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿ.ವಿ.ಎ. ಪದವಿ ಪಡೆದು, ಅನಂತರ 2017ರಲ್ಲಿ ಸ್ನಾತಕೋತ್ತರ ಎಂ.ವಿ.ಎ ಪದವಿಯನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದಲ್ಲಿ ಪಡೆಯುದರ ಜತೆಗೆ ಡಿಪ್ಲೊಮಾ ಜರ್ನಲಿಸಂ ಪದವಿಯನ್ನು ಕೂಡ ಪಡೆದಿದ್ದಾರೆ.

Advertisement

ಹೆಸರಲ್ಲೇ “ವಿಜಯ’ವಿರುವ ವಿಜಯ್‌ ಬೋಳಶೆಟ್ಟಿಯವರು ಬಡತನವನ್ನೇ ವರವನ್ನಾಗಿಸಿಕೊಂಡು ಬಾಲ್ಯದಿಂದಲೇ ಕಲೆಯಲ್ಲಿ ಕೃಷಿಯನ್ನು ಮಾಡಿದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಿಂದಲೇ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯ ಸಾಧಿಸಿದ್ದಾರೆ. ಸದಾ ಸೃಜನಶೀಲವನ್ನು ರೂಢಿಸಿಕೊಂಡಿರುವ ಇವರು ಕಲೆ ಮತ್ತು ಕಲಾಕೃತಿಗಳ ರಚನೆಯನ್ನು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಕಲಾಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ.

ಕಲೆ, ಸಂಗೀತ, ಸಾಹಿತ್ಯ, ನಾಟಕ, ಸಿನೆಮಾ, ಲೈವ್‌ ಸ್ಪೀಡ್‌ ಪೇಂಟಿಂಗ್‌, ಜಾಕ್‌ ಕರ್ವಿಂಗ್‌, ಫೋಟೋಗ್ರಫಿ, ಹೀಗೆ ಹತ್ತು ಹಲವು ಸಾಂಸ್ಕೃತಿಕ ರಂಗದಲ್ಲಿ ತೊಡಗಿಕೊಂಡಿರುವ ಇವರು ಸೃಜನಶೀಲ ಮತ್ತು ಗ್ರಾಮೀಣ ಬದುಕಿನ ಕಲಾಕೃತಿಗಳಿಂದಲೇ ಜನಮನ್ನಣೆ ಗಳಿಸಿದ್ದಾರೆ. ಇವರ ಈ ಕಲಾ ಸೇವೆಗೆ ರಾಜ್ಯ ಹಾಗೂ ಅಂತಾರಾಜ್ಯ ಪ್ರಶಸ್ತಿಗಳು ಸಂದಿವೆ.

ಪ್ರಶಸ್ತಿ, ಪುರಸ್ಕಾರಗಳು
ರಾಜ್ಯ ಮಟ್ಟದ ಗಣೇಶ ಪೇಂಟಿಂಗ್‌ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಹಾಗೂ ಟಾಪ್‌ ಟೆನ್‌ ಬಹುಮಾನ ಪಡೆದರು. ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ, ಹುನಗುಂದ ತಾ| ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಕಲಾ ಸೇವಾ ಶಿಕ್ಷಕ ರತ್ನ ಪ್ರಶಸ್ತಿ ಸಂದಿವೆ.

ಹೊಸದಿಲ್ಲಿ, ಹೈದರಾಬಾದ್‌, ಕುಪ್ಪಮ್‌, ಗೋವಾ ಸಹಿತ ಮುಂತಾದ ರಾಜ್ಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಗೋವಾದ ಕಲಾ ಪ್ರದರ್ಶನದಲ್ಲಿ ಫ್ರಾನ್ಸ್‌ ಮೂಲದ ಮಹಿಳೆಯೊಬ್ಬಳು ರೈತನ ಮಿತ್ರ ಬಸವಣ್ಣನ ಕಲಾಕೃತಿಗಳನ್ನು 18,000 ರೂ. ಗಳಿಗೆ ಖರೀದಿಸಿದ್ದಾರೆ. “ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌’ ಸಾಧನೆ ಅಲ್ಲದೇ ವಿಜಯ್‌ ಅವರ ಕಲೆಯ ಹಂಬಲವು ಹೊಸದೇನಾದರೂ ಮಾಡಬೇಕೆಂಬುವ ನಿಟ್ಟಿನಲ್ಲಿ ಸತತ ಪರಿಶ್ರಮದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಾಡಿನ ಕುವೆಂಪು, ದ.ರಾ. ಬೇಂದ್ರೆ, ವಿ.ಕೃ. ಗೋಕಾಕ್‌, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಯು.ಆರ್‌. ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಚಂದ್ರಶೇಖರ ಕಂಬಾರ ರ ಭಾವಚಿತ್ರಗಳನ್ನು ಕೇವಲ ಶರ್ಟ್‌ ಬಟನ್‌ ಅಳತೆಯ 8.ಮೀ.ಮೀ. ಪೇಪರ್‌ತುಣುಕಿನಲ್ಲಿ ಪೋಸ್ಟರ್‌ವರ್ಣದಿಂದ ಒಂದೇ ಕೂದಲೆಳೆಯ ಬ್ರಷ್‌ ನಿಂದ ಒಂದು ಚಿತ್ರವನ್ನು ಕೇವಲ 20 ನಿಮಿಷದಲ್ಲಿ ಬಿಡಿಸಿ “ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇಂತಹ ಸಾಧಕರು ನಿಜಕ್ಕೂ ಯುವಕರಿಗೆ ಪ್ರೇರಣೆ. ಹಾಗೂ ಈ ಸಾಧಕನ ಪ್ರತಿಭೆಗೆ ಸರಕಾರ ಮತ್ತಷ್ಟು ಉತ್ತೇಜಿಸಿ ಸಹಕಾರ ನೀಡಲಿ ಎಂಬುದೇ ನಮ್ಮ ಅಭಿಲಾಷೆ.


ಶ್ರೀನಾಥ ಮರಕುಂಬಿ, ಶ್ರೀ ಸಿದ್ದಾರ್ಥ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next